ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ನಿಂತ ನೀರಾದರೆ ನಷ್ಟ :ಸೋಮಲಿಂಗ ಗೆಣ್ಣೂರು

‘ಮಾತೃಭೂಮಿ’ ಕೃತಿ ಲೋಕಾರ್ಪಣೆ; ಗೆಣ್ಣೂರ ಹೇಳಿಕೆ
Last Updated 26 ಡಿಸೆಂಬರ್ 2019, 16:55 IST
ಅಕ್ಷರ ಗಾತ್ರ

ವಿಜಯಪುರ: ‘ನವೋದಯದ ಪ್ರಭಾವದಿಂದಾಗಿ ಬಿ.ಎಂ.ಶ್ರೀ, ದ.ರಾ.ಬೇಂದ್ರೆ, ಕುವೆಂಪು ಅವರು ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಪಂಪ, ರನ್ನ, ಪೊನ್ನ, ಜನ್ನರ ಕೊಡುಗೆಯೂ ಅಪಾರವಾಗಿದೆ’ ಎಂದು ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರು ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ದತ್ತಿ ಉಪನ್ಯಾಸ’ ಹಾಗೂ ದೇವರ ಗೆಣ್ಣೂರಿನ ಗಣಪತಿ ಚಲವಾದಿ ರಚಿಸಿರುವ ‘ಮಾತೃಭೂಮಿ’ ಕವನ ಸಂಕಲನದ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಆಂಗ್ಲ ಭಾಷೆ ಕಲಿತರೂ, ಕನ್ನಡದ ಪ್ರೀತಿಯನ್ನು ಕಡಿಮೆಮಾಡಿಕೊಳ್ಳಬಾರದು. ಭಾಷೆ ನಿಂತ ನೀರಾಗದೇ ಚಲನೆಯಲ್ಲಿರಬೇಕು. ಒಂದು ವೇಳೆ ಅದು ನಿಂತ ನೀರಾದರೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಕುಸುಮಾಕರ, ಶಂ.ಗು. ಬಿರಾದಾರ, ಮಧುರ ಚನ್ನರ ನುಡಿಗಳು ಜಿಲ್ಲೆಯ ಸಾಹಿತ್ಯಾಸಕ್ತಿಗೆ ಹೊಸ ದಾರಿಯನ್ನು ತೋರಿವೆ’ ಎಂದರು.

ಕೃತಿ ಪರಿಚಯಿಸಿದ ಉಪನ್ಯಾಸಕಿ ಮೀನಾಕ್ಷಿ ಪಾಟೀಲ, ‘ವೃತ್ತಿಗಿಂತ ಪ್ರವೃತ್ತಿಯತ್ತ ಮಿಡಿಯುವುದೇ ರಚನಾತ್ಮಕ ಕ್ರಿಯೆಯಾಗಿದೆ’ ಎಂದರು.

‘ಜನಪದ ಸಾಹಿತ್ಯದಲ್ಲಿ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದ ಡಾ. ಸೋಮಶೇಖರ ವಾಲಿ, ‘ಜಾನಪದ ಕನ್ನಡ ಸಾಹಿತ್ಯದ ಜೀವಾಳವಾಗಿದೆ. ಕನ್ನಡದ ಪ್ರಪ್ರಥಮ ತ್ರಿಪದಿ ಕಪ್ಪೆ ಅರೆಭಟ್ಟನ ಬಾದಾಮಿಯ ಶಾಸನ ಹಾಗೂ ಹಲಸಂಗಿ ಗೆಳೆಯರ ಸಾಹಿತ್ಯದ ಪ್ರೀತಿ ಬಲು ದೊಡ್ಡದು. ಹಂತಿ ಪದಗಳು, ಡೊಳ್ಳಿನ ಪದಗಳು, ಜೋಗುಳ ಪದಗಳು, ಬೀಸುವ ಕಲ್ಲಿನ ಪದಗಳು, ಸೋಬಾನೆ ಪದಗಳು, ಸಂಪ್ರದಾಯದ ಪದಗಳು ಜನಪದರ ಜೀವನಾಡಿಯಾಗಿವೆ’ ಎಂದು ಹೇಳಿದರು.

ವಸುಂಧರಾ ಐನಾಪುರ ಮಾತನಾಡಿ, ‘ನೈತಿಕತೆ ಇಲ್ಲದ ಬದುಕು ಮೌಲ್ಯವಿಲ್ಲದ ಕೃತಿಗಳು ಎರಡೂ ಅರ್ಥಹೀನ. ಒಂದು ಕೃತಿ, ಒಬ್ಬ ಕೃತಿಕಾರನ ಕಲ್ಪನೆ ಓದುಗರ ಕಣ್ಣು ತೆರೆಸುವಂತಿರಬೇಕು’ ಎಂದು ಅಭಿಪ್ರಾಯಪಟ್ಟರು.

ಬಸವರಾಜ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ದತ್ತಿ ಸಿದ್ದರಾಮಪ್ಪ ತೋಟದ, ನೇತಾಜಿ ಗಾಂಧಿ, ಗಣಪತಿ ಚಲವಾದಿ, ಬಿ.ಆರ್‌.ಬನಸೋಡೆ, ಉಮೇಶ ಕಲಗೊಂಡ, ರಂಗನಾಥ ಅಕ್ಕಲಕೋಟೆ, ಎಂ.ಎಲ್.ಬಿರಾದಾರ, ಶಿವಾಜಿ ಮಂಗಳೂರು, ಸೋಮಶೇಖರ ಕತ್ತಿ, ಖಾದ್ರಿ ಇನಾಮದಾರ, ಶಿವಾನಂದ ಕಲ್ಯಾಣಿ, ಎಂ.ಎಸ್‌.ನಿಂಬಾಳ, ಆರ್‌.ಎಚ್‌.ಪಾಟೀಲ, ಗಿರಿಜಾ ಮಾಲಿಪಾಟೀಲ ಇದ್ದರು.

ಶರಣಗೌಡ ಪಾಟೀಲ ಸ್ವಾಗತಿಸಿ, ಸುನಂದಾ ಕಾಖಂಡಕಿ ನಿರೂಪಿಸಿದರು. ಸ್ನೇಹಾ ಮೇಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT