ಮಂಗಳವಾರ, ನವೆಂಬರ್ 19, 2019
29 °C

ಫೋಕ್ಸೊ ಕಾಯ್ದೆ ಪರಿಣಾಮಕಾರಿ ಜಾರಿ: ರಾಘವೇಂದ್ರ ಔರಾದ್ಕರ್‌

Published:
Updated:
Prajavani

ವಿಜಯಪುರ: ‘ಫೋಕ್ಸೊ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿರುವ ಕರ್ನಾಟಕದ ಕ್ರಮಕ್ಕೆ ಯುನಿಸೆಫ್, ಸುಪ್ರೀಂಕೋರ್ಟ್‌ ಪ್ರಶಂಸೆ ವ್ಯಕ್ತಪಡಿಸಿವೆ’ ಎಂದು ಪೊಲೀಸ್ ಮಹಾನಿರ್ದೇಶಕ, ಪೊಲೀಸ್ ಗೃಹ ನಿರ್ಮಾಣ, ಮೂಲ ಸೌಲಭ್ಯ ನಿಗಮದ ಚೇರಮನ್ ರಾಘವೇಂದ್ರ ಔರಾದ್ಕರ್‌ ಹೇಳಿದರು.

ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮೆಡಿಕೋ ಲೀಗಲ್ ಸೊಸೈಟಿಯ 27ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ರೂಪಿಸಿರುವ ಫೋಕ್ಸೊ ಕಾಯ್ದೆಯನ್ನು ದೇಶದಲ್ಲಿಯೇ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಲಾಗಿದೆ. ಕರ್ನಾಟಕದ ಕ್ರಮಗಳು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿವೆ’ ಎಂದರು.

‘ಋಷಿಮುನಿಗಳ ಕಾಲದಿಂದಲೂ ನಮ್ಮ ಸಂಹಿತೆಗಳಲ್ಲಿ ಅಪರಾಧ ಶಾಸ್ತ್ರದ ಉಲ್ಲೇಖವಿದ್ದು, ಅವುಗಳಿಗೆ ಉಪಾಯಗಳನ್ನು ವಿವರಿಸಲಾಗಿದೆ. ನಾರದ ಸಂಹಿತೆಯಲ್ಲಿ ಕಂಟಕಗಳ (ಕ್ರಿಮಿನಲ್ಸ್) ನಿವಾರಣೆಗೆ ರಾಜಧರ್ಮ ಪಾಲಿಸಲು ಹೇಳಿದ್ದು, ಉತ್ತಮ ವಿಷಯಗಳ ರಕ್ಷಣೆಯೇ ರಾಜಧರ್ಮವಾಗಿದೆ’ ಎಂದು ವ್ಯಾಖ್ಯಾನಿಸಿದರು.

‘ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ಡಕಾಯಿತಿ ಅಪರಾಧ ನಮ್ಮ ಮುಂದಿನ ಬಹುದೊಡ್ಡ ಸವಾಲಾಗಿತ್ತು. ಆದರೆ, ಇಂದು ಸಾಮಾಜಿಕ ಜಾಲತಾಣದ ಟ್ರೋಲಿಂಗ್ ನಮ್ಮ ಇಂದಿನ ಬಹುದೊಡ್ಡ ಸವಾಲಾಗಿದೆ’ ಎಂದರು.

ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ, ‘ಮುಂದಿನ ದಶಕದಲ್ಲಿ ಅಪರಾಧಗಳ ಸ್ವರೂಪ ಬದಲಾಗಲಿದ್ದು, ಬೌದ್ಧಿಕ ಸಂಪತ್ತು (ಡಾಟಾ ಥೆಫ್ಟ್) ಕದಿಯುವವರ ಸಂಖ್ಯೆ ಹೆಚ್ಚಾಗಲಿದ್ದು, ಆ ಬೌದ್ಧಿಕ ಸಂಪತ್ತು ರಕ್ಷಣೆಯೇ ನಮ್ಮ ಮುಂದಿನ ಸವಾಲಾಗಲಿದೆ’ ಎಂದರು.

‘ಬಿಎಲ್‌ಡಿಇ ಸಂಸ್ಥೆಯ ಆಸ್ಪತ್ರೆಯಿಂದ ವಿಷ ಪತ್ತೆ ಹಚ್ಚುವ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ದ್ರಾಕ್ಷಿ ಬೆಳೆಯುವ ನಮ್ಮ ರೈತರು ಸಿಂಪರಣೆಗೆ ಬಳಸುವ ರಾಸಾಯನಿಕಗಳಿಂದಾಗಿ ಉಸಿರಾಟ, ಮೂಗು, ಬಾಯಿ, ಚರ್ಮದ ಮುಖಾಂತರ ವಿಷ ಅವರ ದೇಹ ಸೇರುತ್ತಿದೆ. ಶರೀರದಲ್ಲಿ ಯಾವ ವಿಷ ಸೇರಿದೆ ಎಂಬುದನ್ನು ಪತ್ತೆ ಹಚ್ಚಿದಾಗ ಮಾತ್ರ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಹೀಗಾಗಿ, ವಿಷ ಪತ್ತೆ ಕೇಂದ್ರವನ್ನು ಪ್ರಾರಂಭಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಡಾ.ಉದಯಕುಮಾರ ನುಚ್ಚಿ, ಡಾ.ವಿಜಯ ಮಹಾಂತೇಶ, ಡಾ.ಧರ್ಮರಾಯ ಇಂಗಳೆ ಇದ್ದರು.

ಪ್ರತಿಕ್ರಿಯಿಸಿ (+)