ಶನಿವಾರ, ಡಿಸೆಂಬರ್ 7, 2019
25 °C
ರೈತ ಸಮೂಹದ ನೋವಿನ ಧ್ವನಿ; ಬೆಳೆ ವಿಮೆ ನೋಂದಣಿಯಿಲ್ಲದೆ ಕಂಗಾಲು

ವಿಜಯಪುರ: ಮುಂಗಾರು ಕೈ ಚೆಲ್ಲಿತು; ಬೆಳೆ ವಿಮೆಯೂ ಸಿಗ್ತಿಲ್ಲ..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ:  ‘ಮುಂಗಾರು ಕೈ ಬಿಟ್ಟಾಯ್ತು. ಇತ್ತ ಸರ್ಕಾರವೂ ನೆರವಿಗೆ ಬಾರದಾಗಿದೆ. ಈ ಹಿಂದೆ ಮಾಡಿಸಿದ ಬೆಳೆ ವಿಮೆ ಸಕಾಲಕ್ಕೆ ಬಾರದಿದ್ದರಿಂದ ಬೇಸತ್ತು ಈ ಬಾರಿ ನೋಂದಣಿಯನ್ನೇ ಮಾಡಿಸಿರಲಿಲ್ಲ. ‘ರೈತ ಬೆಳಕು’ ಯೋಜನೆಯಡಿ ಪ್ರೋತ್ಸಾಹ ಧನವೂ ಸಿಕ್ಕಿಲ್ಲ...’

‘ವಾರ ಕಳೆದರೆ ಹಿಂಗಾರಿ ಹಂಗಾಮು ಚಾಲನೆಗೊಳ್ಳಲಿದೆ. ಕೈಕೊಟ್ಟ ತೊಗರಿ ಜಾಗಕ್ಕೆ ಕಡಲೆ ಬಿತ್ತಲು, ಬಿತ್ತನೆ ಬೀಜ, ಗೊಬ್ಬರ, ಬೇಸಾಯದ ಖರ್ಚು ಭರಿಸಲಾಗದ ಸ್ಥಿತಿ ನಮ್ಮದಾಗಿದೆ. ಕಂದಾಯ ಸಚಿವರು ಜಿಲ್ಲೆಗೆ ಭೇಟಿ ಕೊಟ್ಟು, ಬೆಳೆ ವಿಮೆ ಮಂಜೂರು ಮಾಡುವಂತೆ ಗುಡುಗಿದರೂ ಪ್ರಯೋಜನವಿಲ್ಲದಾಗಿದೆ. ಇಂತಹ ಸ್ಥಿತಿಯಲ್ಲಿ ಮುಂದೇನು ಮಾಡಬೇಕು ಎಂಬುದೇ ದಿಕ್ಕು ತೋಚದಂತಾಗಿದೆ’ ಎಂದು ಭೂತನಾಳ ತಾಂಡಾದ ನಾಮದೇವ ಲಮಾಣಿ, ಹೊನಗನಹಳ್ಳಿಯ ಶಿವನಗೌಡ ಬಿರಾದಾರ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಈ ಹಿಂದಿನ ಅವಧಿಯಲ್ಲಿ ‘ರೈತ ಬೆಳಕು’ ಯೋಜನೆಯಡಿ ನೇರವಾಗಿಯೇ ನಮ್ಮ ಬ್ಯಾಂಕ್‌ ಖಾತೆಗೆ ಸರ್ಕಾರ ಬೇಸಾಯದ ಖರ್ಚಿಗಾಗಿ ₹ 5000, ₹ 10000 ಪ್ರೋತ್ಸಾಹ ಧನ ಹಾಕುತ್ತಿತ್ತು. ಈ ಬಾರಿ ಒಮ್ಮೆಗೆ ಎಲ್ಲವೂ ಕೈಕೊಟ್ಟಿವೆ. ಈ ಹಿಂದಿನ ಬೆಳೆ ವಿಮೆ ಬಾರದಿದ್ದಕ್ಕೆ ಬೇಸತ್ತು ಈ ಮುಂಗಾರಿನಲ್ಲಿ ತೊಗರಿಗೆ ಬೆಳೆ ವಿಮೆ ಮಾಡಿಸಿರಲಿಲ್ಲ.

ಅಂತಿಮ ದಿನಗಳಲ್ಲಿ ವಿಮೆ ಮಾಡಿಸೋಣ ಎಂದರೇ ಬ್ಯಾಂಕ್‌ ಅಧಿಕಾರಿಗಳು ಸರ್ವರ್‌ ಬ್ಯುಸಿ ಹೆಸರಿನಲ್ಲಿ ಅರ್ಜಿ ಸ್ವೀಕರಿಸಲಿಲ್ಲ. ವಿಮೆ ತುಂಬುವ ಸಮಯ ವಿಸ್ತರಿಸಲಾಗುವುದು ಎಂಬ ಸುದ್ದಿ ನಂಬಿ ಕೆಟ್ಟೆವು. ಜುಲೈ 31ರ ಬಳಿಕ ಅವಕಾಶವೇ ಸಿಗಲಿಲ್ಲ. ಇದೀಗ ಏನ್‌ ಮಾಡ್ಬೇಕು ಎಂಬುದೇ ತೋಚದಾಗಿದೆ’ ಎಂದು ಹೊನಗನಹಳ್ಳಿಯ ವಿಠ್ಠಲಗೌಡ ರಾಚಪ್ಪಗೌಡ ಬಿರಾದಾರ ದೂರಿದರು.

ಗುರಿಯ ಅರ್ಧ ದಾರಿ ಕ್ರಮಿಸದ ಕೃಷಿ ಇಲಾಖೆ:  ಮುಂಗಾರು ಹಂಗಾಮಿನಲ್ಲಿ ತೊಗರಿ, ಹೆಸರು, ಹತ್ತಿ, ಉದ್ದು, ಸಜ್ಜೆ, ಮುಸುಕಿನ ಜೋಳ ಸೇರಿದಂತೆ ಇನ್ನಿತರೆ ಬೆಳೆಗಳಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿತ್ತು. ಜಿಲ್ಲೆಯ ವ್ಯಾಪ್ತಿಯಲ್ಲಿ 3.50 ಲಕ್ಷ ರೈತರಿದ್ದು, 1.40 ಲಕ್ಷ ರೈತರಿಂದ ವಿಮಾ ಕಂತು ಪಾವತಿಸುವ ಗುರಿಯನ್ನು ಕೃಷಿ ಇಲಾಖೆ ನಿಗದಿಪಡಿಸಿಕೊಂಡಿತ್ತು. ಆದರೆ 58436 ರೈತರು ಮಾತ್ರ ನೋಂದಾಯಿಸಿಕೊಂಡಿದ್ದಾರೆ.

4.30 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ಗುರಿಗೆ, 3.42 ಲಕ್ಷ (80%) ಹೆಕ್ಟೇರ್‌ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬಿತ್ತಲಾಗಿತ್ತು. ಇದರಲ್ಲಿ ತೊಗರಿ 1.42 ಲಕ್ಷ ಹೆಕ್ಟೇರ್‌ನಲ್ಲಿ ಬಾಡುತ್ತಿದ್ದು, 3000 ಹೆಕ್ಟೇರ್‌ನಲ್ಲಿ ಹೆಸರು, 9700 ಹೆಕ್ಟೇರ್‌ನಲ್ಲಿ ಸಜ್ಜೆ, 3300 ಹೆಕ್ಟೇರ್‌ನಲ್ಲಿ ಶೇಂಗಾ, 2400 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 3000 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳದ ಬೆಳೆ ಬಾಡುತ್ತಿವೆ. ಇದರಲ್ಲಿ ಬಹುತೇಕ ರೈತರು ಈ ಬಾರಿ ವಿಮೆ ಕಂತು ಪಾವತಿಸಿ ನೋಂದಾಯಿಸದಿದ್ದುದು, ಅಪಾರ ಸಂಖ್ಯೆಯ ರೈತರಿಗೆ ಭಾರಿ ಆರ್ಥಿಕ ಹೊಡೆತ ನೀಡಲಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಜಮೆಯಾಗದ ವಿಮೆ :  ‘2016–17ನೇ ಸಾಲಿನ ಹಿಂಗಾರು ಹಂಗಾಮಿಗೆ 1.20.755 ರೈತರು ವಿಮಾ ಕಂತು ಪಾವತಿಸಿ ನೋಂದಾಯಿಸಿಕೊಂಡಿದ್ದರು. ಇದರಲ್ಲಿ 85572 ರೈತರಿಗೆ ಒಟ್ಟು ₹ 39.71 ಕೋಟಿ ಪರಿಹಾರ ಬಿಡುಗಡೆಯಾಗಿದೆ. ₹ 9 ಕೋಟಿಯನ್ನು ಈಗಾಗಲೇ ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ. ಇನ್ನೂ ₹ 30 ಕೋಟಿ ಜಮೆಯಾಗಬೇಕಿದೆ.

2017–18ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ 67,059 ರೈತರು ನೋಂದಾಯಿಸಿಕೊಂಡಿದ್ದು, 34,409 ರೈತರಿಗೆ ₹ 69.73 ಕೋಟಿ ಪರಿಹಾರ ಬಿಡುಗಡೆಯಾಗಿದೆ. ಇದರಲ್ಲಿ ಕೇವಲ ₨ 9 ಕೋಟಿ ರೈತರ ಖಾತೆಗಳಿಗೆ ಜಮೆಯಾಗಿದ್ದು, ₹ 60.73 ಕೋಟಿ ಜಮೆಯಾಗಿಲ್ಲ.

ಬ್ಯಾಂಕ್‌ಗಳ ಐಎಫ್‌ಎಸ್‌ಸಿ ಕೋಡ್‌, ರೈತರ ಖಾತೆಯ ನಂಬರ್‌, ಆಧಾರ್‌ ಕಾರ್ಡ್‌ ನಂಬರ್‌ನೊಟ್ಟಿಗೆ ಸರಿಯಾಗಿ ಜೋಡಣೆಯಾಗದಿದ್ದರಿಂದ ಇನ್ನೂ ಅಸಂಖ್ಯಾತ ರೈತರಿಗೆ ಬೆಳೆ ವಿಮೆ ಬಿಡುಗಡೆಯಾಗಿಲ್ಲ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು