ಕನಿಷ್ಠ ವೇತನ, ಸೌಲಭ್ಯಕ್ಕೆ ಒತ್ತಾಯ

7
ಕಂದಾಯ ಭವನದ ಎದುರು ಬಿಸಿಯೂಟ ತಯಾರಕರ ಪ್ರತಿಭಟನೆ

ಕನಿಷ್ಠ ವೇತನ, ಸೌಲಭ್ಯಕ್ಕೆ ಒತ್ತಾಯ

Published:
Updated:
Deccan Herald

ರಾಮನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ನ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಇಲ್ಲಿನ ಕಂದಾಯ ಭವನದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದನ್ನು ನೆಪ ಮಾಡಿಕೊಂಡು ಬಿಸಿಯೂಟ ತಯಾರಕರನ್ನು ಕೆಲಸದಿಂದ ತೆಗೆಯಬಾರದು. ಬಿಸಿಯೂಟ ತಯಾರಿಕರಿಗೆ ರಾಜ್ಯ ಸರ್ಕಾರ ತಿಂಗಳಿಗೆ ಕನಿಷ್ಠ ₨10,500 ವೇತನ ನೀಡಬೇಕು.

ಕೆಲಸದ ಭದ್ರತೆ, ಜೀವನ ಭದ್ರತೆಗಾಗಿ ತಮಿಳುನಾಡಿನ ಮಾದರಿಯಲ್ಲಿ ಸವಲತ್ತುಗಳನ್ನು ಜಾರಿಗೆ ತರಬೇಕು. ಪಿ.ಎಫ್, ಇ.ಎಸ್.ಐ ಸೌಲಭ್ಯಗಳನ್ನು ಜಾರಿಗೆ ತರಬೇಕು. ಗುಣಮಟ್ಟದ ಆಹಾರ ಪೂರೈಸಬೇಕು ಎಂದು ತಿಳಿಸಿದರು.

60 ವರ್ಷ ಆದ ಬಿಸಿಯೂಟ ತಯಾರಕರನ್ನು ಕೆಲಸದಿಂದ ಬಿಡುಗಡೆಗೊಳಿಸಿದಾಗ ಅವರಿಗೆ ₨2ಲಕ್ಷ ಇಡಗಂಟು ನೀಡಬೇಕು. ಮಾಸಿಕ ₨3 ಸಾವಿರ ನಿವೃತ್ತಿ ಪಿಂಚಣಿ ನೀಡಬೇಕು. ಬಿಸಿಯೂಟ ತಯಾರಕರು ಯಾವುದೇ ರೀತಿ ಮರಣ ಹೊಂದಿದ್ದಲ್ಲಿ ₨2ಲಕ್ಷ ಪರಿಹಾರ ಹಾಗೂ ಅಂತ್ಯಕ್ರಿಯೆಗೆ ₨20 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.

ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಿರುವ ಗುತ್ತಿಗೆಯನ್ನು ರದ್ದುಗೊಳಿಸಿ ಸರ್ಕಾರದ ಕೈಪಿಡಿಯಲ್ಲಿರುವಂತೆ ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಿ ಬಡಿಸಬೇಕು. ದಸರಾ ರಜೆ ಮತ್ತು ಬೇಸಿಗೆ ರಜೆಯ ಸಂಬಳ ಕೊಡಬೇಕು ಎಂದರು.

ಕೈಪಿಡಿಯಲ್ಲಿರುವಂತೆ 10 ದಿನಗಳ ರಜೆಯನ್ನು 20 ದಿನಗಳಿಗೆ ವಿಸ್ತರಿಸಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಬಿಸಿಯೂಟ ತಯಾರಕರಿಗೆ ₨5ಲಕ್ಷ ವಿಮಾ ಯೋಜನೆಯನ್ನು ಶಿಕ್ಷಣ ಇಲಾಖೆಯಿಂದ ಅನುಷ್ಠಾನಗೊಳಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಆರ್. ಪ್ರಶಾಂತ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ಜಿಲ್ಲಾಸಮಿತಿಯ ಪದಾಧಿಕಾರಿಗಳಾದ ಎಚ್. ನಿರ್ಮಲಾ, ಎಂ. ಲತಾ, ರೋಸ್‌ಮೇರಿ, ಶಂಭುಗೌಡ, ಪಟೇಲ್‌ರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !