ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಉಪಚುನಾವಣೆ: ಮತದಾನ ಮಾಡಿದವರಲ್ಲಿ ಪುರುಷರೇ ಹೆಚ್ಚು

ಮತಗಟ್ಟೆಗೆ ಬರಲು ಮಹಿಳೆಯರ ಹಿಂದೇಟು: ಒಬ್ಬ ತೃತೀಯ ಲಿಂಗಿಯಿಂದ ಹಕ್ಕು ಚಲಾವಣೆ
Last Updated 4 ನವೆಂಬರ್ 2018, 20:00 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಆದರೆ ಶನಿವಾರ ನಡೆದ ಉಪ ಚುನಾವಣೆಯಲ್ಲಿ ಮತದಾನ ಮಾಡಿದವರಲ್ಲಿ ಪುರುಷರೇ ಮುಂದಿದ್ದಾರೆ.

ಚುನಾವಣಾ ಆಯೋಗವು ಮಹಿಳೆಯರನ್ನು ಮತಗಟ್ಟೆಗೆ ಸೆಳೆಯುವ ಸಲುವಾಗಿ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಿಂಕ್ ಮತಗಟ್ಟೆಗಳ ಸ್ಥಾಪನೆಯ ಮೂಲಕ ಉತ್ತಮ ವಾತಾವರಣ ಕಲ್ಪಿಸಲು ಯತ್ನಿಸುತ್ತಿದೆ. ಆದಾಗ್ಯೂ ಸಾಕಷ್ಟು ಸ್ತ್ರೀಯರು ಮನೆಗಳಲ್ಲಿಯೇ ಉಳಿದುಕೊಂಡಿದ್ದಾರೆ.

ಮತಗಟ್ಟೆಗೆ ಬರದ ತೃತೀಯ ಲಿಂಗಿಗಳು: ತೃತೀಯ ಲಿಂಗಿ ಮತದಾರರೂ ಮತದಾನಕ್ಕೆ ಆಸಕ್ತಿ ತೋರಿಲ್ಲ. ಕ್ಷೇತ್ರದಲ್ಲಿ ಇಂತಹ 25 ಮತದಾರರು ಇದ್ದಾರೆ. ಅವರಲ್ಲಿ ಒಬ್ಬರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಶೇಕಡವಾರು– ಯಾವುದು ಸತ್ಯ?: ‘ಮತದಾನದ ಕಡೆಯ ಒಂದು ಗಂಟೆ ಅವಧಿಯಲ್ಲಿ ಅತಿಹೆಚ್ಚು ಮಂದಿ ಮತ ಚಲಾಯಿಸಿದ್ದು, ಇಲ್ಲಿ ಅಕ್ರಮ ನಡೆದಿದೆ’ ಎಂದು ಬಿಜೆಪಿ ಆರೋಪಿಸಿದೆ.

ಕ್ಷೇತ್ರದಾದ್ಯಂತ ಬೆಳಗ್ಗೆ ಮತದಾರರು ನಿರುತ್ಸಾಹ ತೋರಿದ್ದು, ಮಧ್ಯಾಹ್ನದ ನಂತರ ಮತದಾನ ಚುರುಕಾಗಿರುವುದು ನಿಜ. ಆದರೆ ಬಿಜೆಪಿ ಆರೋಪಿಸುವಂತೆ ಕಡೆಯ ಒಂದು ಗಂಟೆ ಅವಧಿಯಲ್ಲಿ ಶೇ 20ರಷ್ಟು ಮತದಾನ ನಡೆದಿಲ್ಲ ಎನ್ನುತ್ತವೆ ಅಂಕಿ–ಅಂಶಗಳು.

ಚುನಾವಣಾ ಅಧಿಕಾರಿಗಳು ಪ್ರತಿ ಎರಡು ಗಂಟೆಗೆ ಒಮ್ಮೆ ಮತದಾನದ ಶೇಕಡವಾರು ಪ್ರಮಾಣವನ್ನು ಮಾಧ್ಯಮಗಳಿಗೆ ನೀಡಿದ್ದರು. ಅದರಂತೆ ಬೆಳಿಗ್ಗೆ 9ಕ್ಕೆ ಶೇ 8, 11 ಗಂಟೆ ವೇಳೆಗೆ ಶೇ 16 ಹಾಗೂ ಮಧ್ಯಾಹ್ನದ 1 ಗಂಟೆ ವೇಳೆಗೆ ಶೇ 40ರಷ್ಟು ಮತದಾನ ನಡೆದಿದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗಿನ ಅವಧಿಯಲ್ಲಿ ಶೇ 24 ಮಂದಿ ಮತ ಚಲಾವಣೆ ಮಾಡಿದ್ದಾರೆ.

ಅಂತೆಯೇ ಮಧ್ಯಾಹ್ನ 3ರ ವೇಳೆಗೆ ಶೇ 54.74, ಸಂಜೆ 5ರ ವೇಳೆಗೆ ಶೇ 67 ಹಾಗೂ ಅಂತಿಮವಾಗಿ ಶೇ 71.56ರಷ್ಟು ಮತದಾನ ನಡೆದಿದೆ.

ವಿದೇಶಕ್ಕೆ ತೆರಳಿದರಾ ಚಂದ್ರಶೇಖರ್‌?

ಮತದಾನದ ನಂತರದ ದಿನವಾದ ಭಾನುವಾರ ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಬೆಂಗಳೂರಿನ ನಿವಾಸದಲ್ಲಿ ವಿರಮಿಸಿದರು. ಕಳೆದ 15 ದಿನಗಳಿಂದ ನಿರಂತರ ಕ್ಷೇತ್ರ ಸುತ್ತಿದ್ದ ಅವರು ಅದರಿಂದ ಸಾಕಷ್ಟು ಬಳಲಿದ್ದರು. ಗೆಲುವಿನ ಭರವಸೆಯೊಂದಿಗೆ ವಾರಾಂತ್ಯ ಕಳೆದರು.

ಬಿಜೆಪಿ ಅಭ್ಯರ್ಥಿ ಎಲ್‌. ಚಂದ್ರಶೇಖರ್ ಕಣದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ ದಿನದಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಮೊಬೈಲ್‌ ಕೂಡ ಸ್ವಿಚ್ ಆಫ್‌ ಆಗಿದೆ. ಅವರು ವಿದೇಶ ಪ್ರವಾಸ ತೆರಳಿದ್ದು, ಬ್ಯಾಂಕಾಕ್‌ಗೆ ಹೋಗಿರಬಹುದು ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.

ಚುನಾವಣೆಯಲ್ಲಿ ಅನಿತಾ ಅವರೊಟ್ಟಿಗೆ ಸಂಸದ ಡಿ.ಕೆ. ಸುರೇಶ್ ಸಹ ಹೆಚ್ಚು ಪ್ರಚಾರ ನಡೆಸಿದ್ದರು. ಅವರೂ ಭಾನುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿಯ ಮೊರೆ ಹೋದರು. ಬಳ್ಳಾರಿ ಚುನಾವಣೆಯ ಉಸ್ತುವಾರಿಗೆ ತೆರಳಿದ್ದ ವಿಧಾನಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಬಿಡದಿಗೆ ವಾಪಸ್ ಆಗಿದ್ದು, ಇಟ್ಟಮಡುವಿನ ಮನೆಯಲ್ಲಿದ್ದರು.

ಇನ್ನೂ ಕ್ಷೇತ್ರ ವ್ಯಾಪ್ತಿಯ ಪಕ್ಷೇತರ ಅಭ್ಯರ್ಥಿಗಳು ತಮ್ಮ ಊರುಗಳಲ್ಲಿ ಉಳಿದು ಪಡೆಯಬಹುದಾದ ಮತಗಳ ಲೆಕ್ಕಾಚಾರದಲ್ಲಿ ತೊಡಗಿದ್ದರು.

ಮತಯಂತ್ರಗಳಿಗೆ ಭದ್ರತೆ
ಉಪ ಚುನಾವಣೆಯ 277 ಮತಗಟ್ಟೆಗಳಲ್ಲಿ ಮತದಾನಕ್ಕೆ ಬಳಸಿದ ಯಂತ್ರಗಳನ್ನು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಇಡಲಾಗಿದೆ.

ಅರೆಸೇನಾ ಪಡೆಯ ಸಿಬ್ಬಂದಿಯು ದಿನದ 24 ತಾಸು ಈ ಕೊಠಡಿಗಳಿಗೆ ಭದ್ರತೆ ಒದಗಿಸಿದ್ದಾರೆ. ಜಿಲ್ಲಾಧಿಕಾರಿ ಕೆ. ರಾಜೇಂದ್ರ ಹಾಗೂ ಚುನಾವಣಾ ಅಧಿಕಾರಿ ಕೃಷ್ಣಮೂರ್ತಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ 6ರಂದು ಬೆಳಿಗ್ಗೆ 8ರಿಂದ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯವು ನಡೆಯಲಿದೆ.

ಅಂಕಿ–ಅಂಶ

* 1,03,717–ಕ್ಷೇತ್ರದಲ್ಲಿನ ಪುರುಷ ಮತದಾರರು
* 74,012–ಮತ ಚಲಾಯಿಸಿದವರು
* ಶೇ 72.16–ಪುರುಷ ಮತದಾನದ ಪ್ರಮಾಣ

* 1,03,717–ಮಹಿಳಾ ಮತದಾರರು
* 73,612–ಮತ ಚಲಾಯಿಸಿದವರು
* ಶೇ 70.97–ಮಹಿಳೆಯರ ಮತದಾನ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT