ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್‌ಎಂವಿ ವಾಸದ ಮನೆ ಈಗ ಮ್ಯೂಸಿಯಂ

ಆಸಕ್ತರ ವೀಕ್ಷಣೆಗೆ ಅವಕಾಶ
Last Updated 13 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಭದ್ರಾವತಿ: ಎತ್ತ ಕಣ್ಣು ಹಾಯಿಸಿದರೂ ಕಾಣುವ ಹಚ್ಚ ಹಸಿರ ಹೊನಲು, ಹಕ್ಕಿಗಳ ಚಿಲಿಪಿಲಿ ನಾದದ ಸದ್ದು, ದಿಟ್ಟಿಸಿದಷ್ಟು ಕಾಣುವ ಹಸಿರ ರಾಶಿ, ತಲೆ ಎತ್ತರಿಸಿ ನೋಡಬೇಕಾದ ಮರಗಳ ಸಾಲು, ಸಂಪಿಗೆಯ ಸುಗಂಧ ಸ್ವಾದದ ನಡುವೆ ಕೈ ಬೀಸಿ ಕರೆಯುತ್ತಿದೆ ಸರ್‌ಎಂವಿ ವಸ್ತು ಸಂಗ್ರಹಾಲಯ (ಮ್ಯೂಸಿಯಂ)

ಸಸ್ಯಕಾಶಿಯ ಸಂಜೀವಿನಿ ವೃಕ್ಷಗಳ ಸಾಲು, ಹಸಿರು ಹೊದಿಕೆಯ ನಡುವೆ ಎದ್ದು ಕಾಣುವ ಶತಮಾನದ ಇತಿಹಾಸ ಹೇಳುವ ಸರ್.ಎಂ. ವಿಶ್ವೇಶ್ವರಯ್ಯ ಬದುಕು ನಡೆಸಿದ ಮನೆ ಈಗ ವಿಐಎಸ್ಎಲ್ ಆಡಳಿತವರ್ಗ ವಸ್ತು ಸಂಗ್ರಹಾಲಯವನ್ನಾಗಿ ಮಾಡಿ ಅವರನ್ನು ಸ್ಮರಿಸಿದೆ.

ವಿಐಎಸ್ಎಲ್ ಕಾರ್ಖಾನೆಗೆ ಬಿ.ಎಚ್ ರಸ್ತೆ ಮೂಲಕ ಹೋಗುವ ದ್ವಿಪಥ ರಸ್ತೆಯಲ್ಲಿ ಸುಮಾರು ಅರ್ಧ ಕಿ.ಮೀ ಸಾಗಿದರೆ ಸಿಗುವ ಕಾರ್ಖಾನೆ ಅತಿಥಿಗೃಹಕ್ಕೆ ಸಾಗುವ ರಸ್ತೆಯಲ್ಲಿ ಎಡಕ್ಕೆ ತಿರುಗಿದರೆ ಈ ಮ್ಯೂಸಿಯಂ ಉದ್ಯಾನಗಳ ಸಾಲಿನ ಮಧ್ಯದಲ್ಲಿ ನೆಲೆ ಕಂಡಿದೆ.

ಮನೆಯ ಸುತ್ತಲೂ ನಡೆದಾಡಲು ಇರುವ ಪ್ಯಾಸೇಜ್, ಮನೆಯ ಒಳ ಪ್ರವೇಶದಲ್ಲಿ ಪ್ರತಿಷ್ಟಾಪಿಸಿರುವ ಸರ್.ಎಂ. ವಿಶ್ವೇಶ್ವರಯ್ಯ ಅವರ ಕಂಚಿನ ಪುತ್ಥಳಿ ಒಳ ಪ್ರವೇಶಿಸಿದ ವೀಕ್ಷಕರ ಹುರುಪನ್ನು ಹೆಚ್ಚು ಮಾಡುವ ರೀತಿಯಲ್ಲಿ ನೆಲೆ ನಿಂತಿದೆ.

ಪ್ರಧಾನಿ ಜವಾಹರಲಾಲ್ ನೆಹರೂ ಅವರೊಂದಿಗೆ ತಮ್ಮ ಇಡೀ ಕುಟುಂಬದ ಜತೆ ಕುಳಿತಿರುವ ಸರ್‌ಎಂವಿ ಭಾವಚಿತ್ರ, ಭಾರತ ರತ್ನ ಪ್ರಶಸ್ತಿಯ ಚಿತ್ರ, ಅವರು ಉಪಯೋಗಿಸಿದ್ದ ಟೇಬಲ್, ಕುರ್ಚಿ, ಅವರ ದೈನಂದಿನ ದಿನಚರಿಯ ಚಿತ್ರಣ ವಿಶೇಷತೆ ಸಾರುತ್ತದೆ.

1923ರಿಂದ 1928ರ ತನಕ ವಿಐಎಸ್ಎಲ್ ಕಾರ್ಖಾನೆ ಅಧ್ಯಕ್ಷರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ಅವರು ಇದೇ ಮನೆಯಲ್ಲಿ ತಮ್ಮ ಬದುಕು ನಡೆಸಿದ್ದರು. ಆಗ ಇದನ್ನು ಚೇರ್ಮನ್ಸ್ ಬಂಗ್ಲೆ ಎಂದು ಕರೆಯಲಾಗಿತ್ತು ಎಂಬುದನ್ನು ಸಾರುತ್ತವೆ ಅಲ್ಲಿನ ಫಲಕಗಳು.

ಸಂಗ್ರಹಾಲಯ ಗೋಡೆಗಳ ಮೇಲೆ ಹಾಕಿರುವ ಸರ್‌ಎಂವಿ ಬದುಕಿನ ವಿವರ, ಇನ್ನಿತರೆ ಮಾಹಿತಿ ನೀಡುವ ಫಲಕಗಳ ಸಾಲು, ಜತೆಗೆ ಕಾರ್ಖಾನೆ ಉತ್ಪಾದನಾ ಘಟಕಗಳ ಚಿತ್ರಗಳ ಸಾಲು, ಕಾರ್ಖಾನೆ ನಗರಾಡಳಿತ ಪ್ರದೇಶದಲ್ಲಿ ನೆಲೆ ನಿಂತಿರುವ ಕಟ್ಟಡಗಳ ವಿವರ ಕೆಮ್ಮಣ್ಣುಗುಂಡಿ, ತಣಿಗೆಬೈಲು ಅದಿರು ಪ್ರದೇಶಗಳ ಪ್ರತಿಕೃತಿಯ ಮಾದರಿಗಳು ಹಲವು ಇತಿಹಾಸದ ವಿಷಯನ್ನು ನೆನಪಿಸುತ್ತದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ ಪ್ರತಿಮೆಗಳು, ವಿಐಎಸ್ಎಲ್ ಕಾರ್ಖಾನೆಯ ಒಳನೋಟದ ವಿವರವನ್ನು ಸಾರುವ ಪ್ರತಿಕೃತಿ, ಜತೆಗೆ ಅಧ್ಯಕ್ಷರ ವಸತಿಗೃಹ, ಸಂಗ್ರಹಾಲಯ ರೀತಿಯಲ್ಲಿ ಬದಲಾದ ಸನ್ನಿವೇಶಗಳ ವಿವರಣೆ ಈ ಮ್ಯೂಸಿಯಂ ವೈಶಿಷ್ಟ್ಯ.

‘2005ರಲ್ಲಿ ಈ ಬಂಗ್ಲೆಯನ್ನು ವಸ್ತು ಸಂಗ್ರಹಾಲಯ ರೀತಿಯಲ್ಲಿ ಮಾರ್ಪಾಟು ಮಾಡಲಾಗಿದ್ದು, ಸರ್‌ಎಂವಿ ಅವರ ಬದುಕಿನ ಅನೇಕ ವಿಷಯಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ. ಇದನ್ನು ನೋಡಿ ಇತಿಹಾಸ ಅರಿಯುವ ಎಲ್ಲರಿಗೂ ಮುಕ್ತ ಅವಕಾಶವಿದೆ.
ಈ ಸಂಗ್ರಹಾಲಯ ವೀಕ್ಷಣೆಗೆ ಬರುವರು ಕಾರ್ಖಾನೆ ಮುಂಭಾಗದ ಭದ್ರತಾ ಕಚೇರಿಯನ್ನು ಸಂಪರ್ಕಿಸಿ ಅಲ್ಲಿಂದ ಅನುಮತಿ ಪಡೆದು ಇದರ ಒಳಾಂಗಣ ಪ್ರವೇಶಕ್ಕೆ ಅವಕಾಶವಿದೆ’ ಎನ್ನುತ್ತಾರೆ ಅಧಿಕಾರಿಗಳು.

ಬೇಸಿಗೆ ರಜೆಯ ಬಿಸಿಯ ನಡುವೆ ನಮ್ಮೂರು ಕಟ್ಟಿದ ಸರ್‌ಎಂವಿ ವಾಸದ ಮನೆಯನ್ನೊಮ್ಮೆ ವೀಕ್ಷಿಸಿ ಅಲ್ಲಿನ ಸುಂದರ ಪರಿಸರದ ತಣ್ಣನೆಯ ವಾತಾವರಣದ ಅನುಭವ ಪಡೆಯಲು ಎಲ್ಲರಿಗೂ ಅವಕಾಶವಿದೆ. ಇದಕ್ಕಾಗಿ ದೂರವಾಣಿ ಸಂಖ್ಯೆ 271621 ರಿಂದ 271629 ವರೆಗೂ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT