ಸೋಮವಾರ, ಅಕ್ಟೋಬರ್ 21, 2019
26 °C

ನನಗೆ ನೋಟಿಸ್ ಬಂದಿಲ್ಲ; ಬಂದರೆ ಉತ್ತರ ಕೊಡುತ್ತೇನೆ: ಶಾಸಕ ಯತ್ನಾಳ

Published:
Updated:
Prajavani

ವಿಜಯಪುರ: ‘ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದ ನನಗೆ ಶೋಕಾಸ್ ನೋಟಿಸ್ ಬಂದಿಲ್ಲ. ಬಂದರೆ ಅದಕ್ಕೆ ಏನು ಉತ್ತರ ಕೊಡಬೇಕೋ ಕೊಡುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೆಲವರು ಹೈಕಮಾಂಡ್ ಬಳಿ ನನ್ನ ಬಗ್ಗೆ ತಪ್ಪಾಗಿ ಹೇಳಿರುತ್ತಾರೆ. ಹಾಗಾಗಿ ನೋಟಿಸ್ ನೀಡಿರಬೇಕು. ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಿಸದಿದ್ದರೆ ಸಂಸದ, ಶಾಸಕ, ಸಚಿವರಾಗಿದ್ದರೂ ಏನು ಪ್ರಯೋಜನ. ಸಂತ್ರಸ್ತರು ಗೋಳಾಡುತ್ತಿದ್ದರೂ ಅವರ ಬಗ್ಗೆ ಮಾತನಾಡಬಾರದು ಎಂದರೆ ಹೇಗೆ, ಶಿಸ್ತು ಎಂದರೆ ಏನು, ಜನರ ಪರವಾಗಿ ಮಾತನಾಡಿದ್ದು ಪಕ್ಷ ವಿರೋಧಿ ಹೇಗೆ ಆಗುತ್ತದೆ’ ಎಂದು ಪ್ರಶ್ನಿಸಿದರು.

ಇದನ್ನೂ ಓದಿ... ಅನಂತಕುಮಾರ್ ಇದ್ದಿದ್ದರೆ ಕರ್ನಾಟಕಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ: ಶಾಸಕ ಯತ್ನಾಳ

‘ನಾನೇನು ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಮತ ಹಾಕಿಲ್ಲ. ನಿನಗೆ ಟಿಕೆಟ್ ಕೊಡುತ್ತೇವೆ, ಕ್ಷೇತ್ರದ ಅಭಿವೃದ್ಧಿಗೆ ₹150 ಕೋಟಿ ಅನುದಾನ ಕೊಡುತ್ತೇವೆ. ಡಿ.ಎಚ್.ಶಂಕರಮೂರ್ತಿ ವಿರುದ್ಧ ಮತ ಹಾಕಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರೂ ನಾನು ಮತ ಹಾಕಿಲ್ಲ. ಹೀಗಿರುವಾಗ ನಾನು ಪಕ್ಷ ವಿರೋಧಿ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ’ ಎಂದು ಗರಂ ಆದರು.

‘ನೋಟಿಸ್ ಕೊಟ್ಟಿದ್ದರಲ್ಲಿ ಯಾವುದೇ ಅರ್ಥವಿಲ್ಲ. ಯಾವುದೋ ಒಂದು ನೋಟಿಸ್‌ಗೆ ನಾನು ಹೆದರುವುದಿಲ್ಲ. ನೋಟಿಸ್ ಕೊಟ್ಟು ಒಬ್ಬ ವ್ಯಕ್ತಿಯನ್ನು ನಾಶ ಮಾಡಿದರೆ ಏನೂ ಆಗುವುದಿಲ್ಲ. ರಾಜ್ಯದ ಪ್ರವಾಹ ಸಂತ್ರಸ್ತರಿಗೆ ₹5 ಸಾವಿರ ಕೋಟಿ ಕೊಡಿ ಎಂದು ಈಗಲೂ  ಪ್ರಧಾನಿಗೆ ಮನವಿ ಮಾಡುತ್ತೇನೆ’ ಎಂದು ಹೇಳಿದರು.

ಇದನ್ನೂ ಓದಿ... ಪ್ರಧಾನಿ ಮೋದಿ ಸೇರಿ ಕೇಂದ್ರ ನಾಯಕರ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ವಾಗ್ದಾಳಿ

‘ಸಂಸದರು ಅಂದರೆ ಸೇವಕರೇ, ಅವರೇನು ಹೆಚ್ಚಿನವರಲ್ಲ. ಜನರಿಗಾಗಿ ಕೇಂದ್ರದಲ್ಲಿ ಕಾಲು ಹಿಡಿದು ಪರಿಹಾರ ತರಬೇಕು. ನಾನು ಜನರ ಸಲುವಾಗಿ ಮಾತನಾಡಿದ್ದೇನೆ. ನನ್ನನ್ನು ಮಂತ್ರಿ ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿಲ್ಲ. ಜನರ ಹಿತದೃಷ್ಟಿಯಿಂದ ಮಾತನಾಡಿದ್ದಕ್ಕೆ ಏನು ಶಿಕ್ಷೆ ಕೊಟ್ಟರೂ ಸ್ವೀಕರಿಸುತ್ತೇನೆ. ಬಿ.ಎಲ್.ಸಂತೋಷ ಅಥವಾ ರಾಜ್ಯ ಘಟಕದ ಅಧ್ಯಕ್ಷರ ಹೆಸರನ್ನು ನಾನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ನೀವು ಹೆಗಲು ಮುಟ್ಟಿಕೊಂಡು ನೋಡಿದರೆ ನಾನೇನು ಮಾಡಲಿ’ ಎಂದರು.

ಇದನ್ನೂ ಓದಿ... ಸಕಾಲಕ್ಕೆ ಬಾರದ ಪರಿಹಾರ ಯಾವ ಪುರಷಾರ್ಥಕ್ಕೆ?: ಸೂಲಿಬೆಲೆ ಆಕ್ರೋಶ

Post Comments (+)