ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ತುಂಬಾ ಮುನಿರತ್ನ ಚಿತ್ರದ ಟಿ–ಶರ್ಟ್‌..!

ಕಟಕಟೆಯಲ್ಲಿ ಮುಂದುವರಿದ ಮುನಿರಾಜುಗೌಡ ಸಾಕ್ಷಿ
Last Updated 19 ಏಪ್ರಿಲ್ 2022, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ತಮಿಳುನಾಡು ನೋಂದಣಿ ಸಂಖ್ಯೆಯ ಲಾರಿ ಆ ರಾತ್ರಿ ನಮ್ಮವರ ಕಣ್ಣಿಗೆ ಬಿದ್ದಿದ್ದೇ ತಡ ಯಶವಂತಪುರದ ಹಾದಿ ಹಿಡಿಯಿತು. ಅಲ್ಲಿಂದ ಅಂಬೇಡ್ಕರ್ ಪ್ರತಿಮೆ ಬಳಿ ನಿಂತಿತು. ನಾವು ಹತ್ತಿರ ಹೋಗುತ್ತಿದ್ದಂತೆ ಲಾರಿ ಅಲ್ಲಿಂದ ಮತ್ತೆ ಮುಂದಕ್ಕೋಡಿತು. ನಾವೂ ನಮ್ಮ ವಾಹನದಲ್ಲಿ ಹಿಂಬಾಲಿಸಿದೆವು. ಯಶವಂತಪುರ ಠಾಣೆ ಮುಂದೆ ಸಾಗಿದ ಲಾರಿ ಅಲ್ಲಿಂದ ಡಾಲರ್ಸ್‌ ಕಾಲೊನಿ ಬಳಿ ಹೋಗುತ್ತಿದ್ದಾಗ ಕಡೆಗೂ ಒಂದೆಡೆ ಅಡ್ಡಹಾಕಿ ನಿಲ್ಲಿಸಿದೆವು. ಅದರ ತುಂಬಾ ಮುನಿರತ್ನ ಅವರ ಚಿತ್ರಗಳಿದ್ದ ಟಿ–ಶರ್ಟ್‌ಗಳಿದ್ದವು..!’

ಈಗ ಸಚಿವರಾಗಿರುವ ಮುನಿರತ್ನ ಅವರು 2018ರ ಚುನಾವಣೆಯಲ್ಲಿರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪ‍ರ್ಧಿಸಿದ್ದರು. ಅಂದು ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಪಿ.ಎಂ. ಮುನಿರಾಜು ಗೌಡ, ಹೈಕೋರ್ಟ್‌ನ ಸಾಕ್ಷಿ ಮುಂದುವರಿಕೆಯ ವೇಳೆ ಕಟಕಟೆಯಲ್ಲಿ ನಿಂತುಮುಖ್ಯ ವಿಚಾರಣೆಯ ಪ್ರಶ್ನೆಗೆ ಉತ್ತರಿಸುತ್ತಾ ಈ ಘಟನೆಯನ್ನು ನ್ಯಾಯಪೀಠಕ್ಕೆ ವಿವರಿಸಿದ್ದು ಹೀಗೆ.

‘ಮುನಿರತ್ನ ಅವರ ಅಂದಿನ ಆಯ್ಕೆಯನ್ನು ಜನತಾ ಪ್ರತಿನಿಧಿ ಕಾಯ್ದೆ–1951ರ ಕಲಂ 123ರ ಅನುಸಾರ ಅನೂರ್ಜಿತ ಎಂದು ಸಾರಬೇಕು’ ಎಂದು ಕೋರಿ ವಿಧಾನಪರಿಷತ್‌ನ ಬಿಜೆಪಿ ಸದಸ್ಯರೂ ಆಗಿರುವ ಮುನಿರಾಜು ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮುಂದುವರೆಸಿತು.

ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್‌ ಪ್ರಶ್ನೆಗಳಿಗೆ ಉತ್ತರಿಸಿದ ಮುನಿರಾಜು ಗೌಡ, ‘ಲಾರಿ ಡ್ರೈವರ್‌ ದೊರೈ ಕಡೆಗೂ ನಮ್ಮವರ ಕೈಗೆ ಸಿಕ್ಕಿಬಿದ್ದ. ನಮ್ಮವರು ಪೊಲೀಸರಿಗೆ ಮುಂಚಿತವಾಗಿಯೇ ತಿಳಿಸಿದ್ರಿಂದಾಗಿ ಸ್ಥಳದಲ್ಲಿದ್ದ ಕೆಡೆಟ್‌ಗಳು ಅವನನ್ನು ಸುತ್ತುವರೆದರು..’ ಎಂದು ವಿವರಿಸಿದರು.

ಇದಕ್ಕೂ ಮುನ್ನ ಜಾಲಹಳ್ಳಿ, ಲಗ್ಗೆರೆ ಮುಂತಾದ ಕಡೆ ಕುಕ್ಕರ್‌ಗಳು, ತವಾ ಮತ್ತು ಸೀರೆಗಳನ್ನು ಹಂಚಿದ್ದು ಹಾಗೂ ಈ ಸಂಗತಿಯನ್ನು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿರುವುದನ್ನು ಮುನಿರಾಜುಗೌಡ ನ್ಯಾಯಪೀಠಕ್ಕೆ ವಿವರಿಸಿದರು. ಅಲ್ಲದೆ ಎಲ್ಲೆಲ್ಲಿ ಚುನಾವಣಾ ಅಕ್ರಮಗಳು ನಡೆದಿದ್ದವು, ಮುನಿರತ್ನ ಯಾವ ಪ್ರದೇಶಗಳಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಪಡೆದುಕೊಂಡು ಕುಕ್ಕರ್‌ ಹಾಗೂ ಇತರೆ ವಸ್ತುಗಳನ್ನು ಹಂಚಿದ್ದರು ಎಂಬ ಬಗ್ಗೆ ಖಚಿತ ಧ್ವನಿಯಲ್ಲಿ ಉತ್ತರಿಸಿದರು.

ಆಕ್ಷೇಪ: ಈ ಘಟನೆಗಳ ಫೋಟೊ ಮತ್ತು ಫೇಸ್‌ಬುಕ್‌ಗೆ ಅಪ್‌ಲೋಡ್‌ ಆಗಿದ್ದ ವಿವರಣೆಗಳ ಸಿ.ಡಿಗಳನ್ನು ದಾಖಲಿಸಿಕೊಳ್ಳುವಾಗ ಮುನಿರತ್ನ ಪರ ವಕೀಲ ಆರ್‌.ಹೇಮಂತರಾಜ್‌, ವಿಜಯ್‌ ಆಕ್ಷೇಪ ವ್ಯಕ್ತಪಡಿಸಿದರು. ‘ಈ ಸಾಕ್ಷ್ಯಗಳು ಮಾಹಿತಿ ತಂತ್ರಜ್ಞಾನಕಾಯ್ದೆ–2000ದ ಕಲಂ 65ಬಿ ಅನ್ವಯ ಪರಿಶೀಲನೆಗೆ ಒಳಪಡಬೇಕು‘ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT