5 ದಿನ ಎನ್‌ಐಎ ವಶಕ್ಕೆ ಉಗ್ರ

7

5 ದಿನ ಎನ್‌ಐಎ ವಶಕ್ಕೆ ಉಗ್ರ

Published:
Updated:
Deccan Herald

ರಾಮನಗರ: ಇಲ್ಲಿನ ಟ್ರೂಪ್‌ಲೈನ್‌ ಪ್ರದೇಶದಲ್ಲಿ ಭಾನುವಾರ ರಾತ್ರಿ ಬಂಧಿತನಾದ ಶಂಕಿತ ಉಗ್ರ ಮೊಹಮ್ಮದ್‌ ಜಹಿದುಲ್‌ ಇಸ್ಲಾಂನನ್ನು (38) ರಾಷ್ಟ್ರೀಯ ತನಿಖಾ ದಳವು ಬೆಂಗಳೂರಿನಲ್ಲಿನ ವಿಶೇಷ ನ್ಯಾಯಾಲಯದ ಮುಂದೆ ಮಂಗಳವಾರ ಹಾಜರು
ಪಡಿಸಿತು. ನ್ಯಾಯಾಧೀಶರು ಆರೋಪಿಯನ್ನು 5 ದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಿದರು ಎಂದು ತಿಳಿದುಬಂದಿದೆ.

ಆರೋಪಿಯು ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್ ಸಂಘಟನೆ ಸದಸ್ಯನಾಗಿದ್ದು, ಭಾರತದಲ್ಲಿ ಅದರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ. 2013ರಲ್ಲಿ ಬುದ್ಧಗಯಾದ ಮಂದಿರದಲ್ಲಿ ನಡೆದ ಬಾಂಬ್ ಸ್ಫೋಟದ ರೂವಾರಿಯಾಗಿದ್ದ. ಆತನ ಅಣತಿಯಂತೆ ಮುಸ್ತಫಿಜುರ್‌ ರೆಹಮಾನ್‌ ಎಂಬಾತ ಸ್ಫೋಟಕಗಳನ್ನು ತಯಾರಿಸಿಕೊಟ್ಟಿದ್ದ ಎಂದು ಆರೋಪಿಸಲಾಗಿದೆ.

ಇದಲ್ಲದೆ ಬರ್ದ್ವಾನ್‌ ಸ್ಫೋಟ ಪ್ರಕರಣ ಹಾಗೂ ಬಾಂಗ್ಲಾದೇಶದಲ್ಲಿನ ವಿವಿಧ ಸ್ಫೋಟ ಪ್ರಕರಣಗಳಲ್ಲಿ ಈತ ಆರೋಪಿ ಎನ್ನಲಾಗಿದೆ.

ಸ್ಫೋಟದ ಉದ್ದೇಶವಿತ್ತೆ?: ರಾಮನಗರದಲ್ಲಿ ಆರೋಪಿ ಮನೆಯಿಂದ ಸ್ಫೋಟಕ ಸಾಮಗ್ರಿ ವಶಪಡಿಸಿಕೊಂಡಿರುವುದನ್ನು ಎನ್ಐಎ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇದಲ್ಲದೆ ಟ್ಯಾಬ್, ಮೊಬೈಲ್‌ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳೂ ಸಿಕ್ಕಿರುವುದಾಗಿ ಹೇಳಿದ್ದಾರೆ. ಇವುಗಳಲ್ಲಿ ರಾಜ್ಯದ ಕೆಲವು ದೇವಸ್ಥಾನಗಳ ಚಿತ್ರಗಳು ಹಾಗೂ ಬೆಂಗಳೂರಿನ ಭೂಪಟ ದೊರೆತಿದೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಆರೋಪಿಗೆ ರಾಜ್ಯದಲ್ಲಿ ದುಷ್ಕೃತ್ಯಗಳನ್ನು ನಡೆಸುವ ಉದ್ದೇಶವೂ ಇತ್ತೇ ಎಂದು ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಬೇರೆ ಬೇರೆ ಹೆಸರು: ಆರೋಪಿಯು ಬೇರೆ ಬೇರೆ ಹೆಸರುಗಳಿಂದ ತನ್ನನ್ನು ಗುರುತಿಸಿಕೊಂಡಿದ್ದಾನೆ. ಕೌಸರ್‌, ಮುನ್ನಾ, ಮಿಜಾನ್‌, ಬೊಮಾ ಮಿಯಾನ್‌... ಹೀಗೆ ಹಲವು ಹೆಸರುಗಳಿವೆ. ಕೇರಳದ ಮಲಪ್ಪುರಂನ ಬಾಂಗ್ಲಾ ಕಾರ್ಮಿಕ ಕ್ಯಾಂಪ್‌ನಿಂದ ಆಗಸ್ಟ್‌ 3ರಂದು ಪೊಲೀಸರು ಬಂಧಿಸಿರುವ ಇಬ್ಬರ ಜತೆ ಇಸ್ಲಾಂ ಸಂಪರ್ಕ ಹೊಂದಿದ್ದ ಎಂದು ವಿಚಾರಣೆಯಿಂದ ಗೊತ್ತಾಗಿದೆ.

ಸದ್ಯ ಆರೋಪಿಯನ್ನು ಎನ್‌ಐಎ, ಕೇಂದ್ರ ಗುಪ್ತಚರ ದಳದ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ. ನಂತರದಲ್ಲಿ ಆತನನ್ನು ಬಿಹಾರದ ಪಾಟ್ನಾದಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !