ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಪೊಟ್ರೊ

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಿಯಾಮಿ: ಅರ್ಜೆಂ ಟೀನಾದ ಆಟಗಾರ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರು ಮಿಯಾಮಿ ಓಪನ್‌ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ನಾಲ್ಕರ ಘಟ್ಟ ತಲುಪಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಡೆಲ್ ಪೊಟ್ರೊ 5–7, 7–6, 7–6ರಲ್ಲಿ ಮಿಲೋಸ್ ರಾನಿಕ್‌ಗೆ ಸೋಲುಣಿಸಿದರು.

ಮೊದಲ ಸೆಟ್‌ನಲ್ಲಿ ಸೋತ ಪೊಟ್ರೊ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಮೂರನೇ ಸೆಟ್‌ನಲ್ಲಿ ಕೆನಡಾದ ಆಟಗಾರ ಪ್ರಬಲ ಪೈಪೋಟಿ ಒಡ್ಡಿದರು. ಆದರೆ ನಿಖರ ಸ್ಮ್ಯಾಷ್‌ ಮತ್ತು ರಿಟರ್ನ್‌ಗಳಿಂದ ಗಮನ ಸೆಳೆದ ಅರ್ಜೆಂಟೀನಾದ ಆಟಗಾರ ಗೆದ್ದರು.

ಎರಡು ಗಂಟೆ 53 ನಿಮಿಷಗಳ ಪೈಪೋಟಿಯಲ್ಲಿ ಪೊಟ್ರೊ ಅಮೋಘವಾಗಿ ಆಡಿದರು. ಮುಂದಿನ ಪಂದ್ಯದಲ್ಲಿ ಅವರು ಅಮೆರಿಕದ ಜಾನ್ ಇಸ್ನರ್ ಎದುರು ಆಡಲಿದ್ದಾರೆ.

‘ಈ ರೀತಿಯ ಪಂದ್ಯ ಆಡುವುದು ಎಂದರೆ ನನಗೆ ಖುಷಿಯಾಗುತ್ತದೆ. ಇಬ್ಬರೂ ಉತ್ತಮವಾಗಿ ಆಡಿದೆವು. ಕೊನೆಯ ಹಂತದವರೆಗೂ ಪೈಪೋಟಿ ಇತ್ತು. ಟೈ ಬ್ರೇಕರ್‌ನಲ್ಲಿ ನಾನು ಉತ್ತಮವಾಗಿ ಆಡಿದ್ದರಿಂದ ಗೆಲುವು ಸಾಧ್ಯವಾಯಿತು’ ಎಂದು ಪೊಟ್ರೊ ಹೇಳಿದ್ದಾರೆ.

ಚುಂಗ್‌ಗೆ ಸೋಲುಣಿಸಿದ ಇಸ್ನರ್‌: ಇನ್ನೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜಾನ್‌ ಇಸ್ನರ್‌ 6–1, 6–4ರಲ್ಲಿ ನೇರ ಸೆಟ್‌ಗಳಿಂದ ದಕ್ಷಿಣ ಕೊರಿಯಾದ ಚುಂಗ್ ಹೆಯಾನ್ ಅವರಿಗೆ ಸೋಲುಣಿಸಿದರು.

ಅಮೆರಿಕದ ಇಸ್ನರ್‌ 19ನೇ ಶ್ರೇಯಾಂಕದ ಚುಂಗ್ ಎದುರು 13 ಏಸ್‌ಗಳನ್ನು ಸಿಡಿಸಿದರು. ಕೇವಲ 68ನಿಮಿಷದ ಪೈಪೋಟಿ ಇದಾಗಿತ್ತು.

‘ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ನಾನು ಉತ್ತಮವಾಗಿ ಆಡಿದೆ. ಎದುರಾಳಿಯನ್ನು ನಾನು ಸುಲಭವಾಗಿ ಪರಿಗಣಿಸಲಿಲ್ಲ. ಸಂಪೂರ್ಣ ಸಿದ್ಧತೆ ನಡೆಸಿದ್ದೆ’ ಎಂದು ಇಸ್ನರ್ ಹೇಳಿದ್ದಾರೆ.

ವೀನಸ್‌ಗೆ ಸೋಲು: ಅಮೆರಿಕದ ವೀನಸ್ ವಿಲಿಯಮ್ಸ್‌ ಕ್ವಾರ್ಟರ್‌ಫೈನಲ್‌ ಹಂತದಲ್ಲಿ ಸೋತಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಪೈಪೋಟಿಯಲ್ಲಿ ಅಮೆರಿಕದ ಯುವ ಆಟಗಾರ್ತಿ ಡೇನಿಯಲ್ ಕೊಲಿನ್ಸ್‌ 6–2, 6–3ರಲ್ಲಿ ಅನುಭವಿ ವೀನಸ್‌ ಎದುರು ಗೆದ್ದು ಸೆಮಿಫೈನಲ್‌ ಪ್ರವೇಶಿಸಿದರು.

ವೃತ್ತಿಪರ ಟೆನಿಸ್‌ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ 24 ವರ್ಷದ ಡೇನಿಯಲ್ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ತಮ್ಮದೇ ದೇಶದ ಅನುಭವಿ ಆಟಗಾರ್ತಿಗೆ ಸೋಲುಣಿಸಿದ್ದಾರೆ.

ಮೊದಲ ಬಾರಿಗೆ ಡೇನಿಯಲ್ ವಿಶ್ವ ರ‍್ಯಾಂಕಿಂಗ್‌ನಲ್ಲಿ 10ರೊಳಗಿನ ಸ್ಥಾನ ಹೊಂದಿರುವ ಆಟಗಾರ್ತಿ ಎದುರು ಆಡಿ ಗೆದ್ದಿದ್ದಾರೆ. ವೀನಸ್‌ ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿರುವ ಜೆಲೆನಾ ಓಸ್ತಪೆಂಕೊ ಎದುರು ಸೆಮಿಫೈನಲ್‌ನಲ್ಲಿ ಡೇನಿಯಲ್ ಆಡಲಿದ್ದಾರೆ.

‘ಇದು ನನ್ನ ಅತ್ಯುತ್ತಮ ಆಟ ಎಂದು ಈಗಲೇ ಹೇಳಲು ಸಾಧ್ಯವಾಗುತ್ತಿಲ್ಲ. ನನ್ನ ಕೆಲವು ಹೊಡೆತಗಳನ್ನು ಅಂದಾಜು ಮಾಡಲು ವೀನಸ್‌ಗೆ ಸಾಧ್ಯವಾಗಲಿಲ್ಲ. ಮುಂದಿನ ಪಂದ್ಯದಲ್ಲಿ ನನ್ನ ನೈಜ ಸಾಮರ್ಥ್ಯದ ಅರಿವು ಆಗಲಿದೆ’ ಎಂದು ಡೇನಿಯಲ್ ಹೇಳಿದ್ದಾರೆ.

‘ಯುವ ಅಮೆರಿಕದ ಆಟಗಾರ್ತಿಯರಿಗೆ ವೀನಸ್ ಹಾಗೂ ಸೆರೆನಾ ರೀತಿಯಲ್ಲಿ ಆಡುವ ಕನಸು ಇರುತ್ತದೆ. ನನಗೂ ಕೂಡ ವೀನಸ್ ಎದರು ಆಡುವ ಕನಸು ಇತ್ತು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT