ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗೆ ಭೇಟಿ | ನೆಲದ ಮೇಲೆ ಕುಳಿತು ‘ಆರೋಗ್ಯ’ ವಿಚಾರಿಸಿದ ಸಚಿವ ಶ್ರೀರಾಮುಲು

Last Updated 30 ಆಗಸ್ಟ್ 2019, 10:35 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿಯ ಅಥಣಿ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಸಿಬ್ಬಂದಿಗಳಲ್ಲಿ ಸಂಚಲನ ಮೂಡಿಸಿದರು.

ಆಸ್ಪತ್ರೆ ಆವರಣದಲ್ಲಿರುವ ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಗೆ ಭೇಟಿ ನೀಡಿದ ಅವರು, ನೆಲದ ಮೇಲೆ ಕುಳಿತುಕೊಂಡು ಗರ್ಭಿಣಿಯರು, ಬಾಣಂತಿಯರ ಆರೋಗ್ಯ ವಿಚಾರಿಸಿದರು. ಅವರಿಗೆ ಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

‘ಜಿಲ್ಲಾ ಆಸ್ಪತ್ರೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಬಾಣಂತಿಯರ ಆರೈಕೆದಾರರಿಗೆ ಬಿಸಿನೀರು, ಸ್ನಾನಗೃಹ, ಶೌಚಾಲಯ ಸೌಲಭ್ಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

‘ಆಸ್ಪತ್ರೆ ಆವರಣದಲ್ಲಿ ಜನೌಷಧಿ ಮಳಿಗೆಯನ್ನು ಶೀಘ್ರವೇ ಆರಂಭಿಸಲಾಗುವುದು. ಇದೇ ರೀತಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಮಳಿಗೆ ಆರಂಭಿಸಲು ಕ್ರಮಕೈಗೊಳ್ಳಲಾಗುವುದು. ಈ ಹಿಂದೆಯೂ ನಾನು ಆರೋಗ್ಯ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಪಾಲಿಗೆ ಬಡವರ ಕೆಲಸ ದೇವರ ಕೆಲಸ. ಹೀಗಾಗಿ, ನನ್ನ ಅವಧಿಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತೇನೆ’ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಶಸ್ತ್ರಚಿಕಿತ್ಸಕ ಡಾ.ಶರಣಪ್ಪ ಕಟ್ಟಿ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್‌ಒ) ಡಾ.ಮಹೇಂದ್ರ ಕಾಪಸೆ ಅವರಿಂದ ಮಾಹಿತಿ ಪಡೆದುಕೊಂಡರು.

‘ಪ್ರವಾಹ ಸಂತ್ರಸ್ತರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಮತ್ತು ಅವರಿಗೆ ಅಗತ್ಯ ಚಿಕಿತ್ಸೆ ನೀಡಬೇಕು’ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಇದಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ‘ನಾನು ಸಚಿವನಾಗಿ ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಬಗ್ಗೆ ಚರ್ಚಿಸುತ್ತೇನೆ’ ಎಂದರು.

‘108’ ಆಂಬುಲೆನ್ಸ್‌ ಚಾಲಕರು ರೋಗಿಗಳ ಸಂಬಂಧಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವಿದೆಯಲ್ಲ’ ಎಂಬ ಪ್ರಶ್ನೆಗೆ, ‘ವ್ಯವಸ್ಥೆ ಬಹಳಷ್ಟು ಕೆಟ್ಟಿದೆ. ಹಂತ ಹಂತವಾಗಿ ಎಲ್ಲವನ್ನೂ ಸರಿಪಡಿಸಲಾಗುವುದು. ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡುತ್ತೇನೆ. ಮೂಲಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ವಿಜುಗೌಡ ಪಾಟೀಲ, ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT