ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಮುಂಗಾರು ಬೆಳೆಗಳಿಗೆ ತೇವಾಂಶ ಕೊರತೆ

ತೆನೆಯಾಡುವ ಹಂತದಲ್ಲಿರುವ ಸಜ್ಜೆ, ಮೆಕ್ಕೆಜೋಳ ಬೆಳೆಗಳು
Last Updated 5 ಆಗಸ್ಟ್ 2021, 12:36 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬಿತ್ತನೆಯಾಗಿರುವ ಮುಂಗಾರು ಹಂಗಾಮಿನ ಬೆಳೆಗಳಿಗೆ ತೇವಾಂಶ ಕೊರತೆ ಎದುರಾಗಿದೆ.

ಮಸಾರಿ ಜಮೀನಿನಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳ, ಅಲ್ಪಾವಧಿ ತಳಿ ಸಜ್ಜೆ, ಸೂರ್ಯಕಾಂತಿ, ಶೇಂಗಾ ಮತ್ತಿತರೆ ಬೆಳೆಗಳು ಈಗಾಗಲೇ ತೆನೆ ಒಡೆಯುವ ಹಂತದಲ್ಲಿವೆ. ಆದರೆ ಮಳೆಯಾಗದ ಕಾರಣ ತೇವಾಂಶ ಇಲ್ಲದೆ ಬೆಳೆಗಳು ಬಾಡುವ ಹಂತಕ್ಕೆ ಬಂದಿವೆ ಎಂದು ರೈತರು ತಿಳಿಸಿದ್ದಾರೆ.

ಎರಡು ವಾರದ ಹಿಂದೆ ಜಿನುಗು ಮಳೆ ಬಂದರೂ ಭೂಮಿಯಲ್ಲಿ ಹೆಚ್ಚಿನ ತೇವಾಂಶ ಸಾಧ್ಯವಾಗಲಿಲ್ಲ, ಈಗ ಬಿಸಿಲು ಗಾಳಿ ಬೀಸಿದ್ದರಿಂದ ಭೂಮಿ ಗಟ್ಟಿಯಾಗಿ ಒಣಗಿದೆ. ತಡವಾಗಿ ಬಿತ್ತನೆಯಾಗಿರುವ ಮೆಕ್ಕೆಜೋಳ, ಸಜ್ಜೆ, ತೊಗರೆ ಇತರೆ ಬೆಳೆಗಳಿಗೂ ಮಳೆಯ ಅಗತ್ಯವಿದೆ. ಆದರೆ ದಟ್ಟ ಮೋಡ ಕವಿದರೂ ಮಳೆ ಬರುತ್ತಿಲ್ಲ. ಇದೇ ಸ್ಥಿತಿ ಮುಂದುವರೆದರೆ ಬೆಳೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮುಂದೆ ಮಳೆಯಾದರೂ ಬೆಳೆಗಳಿಗೆ ಪ್ರಯೋಜನವಾಗುವುದಿಲ್ಲ ಎಂದು ವಿವಿಧ ಗ್ರಾಮಗಳ ರೈತರು ಹೇಳಿದರು.

ಕಳೆ ಸಮಸ್ಯೆ: ಈ ಮಧ್ಯೆ ಕಳೆದ ಎರಡು ವಾರದ ಹಿಂದೆ ತುಂತುರು ಮಳೆಯಾಗಿದ್ದರಿಂದ ಹೊಲಗದ್ದೆಗಳಲ್ಲಿ ಕಳೆ ಹೆಚ್ಚಾಗಿದೆ. ಕೆಲ ಜಮೀನುಗಳಲ್ಲಿ ಬೆಳೆಗಳಿಗಿಂತ ಪಾರ್ಥೇನಿಯಂ ಇತರೆ ಕಸ ಹೆಚ್ಚಾಗಿ ಸ್ವಚ್ಛಗೊಳಿಸಲು ಸಾಧ್ಯವಾಗದಷ್ಟು ಬೆಳೆದಿದೆ. ಕಳೆ ತೆಗೆಯುವುದಕ್ಕೆ ಕಾರ್ಮಿಕರ ಸಮಸ್ಯೆ ಒಂದೆಡೆಯಾದರೆ ಕೂಲಿ ಮೊತ್ತವೂ ದುಪ್ಪಟ್ಟಾಗಿದೆ. ಕಳೆದ ವರ್ಷ ನೂರು ರೂಪಾಯಿ ಇದ್ದ ಕೂಲಿ ಈಗ ಎರಡು ನೂರು ದಾಟಿದೆ. ಇದರಿಂದ ರೈತರಿಗೆ ಜಮೀನುಗಳನ್ನು ನಿಭಾಯಿಸುವುದು ಕಷ್ಟದ ಸಂಗತಿಯಾಗಿದೆ ಎಂದು ಹಿರೇಮನ್ನಾಪುರದ ರೈತ ಭೀಮನಗೌಡ, ಹಿರೇಬನ್ನಿಗೋಳದ ಹನುಮಪ್ಪ ಉಪ್ಪಾರ ಇತರರು ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಿದರು.

ಈ ವಿಷಯ ಕುರಿತು ವಿವರಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ತಿಪ್ಪೇಸ್ವಾಮಿ, ಸದ್ಯ ತೇವಾಂಶ ಕೊರತೆಯಾಗಿಲ್ಲ. ಈಗ ಮಳೆಯಾದರೂ ಬೆಳೆಗಳಿಗೆ ಅನುಕೂಲವಾಗುತ್ತದೆ. ವಾತಾವರಣ ತೇವಾಂಶದಿಂದ ಕೂಡಿದ್ದು ಈಗಿನ ಸ್ಥಿತಿಯಲ್ಲಿ ಬೆಳೆಗಳಿಗೆ ಸಮಸ್ಯೆ ಇಲ್ಲ. ಅಲ್ಲದೆ ಈಗ ಮಳೆಯಾಗುವ ವಾತಾವರಣ ಇದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT