ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಮೌಂಟೇನ್ ಬೈಕ್ ಸೈಕ್ಲಿಂಗ್‌ ಮೋಡಿ

ರಾಜ್ಯಮಟ್ಟದ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್‌
Last Updated 15 ಸೆಪ್ಟೆಂಬರ್ 2019, 4:28 IST
ಅಕ್ಷರ ಗಾತ್ರ

ವಿಜಯಪುರ: ಅಲ್ಲಿ ಎಲ್ಲರ ಮೊಗದಲ್ಲೂ ಗೆಲುವಿನ ಉತ್ಸಾಹ ಮನೆ ಮಾಡಿತ್ತು. ದೂಳಿನ ಮಧ್ಯೆಯೇ ಅವರೆಲ್ಲರೂ ಪದಕದತ್ತ ಗುರಿ ನೆಟ್ಟಿದ್ದರು. ಗೆಲುವಿನ ದಡ ತಲುಪಲು ಪ್ರತಿಯೊಬ್ಬರೂ ಕಾತುರರಾಗಿದ್ದರು..ಆಯೋಜಕರು ಹಸಿರು ನಿಶಾನೆ ತೋರುತ್ತಿದ್ದಂತೆಯೇ ಪೆಡಲ್‌ ತುಳಿಯಲು ಆರಂಭಿಸಿದರು..

–ಇವು ನಗರದ ಸೊಲ್ಲಾಪುರ ರಸ್ತೆಯ ಬಿಎಲ್‌ಡಿ ಸಂಸ್ಥೆಯ ಎಎಸ್‌ಪಿ ಮಹಾವಿದ್ಯಾಲಯದ ಹಿಂಭಾಗದಲ್ಲಿ ಶನಿವಾರ ಕಂಡು ಬಂದ ದೃಶ್ಯ.

ಕರ್ನಾಟಕ ಹಾಗೂ ಜಿಲ್ಲಾ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿರುವ ಎರಡು ದಿನಗಳ 15ನೇ ರಾಜ್ಯಮಟ್ಟದ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಸೈಕ್ಲಿಸ್ಟ್‌ಗಳು ಎಲ್ಲರ ಗಮನ ಸೆಳೆದರು.

ಬೆಂಗಳೂರು, ಮೈಸೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ ಮತ್ತು ಬೀದರ್ ಜಿಲ್ಲೆಗಳ 90 ಬಾಲಕರು ಹಾಗೂ 60 ಬಾಲಕಿಯರು ಸೇರಿ ಒಟ್ಟು 150 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ.

4.5 ಕಿ.ಮೀ ಉದ್ದದ ಒಂದು ಲ್ಯಾಪ್‌ ಟೈಮ್ ಟ್ರೈಯಲ್‌ನಲ್ಲಿ ಭಾಗವಹಿಸಿದ್ದ ಸೈಕ್ಲಿಸ್ಟ್‌ಗಳು ನಾ ಮುಂದು ತಾ ಮುಂದು ಎಂದು ಉತ್ಸಾಹದಿಂದ ಸಾಗುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದರು. ತರಬೇತುದಾರರು ಅವರನ್ನು ಹುರಿದುಂಬಿಸಿ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

14, 15, 16 ಹಾಗೂ 18 ವಯೋಮಾನದ ಬಾಲಕ–ಬಾಲಕಿಯರು ಹಾಗೂ ಪುರುಷ–ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆದವು.

ಕ್ರೀಡಾ ಮೀಸಲಾತಿ ಕೊಡಿಸಿ: ‘ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಸೈಕ್ಲಿಸ್ಟ್‌ಗಳಿಗೆ ಮೀಸಲಾತಿ ಕೊಡುವ ಬಗ್ಗೆ ಕೂಡಲೇ ಗೆಜೆಟ್ ಪ್ರಕಟಿಸಬೇಕು’ ಎಂದು ಕರ್ನಾಟಕ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಷನ್‌ ಗೌರವ ಕಾರ್ಯದರ್ಶಿ ಎಸ್.ಎಂ.ಕುರಣೆ ಮನವಿ ಮಾಡಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈ ಮೊದಲು ಮೀಸಲಾತಿ ಕೊಡಲಾಗುತ್ತಿತ್ತು. ಆದರೆ, 10 ವರ್ಷಗಳಿಂದ ಅದು ಸ್ಥಗಿತಗೊಂಡಿತ್ತು. ಈಗ ಮತ್ತೆ ಕೊಡುವ ಬಗ್ಗೆ ಚರ್ಚೆಯಾಗಿದ್ದು, ಮುಖ್ಯಮಂತ್ರಿ ಗಮನಕ್ಕೆ ತಂದು ಶೀಘ್ರವೇ ಗೆಜೆಟ್‌ ಅಧಿಸೂಚನೆ ಹೊರಡಿಸಬೇಕು’ ಎಂದು ಹೇಳಿದರು.

‘ವೆಲೋಡ್ರೋಮ್ 30 ವರ್ಷಗಳ ಕನಸಾಗಿದ್ದು, ಅದು ಇನ್ನೂ ಈಡೇರುತ್ತಿಲ್ಲ. ಇದರಿಂದ ಜಿಲ್ಲೆಯ ಸೈಕ್ಲಿಸ್ಟ್‌ಗಳಿಗೆ ಅಭ್ಯಾಸ ಮಾಡಲು ತೊಂದರೆ ಆಗುತ್ತಿದೆ. ಆದ್ದರಿಂದ ಕೂಡಲೇ ಈ ಬಗ್ಗೆಯೂ ಗಮನಹರಿಸಬೇಕು’ ಎಂದು ಮನವಿ ಮಾಡಿದರು.

ಕರ್ನಾಟಕ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ ಎಂ.ಗೋರೆ, ಜಿಲ್ಲಾ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಉಪಾಧ್ಯಕ್ಷರಾದ ರಮೇಶ ಪಾಟೀಲ, ರಾಜಶೇಖರ ಶೀಲವಂತ, ಕಾರ್ಯದರ್ಶಿ ಎಸ್.ಎನ್.ಫಡತರೆ, ಆರ್.ಎಸ್.ಪೂಜೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT