ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಎಸ್‌ ಅಡಿ ಜೋಳ; ವರದಿ ಸಲ್ಲಿಕೆ

Last Updated 27 ಡಿಸೆಂಬರ್ 2019, 16:03 IST
ಅಕ್ಷರ ಗಾತ್ರ

ವಿಜಯಪುರ: ‘ಬಿಳಿ ಜೋಳವನ್ನು ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್‌)ಯಡಿ ತರುವ ಬಗ್ಗೆ ರೈತರೊಂದಿಗೆ ಸಂವಾದ ನಡೆಸಲಾಗುತ್ತಿದ್ದು, ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.

ನಗರ ಹೊರವಲಯದ ಹಿಟ್ಟಿನಹಳ್ಳಿಯಲ್ಲಿರುವ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಬಿಳಿ ಜೋಳವನ್ನು ಸಾರ್ವಜನಿಕ ಪಡಿತರ ವ್ಯವಸ್ಥೆ ಅಡಿ ತರುವ ನಿಟ್ಟಿನಲ್ಲಿ ರೈತರು ಹಾಗೂ ವಿಜ್ಞಾನಿಗಳೊಂದಿಗೆ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದಲ್ಲಿ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ರಾಗಿ ದಕ್ಷಿಣ ಕರ್ನಾಟಕದಲ್ಲಿ ಮಹತ್ವ ಪಡೆದಿದೆ. ರಾಗಿ ಬೆಳೆಗೆ ಸಂಬಂಧಿಸಿದಂತೆ ಈಗಾಗಲೇ ದಕ್ಷಿಣ ಕರ್ನಾಟಕದ 12 ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಜೋಳದ ಮಹತ್ವ, ಮಾರುಕಟ್ಟೆ ವ್ಯವಸ್ಥೆ, ಕನಿಷ್ಠ ಬೆಂಬಲ ಬೆಲೆ, ತಾಂತ್ರಿಕ ಸೌಲಭ್ಯ ಸೇರಿದಂತೆ ಅವಶ್ಯಕ ವರದಿ ರೂಪಿಸಿಲು ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆಸಿ, ರೈತರು ಮತ್ತು ವಿಜ್ಞಾನಿಗಳಿಂದ ಸಲಹೆ, ಸೂಚನೆಗಳನ್ನು ಪಡೆಯಲಾಗುವುದು’ ಎಂದು ಹೇಳಿದರು.

‘ಜೋಳವು ಅಧಿಕ ಪೌಷ್ಟಿಕಾಂಶವುಳ್ಳ, ಮಕ್ಕಳ ಆರೋಗ್ಯಕ್ಕೆ ಅನುಕೂಲಕರವಾಗಿರುವ ಬೆಳೆಯಾಗಿದೆ. ಜೋಳದಿಂದ ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದ್ದರೂ ಈ ಬೆಳೆಯ ಕ್ಷೇತ್ರ ಕಡಿಮೆಯಾಗುತ್ತಿದೆ. ಇಳುವರಿ ಹೆಚ್ಚಿಸಲು ಹಾಗೂ ನಿರ್ದಿಷ್ಟ ಬೆಲೆ ದೊರಕಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

‘ಇತ್ತೀಚಿನ ದಿನಗಳಲ್ಲಿ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದು, ರೈತರಿಗೆ ಬೇಡಿಕೆ ಆಧಾರಿತ ಬೇಸಾಯದ ಬಗ್ಗೆ ಜ್ಞಾನ ನೀಡಬೇಕಾಗಿದೆ. ನಮ್ಮ ತತ್ರಾಂಶ ಮತ್ತು ದತ್ತಾಂಶಗಳನ್ನು ಯುವ ಜನಾಂಗಕ್ಕೆ ತಿಳಿಸಬೇಕಾಗಿದೆ’ ಎಂದರು.

ಕೃಷಿ ಮಹಾವಿದ್ಯಾಲಯದ ಜಿ.ಎಂ.ಸಜ್ಜನವರ ಮಾತನಾಡಿ, ‘ವಿಜಯಪುರ ಹಿಂಗಾರಿ ಜೋಳ ವಿಶ್ವದ ಯಾವ ಭಾಗದಲ್ಲೂ ಸಿಗುವುದಿಲ್ಲ. ಗೋಧಿ ಹಾಗೂ ಅಕ್ಕಿಗಿಂತ ಹೆಚ್ಚು ಪೌಷ್ಟಿಕಾಂಶ, ಕ್ಯಾನ್ಸರ್, ಮಧುಮೇಹ ನಿವಾರಕ ಶಕ್ತಿಯನ್ನು ಹೊಂದಿದೆ. ಈ ಬೆಳೆಯ ಪ್ರದೇಶ ವಿಸ್ತರಣೆ ಜೊತೆಗೆ ಬೆಲೆಯನ್ನೂ ಹೆಚ್ಚಿಸಬೇಕಾಗಿದೆ’ ಎಂದು ಹೇಳಿದರು.

ಬಾಗಲಕೋಟೆ ರೈತ ರವಿ ಸಜ್ಜನ ಹಾಗೂ ಮುದ್ದೇಬಿಹಾಳ ರೈತ ಅರವಿಂದ ಕೊಪ್ಪ ಅವರು, ‘ಜೋಳದ ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಶಿವಕುಮಾರ್ ಮಾತನಾಡಿದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್.ಪಾಟೀಲ, ಎಪಿಎಂಪಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಚಬನೂರ, ಆಹಾರ ಇಲಾಖೆ ಉಪನಿರ್ದೇಶಕಿ ಸುರೇಖಾ, ಕೆ.ಆರ್.ಕುಂಬಾರ ಇದ್ದರು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ 80ಕ್ಕೂ ಹೆಚ್ಚು ರೈತರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT