ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ ದಿನಾಚರಣೆ: ಉತ್ಸಾಹ ಕಳೆದುಕೊಂಡ ಕಬ್ಬಿಣ ನಗರಿ

Last Updated 30 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಭದ್ರಾವತಿ: ಕಾರ್ಮಿಕ ನಗರಿ ಭದ್ರಾವತಿ ಮೇ ದಿನಾಚರಣೆಯ ಉತ್ಸಾಹದಲ್ಲಿ ತೇಲುತ್ತಿದ್ದ ದಿನಗಳು ಈಗ ದೂರವಾಗಿ ಕೇವಲ ಸಾಂಕೇತಿಕ ಆಚರಣೆಗೆ ಸೀಮಿತ ಎಂಬ ಪರಿಸ್ಥಿತಿ ಸದ್ಯಕ್ಕಿದೆ.

ಇಲ್ಲಿನ ಎರಡು ಕಣ್ಣುಗಳಾದ ‘ಎಂಪಿಎಂ’ ಹಾಗೂ ‘ವಿಐಎಸ್ಎಲ್’ ಕಾರ್ಖಾನೆಗಳ ಪರಿಸ್ಥಿತಿ ಕ್ಷೀಣಿಸಿದ್ದು, ಸದ್ಯ ವಿಐಎಸ್ಎಲ್ ಉತ್ಪಾದನೆಯ ಅಂತಿಮ ದಿನದಲ್ಲಿ ಕಾಲ ನೂಕುತ್ತಿವೆ. ಎರಡು ದಶಕಗಳ ಹಿಂದೆ ಇದ್ದ ಕಾರ್ಮಿಕರ ಸಂಖ್ಯೆ, ಉತ್ಪಾದನೆಯ ನಿರಂತರತೆ ಹಾಗೂ ಕಾರ್ಮಿಕರ ಹಕ್ಕಿನ ಮಾತುಗಳು ಈಗ ಇಲ್ಲಿ ದೂರವಾಗಿ ಕೇವಲ ಉಳಿವಿಗಾಗಿನ ಕೂಗು ಕೇಳುತ್ತಿವೆ.

ಮೇ ದಿನದಂದು ಎರಡು ಕಾರ್ಖಾನೆಗಳು ಮುಂಭಾಗ ಹಾರುತ್ತಿದ್ದ ಕೆಂಬಾವುಟ, ಕಾರ್ಮಿಕರ ಮೆರವಣಿಗೆ, ಘೋಷಣೆಯ ಸದ್ದು, ಮುಖ್ಯ ರಸ್ತೆಯಲ್ಲಿನ ಕೆಂಪು ಧ್ವಜಗಳ ಹಾರಾಟ ಈಗ ಮಾಯವಾಗಿ ಕೇವಲ ಸಾಂಕೇತಿಕದ ಮಾತುಗಳ ಸದ್ದು ಮಾತ್ರ ನಡೆದಿದೆ.

‘ಎಂಪಿಎಂ ಸಂಪೂರ್ಣ ಮುಚ್ಚಲು ಅವಕಾಶ ಕೋರಿ ಆಡಳಿತ ಮಂಡಳಿ ಸುತ್ತೋಲೆ ಹೊರಡಿಸಿದೆ. ಇದನ್ನೇ ನಂಬಿ ಸ್ವಯಂ ನಿವೃತ್ತಿ ಪಡೆಯದ ಸುಮಾರು 240 ಕಾರ್ಮಿಕರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದ್ದಾರೆ. ಇಷ್ಟಾದರೂ ನಮ್ಮ ಕೂಗು ಮಾತ್ರ ಸರ್ಕಾರದ ಗಮನಕ್ಕೆ ತಾಕುತ್ತಿಲ್ಲ’ಎನ್ನುತ್ತಾರೆ ಬಸವರಾಜಯ್ಯ.

‘ವಿಐಎಸ್ಎಲ್ ಕಾರ್ಖಾನೆ ಸದ್ದು ಕ್ಷೀಣಿಸಿದೆ, ಇರುವಷ್ಟು ಮಂದಿಗೆ ತಿಂಗಳು ಪೂರ್ತಿ ಕೆಲಸ ನೀಡಲು ಆಡಳಿತ ಮಂಡಳಿ ವಿಫಲವಾಗಿವೆ. ತಿಂಗಳಿಗೆ 13 ಕೆಲಸದ ಭರವಸೆ ಮೇಲೆ ಗುತ್ತಿಗೆ ಕಾರ್ಮಿಕರ ಬದುಕು ನಡೆದಿದೆ. ಇದಕ್ಕೆ ಅಂತ್ಯ ಹಾಡಿ ತಿಂಗಳು ಪೂರ್ತಿ ಕೆಲಸ ಸಿಗಬೇಕು ಎಂಬ ಬೇಡಿಕೆಗೆ ಇನ್ನು ಸಮಯ ಕೂಡಿಬಂದಿಲ್ಲ’ ಎನ್ನುತ್ತಾರೆ ಗುತ್ತಿಗೆ ಕಾರ್ಮಿಕರ ಮುಖಂಡ ಸುರೇಶ್.

‘ನಗರದ ಗಡಿ ಭಾಗಕ್ಕೆ ಹೊಂದಿಕೊಂಡತೆ ಇರುವ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು ಸದ್ದು ಜೋರಾಗಿ ಸಾಗಿದ್ದರೂ, ಅಲ್ಲಿಯೂ ನೂರಾರು ಸಮಸ್ಯೆಗಳು ಎದ್ದು ಕಾಣುತ್ತಿವೆ. ಇದರ ಕುರಿತು ಚಕಾರ ಎತ್ತಿದರೆ ಗುತ್ತಿಗೆ ಆಧಾರದ ನೌಕರಿಗೆ ಅಂತ್ಯ ಹಾಡಬೇಕಿದೆ’ಎನ್ನುತ್ತಾರೆ ಗಂಗಾಧರ್.

ಇಲ್ಲಿನ ಎರಡು ಕಾರ್ಖಾನೆಯಲ್ಲಿ ಎಂಪಿಎಂ ಮುಚ್ಚುವ ಹಂತಕ್ಕೆ ಬೇಕಾದ ಸಿದ್ಧತೆ ಪೂರ್ಣ ಮಾಡಿದೆ. ಪೂರ್ಣ ಪ್ರಮಾಣದಲ್ಲಿ ಕಾರ್ಮಿಕರು ಸ್ವಯಂ ನಿವೃತ್ತಿ ಪಡೆಯದೆ ಇರುವುದು ಈ ಕಾರ್ಖಾನೆಯ ಮುಚ್ಚುವಿಕೆಗೆ ಅಡ್ಡಿಯಾಗಿದ್ದು, ಇದಕ್ಕೆ ಸರ್ಕಾರ ಆಡಳಿತ ಮಂಡಳಿಗೆ ಸೂಚನೆ ನೀಡಿದೆ.

ವಿಐಎಸ್ಎಲ್ ಬಂಡವಾಳ ಹಿಂತೆಗೆತ ಭೀತಿಯನ್ನು ಎದುರಿಸುತ್ತಿದೆ. ಇದಕ್ಕೆ ಪರ್ಯಾಯವಾಗಿ ಖಾಸಗಿ, ಇಲ್ಲವೇ ಸರ್ಕಾರಿ, ಖಾಸಗಿ ಆಡಳಿತದ ಸಹಭಾಗಿತ್ವದಲ್ಲಿ ಕಾರ್ಖಾನೆ ಮುನ್ನಡೆಸುವ ಮಾತುಗಳು ನಡೆದಿದೆ. ಇದಕ್ಕೆ ಅಂತ್ಯಹಾಡಿ ಪೂರ್ಣಪ್ರಮಾಣದ ಬಂಡವಾಳ ಸರ್ಕಾರವೇ ಹೂಡಬೇಕು ಎಂಬ ಪ್ರಯತ್ನಗಳು ನಡೆದಿವೆ.

ಒಟ್ಟಿನಲ್ಲಿ ಕಾರ್ಖಾನೆ ನಗರಿ ಸಂಕಷ್ಟದ ಸರಮಾಲೆಯಲ್ಲಿ ದಿನ ದೂಡುತ್ತಿದೆ. ಇದಕ್ಕೆ ಅಗತ್ಯ ಕಾಯಕಲ್ಪ ಕಲ್ಪಿಸುವ ಮಾತುಗಳು, ಪ್ರಯತ್ನಗಳು ನಡೆದಿರುವ ಸಮಯದಲ್ಲಿ ಎದುರಾಗಿರುವ ಮೇ ದಿನಾಚರಣೆ ಕೆಂಪಿನ ಸದ್ದಿಗೆ ದನಿಗೂಡಿಸುವ ಶಕ್ತಿಯನ್ನು ಮಾತ್ರ ಕಾರ್ಮಿಕರು ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT