ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಾರ್ಟ್‌ನಲ್ಲೇ ‘ಸೆರೆ’ಯಾದ ಶಾಸಕರು

ಆತಂಕ ಮೂಡಿಸಿದ ಹಲ್ಲೆ ಪ್ರಕರಣ: ವಾಸ್ತವ್ಯ ವಿಸ್ತರಣೆ
Last Updated 20 ಜನವರಿ 2019, 16:36 IST
ಅಕ್ಷರ ಗಾತ್ರ

ರಾಮನಗರ: ಕಾಂಗ್ರೆಸ್‌ ಶಾಸಕರ ರೆಸಾರ್ಟ್‌ ವಾಸ್ತವ್ಯ ಮುಂದುವರಿದಿದ್ದು, ಸೋಮವಾರವೂ ಈಗಲ್‌ಟನ್‌ನಲ್ಲಿಯೇ ಇರಲಿದ್ದಾರೆ.

ಭಾನುವಾರ ಸಂಜೆ. 7.15ಕ್ಕೆ ರೆಸಾರ್ಟಿನಲ್ಲಿ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

ಸೋಮವಾರ ಬೆಳಿಗ್ಗೆ 11ಕ್ಕೆ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ನಂತರದಲ್ಲಿ ಮುಂದಿನ ನಡೆ ಕುರಿತು ಚರ್ಚಿಸುವುದಾಗಿ ಕಾಂಗ್ರೆಸ್‌ ನಾಯಕರು ತಿಳಿಸಿದರು.

ವೇಣುಗೋಪಾಲ್ ಸುಮಾರು ಮೂರು ಗಂಟೆ ಕಾಲ ಶಾಸಕರೊಂದಿಗೆ ಚರ್ಚೆ ನಡೆಸಿದ್ದು, ಒಬ್ಬೊಬ್ಬರಾಗಿ ಮಾತುಕತೆ ನಡೆಸಿದರು, ಶಾಸಕರ ಹೊಡೆದಾಟದ ವಿಷಯವೂ ಪ್ರಮುಖವಾಗಿ ಚರ್ಚೆಯಾಯಿತು.

ಒಬ್ಬೊಬ್ಬರಿಗೂ ಅಗತ್ಯ ಸಲಹೆ ನೀಡಿದ ವೇಣುಗೋಪಾಲ್‌, ಮಾತಿನಲ್ಲಿಯೇ ಅತೃಪ್ತರ ಕಿವಿಹಿಂಡಿದರು. ಇದಕ್ಕೆ ಸಿದ್ದರಾಮಯ್ಯ ಸಾಥ್‌ ನೀಡಿದರು. ‘ಕ್ಲಾಸ್‌’ ಮುಗಿಸಿಕೊಂಡ ಶಾಸಕರು ವಿರಮಿಸಿದರು.

ಖಡಕ್‌ ವಾರ್ನಿಂಗ್‌: ರೆಸಾರ್ಟಿನ ಒಳಗೆ ಕೆಲವು ಶಾಸಕರ ವರ್ತನೆಗೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳಾದವರು ಕೊಂಚವಾದರೂ ಶಿಸ್ತು–ಸಂಯಮ ಬೆಳೆಸಿಕೊಳ್ಳಬೇಕು ಎಂದು ಗಣೇಶ್, ಭೀಮಾ ನಾಯ್ಕ ಮೊದಲಾದ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿ ನಾಯಕರು ಸೋಮವಾರದಿಂದ ಬರ ಅಧ್ಯಯನ ಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕರು ಭಾನುವಾರ ಸಂಜೆಯೇ ತಮ್ಮ ಕ್ಷೇತ್ರಗಳಿಗೆ ಹೊರಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸದ್ಯ ಶಾಸಕರ ಹೊಡೆದಾಟ ಹಾಗೂ ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ರೆಸಾರ್ಟ್‌ ವಾಸ್ತವ್ಯವನ್ನು ಮುಂದುವರಿಸುವ ನಿರ್ಧಾರಕ್ಕೆ ಬರಲಾಯಿತು.

ಶಾಸಕರಿಬ್ಬರ ಹಲ್ಲೆ ಪ್ರಕರಣವು ರೆಸಾರ್ಟ್‌ ಅಂಗಳದಲ್ಲಿ ಆತಂಕದ ವಾತಾವರಣ ಮೂಡಿಸಿತ್ತು. ಹೀಗಾಗಿ ಯಾವ ಶಾಸಕರ ಮುಖದಲ್ಲೂ ನಗು ಇರಲಿಲ್ಲ. ರೆಸಾರ್ಟ್‌ ವಾಸ ಮುಗಿದರೆ ಸಾಕು ಎನ್ನುವ ಅಭಿಪ್ರಾಯ ಎಲ್ಲರದ್ದಾಗಿತ್ತು.

ಹೆಲಿಕಾಪ್ಟರ್‌ನಲ್ಲಿ ಬಂದ ಸಿದ್ದರಾಮಯ್ಯ: ಭಾನುವಾರ ಕೊಪ್ಪಳದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಅಲ್ಲಿ ಹೆಲಿಕಾಪ್ಟರ್ ಏರಿ ಸಂಜೆ 6ರ ಸುಮಾರಿಗೆ ನೇರವಾಗಿ ಈಗಲ್‌ಟನ್‌ ರೆಸಾರ್ಟ್‌ ಹೆಲಿಪ್ಯಾಡಿಗೆ ಬಂದಿಳಿದರು. ಅವರನ್ನು ಸಚಿವ ಯು.ಟಿ. ಖಾದರ್‌ ಸ್ವಾಗತಿಸಿದರು.

ಕಾರು ಬದಲಿಸಿದ ಡಿಕೆಶಿ: ಹಲ್ಲೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಲೇ ಸಚಿವ ಡಿ.ಕೆ. ಶಿವಕುಮಾರ್ ಮಾಧ್ಯಮಗಳ ಕೈಗೆ ಸಿಗಲಿಲ್ಲ. ಸರ್ಕಾರಿ ಕಾರು ಬದಲಿಸಿ ಸಫಾರಿ ಕಾರ್‌ ಏರಿ ಓಡಾಟ ನಡೆಸಿದರು. ಪತ್ರಕರ್ತರತ್ತ ಚಿತ್ತ ಹರಿಸದೇ ಓಡಾಡಿದರು.

ಪರಂ ಗರಂ: ಬೆಳಗ್ಗೆ ರೆಸಾರ್ಟ್‌ನ ಒಳಗೆ ಗಣೇಶ್‌ರನ್ನು ಕಾಣುತ್ತಲೇ ಜಿ. ಪರಮೇಶ್ವರ ಗರಂ ಆದರು. ‘ಬುದ್ದಿ ಇದೆಯೇನ್ರಿ ನಿಮಗೆ. ನೀವು ಶಾಸಕರು ಅನ್ನೋದಾದ್ರು ನೆನಪಿದೆಯಾ’ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದಂತೆ ತಾಕೀತು ಮಾಡಿದರು.

ಶಾಸಕರನ್ನು ಹುಡುಕಿ ಬಂದ ಮತದಾರರು: ಶಾಸಕರನ್ನು ಹುಡುಕಿಕೊಂಡು ಕೆಲ ಮತದಾರರು ರೆಸಾರ್ಟ್‌ ಬಳಿ ಬಂದಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್‌ ಅವರನ್ನು ಕಾಣಬೇಕು ಎಂದು ಕೆಲವರು ರೆಸಾರ್ಟ್‌ ಬಾಗಿಲಿಗೆ ಬಂದಿದ್ದು, ಭದ್ರತಾ ಸಿಬ್ಬಂದಿ ಅವರನ್ನು ಒಳಗೆ ಬಿಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT