ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಲು ಒತ್ತಾಯಿಸಿ ಪಾದಯಾತ್ರೆ

7
ವರದಾಮೂಲ ಗ್ರಾಮದಿಂದ ಸಾಗರದವರೆಗೆ

ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಲು ಒತ್ತಾಯಿಸಿ ಪಾದಯಾತ್ರೆ

Published:
Updated:
Deccan Herald

ಸಾಗರ: ತಾಲ್ಲೂಕಿನ ವರದಾಮೂಲದ ಹಾಲು ಒಕ್ಕೂಟದ ವತಿಯಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡುವಂತೆ ಒತ್ತಾಯಿಸಿ ಸೋಮವಾರ ವರದಾಮೂಲದಿಂದ ಸಾಗರದವರೆಗೆ (7 ಕಿ.ಮೀ.) ಪಾದಯಾತ್ರೆ ನಡೆಯಿತು.

ವರದಾಮೂಲ ಗ್ರಾಮದ ವರದಾಂಬಿಕೆ ದೇವಸ್ಥಾನದಿಂದ ಹೊರಟ ಪಾದಯಾತ್ರೆ ಚಿಪ್ಪಳಿ ಗ್ರಾಮದ ಮೂಲಕ ಸಾಗರ ನಗರವನ್ನು ಪ್ರವೇಶಿಸಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಉಪವಿಭಾಗಾಧಿಕಾರಿ ಕಚೇರಿ ತಲುಪಿತು.

ಬಹಿರಂಗ ಸಭೆಯಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ಮಾತನಾಡಿ, ‘ಕೆಎಂಎಫ್ ಅಗತ್ಯಕ್ಕಿಂತ ಹೆಚ್ಚಿನ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿದೆ. ಇಂತಹ ಅನಗತ್ಯ ವೆಚ್ಚವನ್ನು ಕಡಿವಾಣ ಮಾಡುವ ಮೂಲಕ ಹಾಲು ಉತ್ಪಾದಕರಿಗೆ ಹೆಚ್ಚಿನ ದರ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ‘ಸರ್ಕಾರ 1 ಲೀ.ಗೆ ₹ 27 ದರವನ್ನು ಹಾಲು ಉತ್ಪಾದಕರಿಗೆ ನೀಡಬೇಕು ಎಂದು ನಿಗದಿ ಮಾಡಿದೆ. ಆದರೆ ಏಕಾಏಕಿಯಾಗಿ ಈ ದರವನ್ನು ₹ 20.50 ಗೆ ಇಳಿಸಿರುವುದು ಸರಿಯಲ್ಲ. ಹಾಲು ಉತ್ಪಾದಕರಿಂದ ಖರೀದಿಸಿದ ಹಾಲನ್ನು ಲೀ.ಗೆ ₹ 42 ರಂತೆ ಮಾರಾಟ ಮಾಡಲಾಗುತ್ತಿದೆ. ಇದು ಹಾಲು ಉತ್ಪಾದಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ’ ಎಂದು ದೂರಿದರು.

ವರದಾಮೂಲ ಹಾಲು ಒಕ್ಕೂಟದ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್ ಮಾತನಾಡಿ, ‘ಹಾಲು ಉತ್ಪಾದಕರಿಗೆ ನೀಡುತ್ತಿದ್ದ ದರವನ್ನು ಕಡಿತ ಮಾಡುವ ಜೊತೆಗೆ ಐದು ತಿಂಗಳುಗಳಿಂದ ನೀಡಬೇಕಾದ ಸಹಾಯಧನವನ್ನೂ ಬಿಡುಗಡೆ ಮಾಡಿಲ್ಲ. ಹೀಗಾದರೆ ಹೈನುಗಾರಿಕೆ ನಡೆಯುವುದು ಕಷ್ಟ. ಹಾಲು ಉತ್ಪಾದಕರ ಬೇಡಿಕೆಗಳಿಗೆ ಸ್ಪಂದನೆ ಸಿಗದೆ ಇದ್ದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಹಾಲು ಒಕ್ಕೂಟದ ಪ್ರಮುಖರಾದ ವರದಾಭಟ್, ನಾಗೇಂದ್ರ ಸಾಗರ್, ಶ್ರೀಕಾಂತ್ ದೀಕ್ಷಿತ್, ಶ್ರೀಧರ್ ಭಟ್, ಪ್ರಭಾವತಿ, ಶಾಂತಲಾ, ಭಾರತಿ, ಉಮಾ, ತಿಮ್ಮಪ್ಪ ವರದಾಮೂಲ, ಎಲ್.ವಿ. ಅಕ್ಷರ, ಮಂಜುನಾಥ ಶೆಟ್ಟಿ, ಸುಬ್ರಾವ್ ಚಿಪ್ಪಳಿ, ತೋಟಗಾರ್ಸ್ ಸೊಸೈಟಿ ಅಧ್ಯಕ್ಷ ಕೆ.ಸಿ. ದೇವಪ್ಪ, ಟಿ.ಡಿ.ಮೇಘರಾಜ್, ಚೇತನ್ ರಾಜ್ ಕಣ್ಣೂರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !