ಬುಧವಾರ, ಮಾರ್ಚ್ 3, 2021
19 °C
ಸಂವಾದ ಕಾರ್ಯಕ್ರಮದಲ್ಲಿ ರಂಗಭೂಮಿ, ಚಲನಚಿತ್ರ, ರಾಜಕೀಯ ಪಯಣ ಬಿಚ್ಚಿಟ್ಟ ಚಂದ್ರು

ಚುನಾವಣಾ ರಾಜಕಾರಣಕ್ಕೆ ‘ಮುಖ್ಯಮಂತ್ರಿ’ ಚಂದ್ರು ಇತಿಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶಿವಮೊಗ್ಗ: ಚುನಾವಣಾ ರಾಜಕಾರಣಕ್ಕೆ ಮತ್ತೆ ಎಂದೂ ಹೋಗುವುದಿಲ್ಲ. ಕಾಂಗ್ರೆಸ್ ಬಯಸಿದರೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವೆ. ವಹಿಸುವ ಜವಾಬ್ದಾರಿ ನಿಭಾಯಿಸುವೆ ಎಂದು ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

ಪ್ರೆಸ್‌ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿ ಹಲವು ಸ್ಥಾನಮಾನ ನೀಡಿದರೂ ಪಕ್ಷ ಬಿಟ್ಟದ್ದು ಏಕೆ ಎಂಬ ಪ್ರಶ್ನೆಗೆ, ಬಿಜೆಪಿ ರಾಜ್ಯ ನಾಯಕತ್ವ ಅಂದುಕೊಂಡಂತೆ ಇಲ್ಲ. ನಿಷ್ಠರಿಗೆ, ಅರ್ಹರಿಗೆ ಅಲ್ಲಿ ಬೆಲೆ ಸಿಗಲಿಲ್ಲ. ಕೆಲವು ಘಟನೆಗಳು ಮನಸ್ಸಿಗೆ ನೋವು ತಂದವು. ಆದರೆ, ಯಾರನ್ನೂ ದೂರಲಿಲ್ಲ. ಟೀಕೆ ಮಾಡಲಿಲ್ಲ. ಸದ್ದಿಲ್ಲದೆ ಪಕ್ಷ ಬದಲಿಸಿದೆ ಎಂದು ಪ್ರತಿಕ್ರಿಯೆ ನೀಡಿದರು.

ಟಿ.ಎಸ್‌. ಲೋಹಿತಾಶ್ವ ಅವರು ಕನ್ನಡಕ್ಕೆ ಅನುವಾದಿಸಿದ ‘ಮುಖ್ಯಮಂತ್ರಿ’ ನಾಟಕ ಮೊದಲ ಬಾರಿ ಪ್ರದರ್ಶನವಾಗುವಾಗ 1980ರಲ್ಲಿ ಅನಿರೀಕ್ಷಿತವಾಗಿ ಮುಖ್ಯಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಮುಂದೆ ಚಂದ್ರಶೇಖರನಾದ ನನಗೆ ಆ ನಾಟಕದ ಹೆಸರು ಅಂಟಿಕೊಂಡಿತು. ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಸದನದಲ್ಲೂ ಪ್ರಸ್ತಾಪವಾಗಿ ‘ಮುಖ್ಯಮಂತ್ರಿ’ ಚಂದ್ರು ಎಂದೇ ಗೆಜೆಟ್ ನೋಟಿಫಿಕೇಷನ್ ಮಾಡಿದರು. ನಂತರ ನಾನು ಶಾಶ್ವತ ‘ಮುಖ್ಯಮಂತ್ರಿ’ಯಾದೆ ಎಂದು ಅನುಭವ ಬಿಚ್ಚಿಟ್ಟಿರು.

ಕಲಾಗಂಗೋತ್ರಿ ಕಲಾವಿದರು ಅಭಿನಯಿಸಿದ ಮುಖ್ಯಮಂತ್ರಿ ನಾಟಕ ಸುಮಾರು 38 ವರ್ಷಗಳಿಂದ ರಾಜ್ಯ, ದೇಶ, ವಿದೇಶಗಳಲ್ಲೂ ಪ್ರದರ್ಶನ ಕಂಡಿದೆ. ಡಿಸೆಂಬರ್ 4ರಂದು ಬೆಂಗಳೂರಿನಲ್ಲಿ 700ನೇ ಪ್ರದರ್ಶನ ಕಾಣಲಿದೆ. ಈ ಎಲ್ಲ ಪ್ರದರ್ಶನಗಳಲ್ಲೂ ಮುಖ್ಯಮಂತ್ರಿ ಪಾತ್ರ ತಾವೇ ಮಾಡಿರುದು ದಾಖಲೆ ಎಂದರು.

ಎಲ್ಲ ಪ್ರದರ್ಶನಗಳಲ್ಲೂ ರಂಗಮಂದಿರ ತುಂಬಿರುತ್ತದೆ. ಪ್ರತಿ ಪ್ರದರ್ಶನವೂ ವಿಭಿನ್ನವಾಗಿರುತ್ತದೆ. ಒಂದು ನಾಟಕದಲ್ಲಿ ಇದ್ದ ಸಂಭಾಷಣೆ ಎಷ್ಟೋ ಬಾರಿ ಬದಲಾಗಿರುತ್ತದೆ. ಅದಕ್ಕೆ ಕಾರಣ ಹಿಂದಿನ ಸಂಭಾಷಣೆ ಮರೆತು ಹೋಗಿರುತ್ತದೆ. ಆಗ ತಕ್ಷಣ ಬದಲಿ ಮಾತು ತೇಲಿ ಬಿಟ್ಟಿರುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕಿರುತೆರೆ, ಸಿನೆಮಾ ಎಲ್ಲ ಕ್ಷೇತ್ರಗಳಿಗೂ ರಂಗಭೂಮಿ ತಾಯಿ ಬೇರು. ಇದು ಬದುಕು ಕಲಿಸಿಕೊಡುತ್ತದೆ. ಇದರಲ್ಲಿ ಸಿಗುವ ಆನಂದ ಅಪರಿಮಿತ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು, ಕೀರ್ತಿ, ಹಣ ಸಿಗಬಹುದು. ತೃಪ್ತಿ ನೀಡುವ ಏಕೈಕ ಪ್ರಕಾರ ರಂಗಭೂಮಿ ಎಂದು ವಿಶ್ಲೇಷಿಸಿದರು.

ಸುಮಾರು 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕಿರುತೆರೆಯಲ್ಲೂ ನಟಿಸಿದ್ದೇನೆ. ರಂಗಭೂಮಿ ತೃಪ್ತಿ ತಂದಿದೆ. ಮುಖ್ಯಮಂತ್ರಿ ನಾಟಕ ದಾಖಲೆಯತ್ತ ಸಾಗಿದೆ. ಇದು ಈಗ 700ನೇ ಪ್ರದರ್ಶನದತ್ತ ದಾಪುಗಾಲು ಹಾಕಿದೆ. ಸುಮಾರು 24 ಪಾತ್ರಗಳು ಈ ನಾಟಕದಲ್ಲಿ ಬರುತ್ತವೆ. ಹಲವು ಪಾತ್ರಧಾರಿಗಳು ನಿಧನರಾಗಿದ್ದಾರೆ. ಕೆಲವರಿಗೆ ವಯಸ್ಸಾಗಿದೆ. 24 ಪಾತ್ರಗಳಿದ್ದರೂ ಸುಮಾರು 200ಕ್ಕೂ ಹೆಚ್ಚು ಜನರು ಈ ಪಾತ್ರಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಪಾತ್ರದಲ್ಲಿ ಮಾತ್ರ ತಾವೊಬ್ಬರೇ ಇನ್ನೂ ನಟಿಸುತ್ತಿರುವುದು. ಇದು ಗಿನ್ನೆಸ್ ದಾಖಲೆಯಾಗಲಿದೆ ಎಂದು ವಿವರ ನೀಡಿದರು.

ಇದೊಂದು ರಾಜಕೀಯ ವಿಡಂಬನೆಯ ನಾಟಕ. ಎಲ್ಲ ಕಾಲಕ್ಕೂ ಸಲ್ಲುತ್ತದೆ. ಈ ರಾಜ್ಯದ ಸುಮಾರು 13 ಮುಖ್ಯಮಂತ್ರಿಗಳು ಈ ನಾಟಕ ನೋಡಿ ಮೆಚ್ಚಿಕೊಂಡಿದ್ದಾರೆ. ಹಲವು ಮುಖ್ಯಮಂತ್ರಿಗಳು ಇನ್ನಷ್ಟು ವಿಷಯ ಸೇರಿಸಲು ಸಲಹೆ ನಿಡಿದ್ದರು. ಅಂದಿನ ಮುಖ್ಯಮಂತ್ರಿ ಗುಂಡೂರಾವ್‌ ಸೇರಿದಂತೆ ಇಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿವರೆಗೆ ಎಲ್ಲರೂ ನಾಟಕ ಕುರಿತು ಅನಿಸಿಕೆ ಹಂಚಿಕೊಂಡಿದ್ದಾರೆ ಎಂದು ಸ್ಮರಿಸಿದರು.

ಈ ನಾಟಕ ಸೆ. 8ರಂದು ಶೃಂಗೇರಿ, 9ರಂದು ತೀರ್ಥಹಳ್ಳಿಯಲ್ಲಿ ಪ್ರದರ್ಶನಗೊಳ್ಳಲಿದೆ. ಡಾ.ಬಿ.ವಿ. ರಾಜಾರಾಂ ನಿರ್ದೇಶಿಸಿದ ಈ ನಾಟಕದಲ್ಲಿ ಮಂಜುನಾಥ್ ಹೆಗ್ಡೆ, ಶ್ರೀನಿವಾಸ್ ಮೇಸ್ಟ್ರು, ಮುರಳೀಧರ್, ಗಂಗೋತ್ರಿ ಮಂಜು ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ರಂಗಭೂಮಿಗೆ ಯಾವುದೇ ಸರ್ಕಾರಗಳು ನಿರೀಕ್ಷಿತ ಪ್ರೋತ್ಸಾಹ ನೀಡಿಲ್ಲ. ಪ್ರವಾಸೋದ್ಯಮ ಇಲಾಖೆ ಕಡೆಗಣಿಸಿದಂತೆ ರಂಗಭೂಮಿಯನ್ನೂ ಕಡೆಗಣಿಸಲಾಗಿದೆ. ಇದು ಬೇಸರದ ಸಂಗತಿ ಎಂದರು.

ನಿರ್ದೇಶಕ ಬಿ.ವಿ. ರಾಜಾರಾಂ,  ಪ್ರೆಸ್‌ಟ್ರಸ್ಟ್ ಉಪಾಧ್ಯಕ್ಷ ಗಿರೀಶ್ ಉಮ್ರಾಯ್, ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು