ಸೋಮವಾರ, ಅಕ್ಟೋಬರ್ 14, 2019
24 °C

ಮೋದಿ, ಶಾ, ನಡ್ಡಾಗೆ ಯತ್ನಾಳ ಪತ್ರ

Published:
Updated:
Prajavani

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಅ.5ರಂದು ಶೋಕಾಸ್‌ ನೋಟಿಸ್‌ಗೆ ಉತ್ತರಿಸಿ, ವೈಯಕ್ತಿಕ ಭೇಟಿಗೆ ಅವಕಾಶ
ನೀಡಲು ಪ್ರಧಾನಿಯವರನ್ನು ಮನವಿ ಮಾಡಿಕೊಂಡಿದ್ದಾರೆ.

‘ಕರ್ನಾಟಕದಲ್ಲಿ ನೆರೆಯಿಂದಾಗಿ ಸಾಕಷ್ಟು ಜನ ನಿರಾಶ್ರಿತರಾಗಿದ್ದಾರೆ. ತಾವು ಆದಷ್ಟು ಬೇಗ ನೆರೆ ಪರಿಹಾರ ನೀಡಬೇಕು ಎಂದು ಜನಪ್ರತಿನಿಧಿಯಾಗಿ ಆಗ್ರಹಿಸಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನಾನು ಹಾಗೂ ಕರ್ನಾಟಕದ ಜನತೆ ನಿಮ್ಮನ್ನು ಇಷ್ಟಪಡುತ್ತೇವೆ ಮತ್ತು ಗೌರವಿಸುತ್ತೇವೆ. ಈ ಕಾರಣದಿಂದಲೇ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಅತಿ ಹೆಚ್ಚಿನ ಸಂಸದರನ್ನು ಜನರು ಆಯ್ಕೆ ಮಾಡಿ ಕಳುಹಿಸಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್‌ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ನಿಮ್ಮಲ್ಲಿ (ಪ್ರಧಾನಿ) ಕಂಡಿದ್ದೇವೆ. ನಿಮ್ಮಿಂದಲೇ ಇಂದು ಇಡೀ ದೇಶ ಅತ್ಯುನ್ನತವಾಗಿ ಬೆಳೆಯುತ್ತಿದೆ. ಸಂತ್ರಸ್ತರಿಗೆ ನೆರವಾಗಿ ಎಂಬ ಕಾರಣಕ್ಕೆ ನಾನು ಮಾತನಾಡಿದ್ದೇನೇಯೆ ಹೊರತು, ಪಕ್ಷದ ವರ್ಚಸ್ಸು ಮತ್ತು ನಾಯಕರ ಅವಹೇಳನಕ್ಕಾಗಿ ಅಲ್ಲ. ನಾನು ನೀಡಿದ ಹೇಳಿಕೆಯಿಂದ ಪಕ್ಷದ ಘನತೆ ಹೆಚ್ಚಿದೆಯೇ ಹೊರತು ಪಕ್ಷಕ್ಕೆ ಧಕ್ಕೆ ಆಗಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗಲೂ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸುವ ಸಂಬಂಧ ಹೋರಾಟ ಮಾಡಿದ್ದೇನೆ. ಆಗ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ. ಆ ವೇಳೆ ವಾಜಪೇಯಿ ಅವರು ಸ್ಪಂದಿಸಿದ್ದರು. ಈಗಲೂ ಪರಿಹಾರ ಸಿಗಲಿ ಎಂದು ಕೇಳಿದ್ದೇನೆ‘ ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಮೋದಿ ಮತ್ತು ಅಮಿತ್‌ ಶಾ ಅವರಿಗೆ ಬರೆದ ಪತ್ರದಲ್ಲಿ ‘ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ನನ್ನ ವ್ಯಕ್ತಿತ್ವವನ್ನು ಹಾಳುಗೆಡಹುವಂತೆ ಬೇರೆಯವರು ಯತ್ನಿಸುತ್ತಿದ್ದಾರೆ. ಇದನ್ನು ನಿಮ್ಮ ಅವಗಾಹನೆಗೆ ತರಬಯಸುವೆ. ಸಂತ್ರಸ್ತರ ಬಗೆಗೆ ಚರ್ಚಿಸಲು ನಿಮ್ಮೊಂದಿಗೆ ವೈಯಕ್ತಿಕವಾಗಿ ಭೇಟಿ ಮಾಡಲು ಸಮಯಾವಕಾಶ ಕೋರುವೆ’ ಎಂದು ಕೇಳಿಕೊಂಡಿದ್ದಾರೆ. 

 ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯು ಶಾಸಕ ಬಸನಗೌಡ ಪಾಟೀಲ ಅವರಿಗೆ ಅ.4ರಂದು ಶೋಕಾಸ್ ನೋಟಿಸ್ ನೀಡಿತ್ತು. 

Post Comments (+)