ಶುಕ್ರವಾರ, ನವೆಂಬರ್ 22, 2019
19 °C

ನೋಟಿಸ್‌ಗೆ ಉತ್ತರ; ಎರಡುದಿನದಲ್ಲಿ ತಿಳಿಸುವೆ: ಯತ್ನಾಳ

Published:
Updated:

ವಿಜಯಪುರ: ‘ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೀಡಿರುವ ಶೋಕಾಸ್ ನೋಟಿಸ್‌ಗೆ ಉತ್ತರ ನೀಡುವ ಬಗ್ಗೆ ಎರಡು ದಿನಗಳಲ್ಲಿ ತಿಳಿಸುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇನೆ. ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ’ ಎಂದರು.

‘ಮೂರೂವರೆ ವರ್ಷ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ ಎಂಬ ನನ್ನ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದಾರೆ. ಬಿಎಸ್‌ವೈ ಮುಂದುವರಿಯಲಿ ಎಂಬುದು ಅವರ ಆಶಯವೂ ಆಗಿದೆ. ಅಧಿವೇಶನದಲ್ಲಿ ಬಜೆಟ್ ಅಂಗೀಕಾರಕ್ಕೆ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸಹಕಾರ ನೀಡಿದ್ದಾರೆ’ ಎಂದು ತಿಳಿಸಿದರು.

‘ಬಿಜೆಪಿ ಕಚೇರಿಯಿಂದ ಯಡಿಯೂರಪ್ಪ ಬೆಂಬಲಿಗರು, ಲಿಂಗಾಯಿತರನ್ನು ಹೊರ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಸುಸಂಸ್ಕೃತ ವ್ಯಕ್ತಿಯಾಗಿದ್ದಾರೆ. ತಪ್ಪು ಕಲ್ಪನೆಯಿಂದ ಏನೋ ನಡೆದಿರಬಹುದು. ನಮ್ಮ ಪಕ್ಷದಲ್ಲಿ ಜಾತಿ ನಡೆಯುವುದಿಲ್ಲ. ಈ ಬಗ್ಗೆ ನಳೀನಕುಮಾರ್‌ ಕಟೀಲ್ ಅವರ ಜತೆ ಚರ್ಚಿಸುತ್ತೇನೆ’ ಎಂದು ಹೇಳಿದರು.

‘ಹುಣ್ಣಿಮೆ ಹಿನ್ನೆಲೆಯಲ್ಲಿ ಹಿಂದೂಗಳ ಪದ್ಧತಿಯಂತೆ ಕೋಡಿಮಠಕ್ಕೆ ಭೇಟಿ ನೀಡಿದ್ದೇನೆ. ಉತ್ತಮ ಭವಿಷ್ಯವಿದೆ ಎಂದು ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)