ಸೋಮವಾರ, ಆಗಸ್ಟ್ 26, 2019
27 °C
ಕಿರಾಣಿ ವಸ್ತುಗಳ ಬೆಲೆ ಏರಿಕೆ; ಗ್ರಾಹಕರ ಜೇಬಿಗೆ ಕತ್ತರಿ

ನಾಗಪಂಚಮಿಗೆ ಹೆಚ್ಚಿದ ಧಾರಣೆ ಬಿಸಿ

Published:
Updated:
Prajavani

ವಿಜಯಪುರ: ಎರಡು–ಮೂರು ವರ್ಷಗಳಿಂದ ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧೆಡೆ ಆವರಿಸಿರುವ ಭೀಕರ ಬರದಿಂದಾಗಿ ಕಿರಾಣಿ ಸಾಮಾನುಗಳ ಧಾರಣೆ ಹೆಚ್ಚಳಗೊಂಡಿದ್ದು, ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.

‘ಉತ್ತಮವಾಗಿ ಮಳೆಯಾದರೆ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಮಳೆಯ ಕೊರತೆಯಿಂದ ಅವಶ್ಯಕ ಪ್ರಮಾಣದಲ್ಲಿ ದಿನಸಿ ವಸ್ತುಗಳ ಉತ್ಪನ್ನ ಕುಂಠಿತಗೊಂಡಿರುವುದು ಧಾರಣೆ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರತಿ ವಾರ ₹4–₹5 ಏರಿಕೆ ಆಗುತ್ತಿದೆ’ ಎನ್ನುತ್ತಾರೆ ವ್ಯಾಪಾಸ್ಥರು ಹಾಗೂ ಗ್ರಾಹಕರು.

ಹಿಂದೂಗಳ ದೊಡ್ಡ ಹಬ್ಬಗಳಲ್ಲಿ ನಾಗ ಪಂಚಮಿಯೂ ಒಂದು. ವಿವಿಧ ಬಗೆಯ ಸಿಹಿ ತಿಂಡಿಗಳನ್ನು ಸಿದ್ಧಪಡಿಸಿ ನಾಗಪ್ಪನಿಗೆ ನೈವೇದ್ಯ ಹಿಡಿಯುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಆದರೆ, ಬರಗಾಲ ಇರುವುದರಿಂದ ಜೀವನ ನಡೆಸುವುದೇ ಕಷ್ಟಕರವಾಗಿದ್ದು, ನಾಗಪಂಚಮಿಗೆ ದಿನಸಿ ವಸ್ತುಗಳ ಬೆಲೆ ಏರಿಕೆ ಬಿಸಿ ಮತ್ತಷ್ಟು ಹೈರಣಾಗಿಸಿದೆ.

‘ಪ್ರತಿ ಕೆ.ಜಿ ಕೊಬ್ಬರಿ ₹200, ಹಸಿ ಸೇಂಗಾ ₹104 ಕೆ.ಜಿ, ಹುರಿದ ಸೇಂಗಾ ₹108, ಪುಟಾಣಿ ₹80, ಬೆಲ್ಲ ₹40, ಸಕ್ಕರೆ ₹35, ಮೈದಾ ₹30, ರವಾ ₹30, ತೊಗರಿ ಬೇಳೆ ₹94, ಕಡ್ಲಿ ಬೇಳೆ ₹70, ಎಳ್ಳು ₹200, ಒಣ ದ್ರಾಕ್ಷಿ ₹150 ರಿಂದ ₹200 ಮಾರಾಟ ಮಾಡಲಾಗುತ್ತಿದೆ. ಮಳೆಯ ಕೊರತೆ ಹಿನ್ನೆಲೆ ಅವಶ್ಯಕ ಪ್ರಮಾಣದಲ್ಲಿ ಬೆಳೆಗಳು ಬೆಳೆಯದ ಹಿನ್ನೆಲೆ ದಿನಸಿ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ಹೆಚ್ಚಳದಿಂದ ಗ್ರಾಹಕರ ಖರೀದಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ’ ಎಂದು ಕಿರಾಣಿ ವ್ಯಾಪಾರಿ ರಾಜೀವ ಕರ್ಪೂರಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆದಾಯ ಏನೂ ಬರುತ್ತಿಲ್ಲ. ಪ್ರತಿಯೊಂದು ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಿವೆ. ನಿತ್ಯದ ಜೀವನಕ್ಕೆ ಅವಶ್ಯಕವಾದ ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ನಾಗಪಂಚಮಿಗೂ ಬೆಲೆ ಏರಿಕೆ ಹೊಡೆತ ಕೊಟ್ಟಿದೆ. ಆದರೂ ಸಂಪ್ರದಾಯದಂತೆ ಹಬ್ಬ ಆಚರಿಸಲು ಅಲ್ಪ ಪ್ರಮಾಣದಲ್ಲಿ ಅವಶ್ಯಕ ವಸ್ತುಗಳನ್ನು ಖರೀದಿಸುತ್ತೇವೆ’ ಎಂದು ಗ್ರಾಹಕ ಸಂದೇಶ ಬಿರಾದಾರ ತಿಳಿಸಿದರು.

Post Comments (+)