ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿದ್ದರಾಮಯ್ಯಗೆ ಉದ್ಯೋಗವಿಲ್ಲ’

Last Updated 25 ಅಕ್ಟೋಬರ್ 2019, 14:38 IST
ಅಕ್ಷರ ಗಾತ್ರ

ವಿಜಯಪುರ: ‘ಸಿದ್ದರಾಮಯ್ಯ ಅವರಿಗೆ ಉದ್ಯೋಗವಿಲ್ಲ. ಹೀಗಾಗಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ವ್ಯಂಗ್ಯವಾಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನೆರೆ ಸಂತ್ರಸ್ತರಿಗೆ 15 ಗುಂಟೆ ನಿವೇಶನ, ಮನೆ ಕಟ್ಟಿಕೊಳ್ಳಲು ₹10 ಲಕ್ಷ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. 2009ರಲ್ಲೂ ಪ್ರವಾಹ ಉಂಟಾಗಿತ್ತು. ಅಂದು ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ ಸಾಕಷ್ಟು ನೆರವು ನೀಡಿದ್ದರು. ಆ ನಂತರದ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಆಗ ಶಾಶ್ವತ ಪರಿಹಾರಕ್ಕೆ ಮುಂದಾಗದ ಅವರು ಈಗ ಪಾದಯಾತ್ರೆ ಕೈಗೊಳ್ಳಲು ಹೊರಟಿದ್ದಾರೆ. ಇದು ಪಾದಯಾತ್ರೆ ಅಲ್ಲ, ಪಶ್ಚಾತ್ತಾಪ ಯಾತ್ರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಿಶ್ವೇಶ್ವರ ಹೆಗಡೆ ಕಾಗೇರಿ ಬಗ್ಗೆ ಏಕ ವಚನದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು ಸ್ಪೀಕರ್‌ಗೆ ಅಗೌರವ ತೋರಿದ್ದಾರೆ. ಸ್ಪೀಕರ್ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಎಷ್ಟು ಸರಿ. ಇವರ ವರ್ತನೆಯಿಂದಾಗಿಯೇ ಅನೇಕರು ಕಾಂಗ್ರೆಸ್‌ನಿಂದ ದೂರ ಹೋಗಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ಇರಬಹುದು. ಆದರೆ, ರಾಜ್ಯದ ಜನತೆಗೆ ಅಲ್ಲ’ ಎಂದು ಹರಿಹಾಯ್ದರು.

‘ಸಿದ್ದರಾಮಯ್ಯ ಅಹಂಕಾರದಿಂದಾಗಿ ತಮ್ಮ ಜನ್ಮ ಹಾಗೂ ಕರ್ಮಭೂಮಿ ಚಾಮುಂಡೇಶ್ವರಿಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಬಾದಾಮಿ ಜನತೆ ಕೈಹಿಡಿದ ಕಾರಣಕ್ಕೆ ಮತ್ತೆ ಶಾಸಕರಾಗಿದ್ದಾರೆ’ ಎಂದರು.

‘ಆರ್‌ಎಂಎಸ್‌ ಶಿಕ್ಷಕರಿಗೆ 3–4 ತಿಂಗಳಿನಿಂದ ಏಕೆ ಸಂಬಳ ಪಾವತಿಯಾಗಿಲ್ಲ’ ಎಂಬ ಪ್ರಶ್ನೆಗೆ, ‘ಶಿಕ್ಷಣ ಇಲಾಖೆ ದೊಡ್ಡ ಇಲಾಖೆ. ಶೇ 50ರಷ್ಟು ಉದ್ಯೋಗಿಗಳು ಶಿಕ್ಷಣ ಇಲಾಖೆಯಲ್ಲೇ ಇದ್ದಾರೆ. ಸಕಾಲಕ್ಕೆ ಸಂಬಳ ಪಾವತಿಸುವ ಬಗ್ಗೆ ಶಿಕ್ಷಣ ಸಚಿವ ಸುರೇಶಕುಮಾರ್ ಅವರ ಗಮನಕ್ಕೆ ತರಲಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ’ ಎಂದು ಉತ್ತರಿಸಿದರು.

ಟಿಪ್ಪು ಕುರಿತ ಪಠ್ಯವನ್ನು ತೆಗೆದುಹಾಕುವ ಸಂಬಂಧ ಪ್ರತಿಕ್ರಿಯಿಸಿದ ಅವರು, ‘ಎಲ್ಲವನ್ನೂ ವೈಚಾರಿಕ ಹಿನ್ನೆಲೆಯಲ್ಲಿ ನೋಡುವುದು ಬೇಡ. ಯಾರನ್ನೇ ಆಗಲಿ ವಿನಾಕಾರಣ ವಿಜೃಂಭಿಸುವುದು, ಕೈಬಿಡುವುದು ಔಚಿತ್ಯವಲ್ಲ. ಶಿಕ್ಷಣದ ದೃಷ್ಟಿಯಿಂದ ಎಷ್ಟು ಇರಬೇಕೋ ಅಷ್ಟು ಇರಲಿ, ಮಕ್ಕಳು ತಿಳಿದುಕೊಳ್ಳಲಿ’ ಎಂದರು.ಆರ್.ಎಸ್.ಪಾಟೀಲ ಕೂಚಬಾಳ, ರಾಕೇಶ ಕುಲಕರ್ಣಿ, ವಿಜಯಕುಮಾರ್ ಜೋಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT