ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷದವರಾಗಿ ಕೆಲಸ ಮಾಡಿ

ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಜನತೆಗೆ ಚಿತ್ರನಟ ಪ್ರಕಾಶ್ ರೈ ಮನವಿ
Last Updated 7 ಏಪ್ರಿಲ್ 2018, 8:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಜಾಪ್ರಭುತ್ವದಲ್ಲಿ ಜನರೇ ಬಹುಸಂಖ್ಯಾತರು. ಅಧಿಕಾರದ ಚುಕ್ಕಾಣಿ ಹಿಡಿಯುವವರು ಅಲ್ಪಸಂಖ್ಯಾತರು. ಹೀಗಿರುವಾಗ ಅವರನ್ನು ಪ್ರಶ್ನಿಸಿ, ದೇಶ ಅಭಿವೃದ್ಧಿಯತ್ತ ಸಾಗುವಂತೆ ಮಾಡಲು ವಿರೋಧ ಪಕ್ಷದವರಂತೆ ಜನ ಕೆಲಸ ಮಾಡಬೇಕು ಎಂದು ಚಿತ್ರನಟ ಪ್ರಕಾಶ್ ರೈ ಮನವಿ ಮಾಡಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

‘ಸರ್ಕಾರಗಳು ಜನರ ಸಂಕಷ್ಟಗಳನ್ನು ಪರಿಹರಿಸುವ ಬದಲಾಗಿ ತಮ್ಮ ಪಕ್ಷದ ಸಿದ್ಧಾಂತಗಳನ್ನು ಜನರಲ್ಲಿ ತುಂಬುವ ಕೆಲಸ ಮಾಡುತ್ತಿವೆ. ನಾವು ನಿಮ್ಮನ್ನು ಆರಿಸಿ ಕಳುಹಿಸಿರುವುದು ಅದಕ್ಕಲ್ಲ. ಜನರ ಕಷ್ಟಗಳು, ನಿರೀಕ್ಷೆಗಳು ಬೆಟ್ಟದಷ್ಟಿವೆ. ಮೊದಲು ಇವುಗಳನ್ನು ಪರಿಹರಿಸಿ’ ಎಂದು ಆಗ್ರಹಿಸಿದರು.

‘ಪತ್ರಕರ್ತ ಎನ್ನುವುದು ಉದ್ಯೋಗವಲ್ಲ. ಸಾಮಾಜಿಕ ಕೆಲಸ ಮಾಡೋಕೆ ಬಂದಿರುವವರನ್ನು ಗುರುತಿಸಲು ಅದೊಂದು ಐಡೆಂಟಿಟಿ. ನಿಮ್ಮಂಥವರು, ನನ್ನಂಥವರು ಸಮಾಜದಲ್ಲಿ ನಡೆಯುವ ಘಟನೆಗಳನ್ನು ನೋಡಿ ಮೌನವಾದರೆ, ನಾವು ಹೇಡಿಯಾಗುತ್ತೇವೆ’ ಎಂದು ರೈ ಹೇಳಿದರು.

ದೇಶದಲ್ಲಿ ಇತ್ತೀಚೆಗೆ ಎಲ್ಲವೂ ರಾಜಕೀಯವಾಗುತ್ತಿದೆ. ಯಾವುದಾದರೂ ಕೊಲೆಯಾದರೆ, ಅದನ್ನು ಹಿಂದೂ ಕೊಲೆ, ಮುಸ್ಲಿಂ ಕೊಲೆ ಎಂದು ವಿಭಜಿಸಲಾಗುತ್ತಿದೆಯೇ ಹೊರತು ಅದು ಮನುಷ್ಯನ ಕೊಲೆ ಎಂದು ಅರ್ಥೈಸುತ್ತಿಲ್ಲ. ಒಬ್ಬನ ಹತ್ಯೆಯಾದರೆ, ನೂರು ಜನರನ್ನು ಸಾಯುಸುತ್ತೇವೆ ಎಂಬ ಕೊಲ್ಲುವ ಸಂಸ್ಕೃತಿಯನ್ನು ಜನರಲ್ಲಿ ತುಂಬಲಾಗುತ್ತಿದೆ ಎಂದು ವಿಷಾದಿಸಿದರು.

‘ಭ್ರಷ್ಟಾಚಾರಕ್ಕಿಂತಲೂ ಜಾತಿವಾದ, ಕೋಮುವಾದ ದೇಶಕ್ಕಂಟಿದ ದೊಡ್ಡ ರೋಗ. ದೇಶವನ್ನು ಮುಳುಗಿಸುವ ಇಂತಹ ದೊಡ್ಡ ಸಮಸ್ಯೆಗಳು ಮೊದಲು ಬಗೆಹರಿಯಬೇಕು. ಆದರೆ, ನಾನು ಕೋಮುವಾದದ ಬಗ್ಗೆ ಪ್ರಶ್ನಿಸಿದರೇ ನನ್ನನ್ನೂ ದೇಶ ವಿರೋಧಿ ಎಂದು ಬಿಂಬಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಾನೂ ಬಿಜೆಪಿ ವಿರೋಧಿಯೂ ಅಲ್ಲ, ಕಾಂಗ್ರೆಸ್ ಪರವೂ ಇಲ್ಲ. ಯಾವುದೇ ಸರ್ಕಾರ ಬಂದರೂ ನಾನು ಜನರ ಒಳಿತಿಗಾಗಿ ಅನ್ಯಾಯದ ವಿರುದ್ಧ ಪ್ರಶ್ನಿಸುತ್ತೇನೆ. ಆದರೆ, ಎಲ್ಲವನ್ನೂ ಪ್ರಕಾಶ್ ರೈ ಒಬ್ಬರೇ ಪ್ರಶ್ನಿಸಲಾಗುವುದಿಲ್ಲ. ಅನ್ಯಾಯ, ಅಕ್ರಮಗಳು ಈ ದೇಶದಲ್ಲಿನ ದುರಂತ ಎಂದು ಹೇಳುತ್ತಾ ಜನ ಸುಮ್ಮನೆ ಕುಳಿತುಕೊಳ್ಳಬಾರದು. ಪ್ರತಿಯೊಬ್ಬರೂ ಪ್ರಶ್ನಿಸುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಚರ್ಚಿಸುವುದು, ಪ್ರಶ್ನಿಸುವುದು, ಅದಕ್ಕೆ ಉತ್ತರ ಪಡೆಯುವುದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು. ಆದರೆ, ಇತ್ತೀಚೆಗೆ ಪ್ರಶ್ನಿಸುವವರನ್ನು ಹತ್ತಿಕ್ಕುವ ಪ್ರಯತ್ನ ಪ್ರಬಲವಾಗುತ್ತಿದೆ. ಒಬ್ಬಿಬ್ಬರು ಅನ್ಯಾಯದ ವಿರುದ್ಧ ಪ್ರಶ್ನಿಸಿದಾಗ ಅವರನ್ನು ಹಣ, ದರ್ಪದಿಂದ ಬಾಯಿ ಮುಚ್ಚಿಸಲಾಗುತ್ತಿದೆ. ಹೀಗಾಗಿ ಜನರ ಒಳಿತಿಗಾಗಿ ಪ್ರಶ್ನಿಸುವ ಮನಸ್ಥಿತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಎಂದಿಗೂ ನಮ್ಮ ನೈತಿಕ ಹಕ್ಕನ್ನು ಕಳೆದುಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.

‘ನಮ್ಮ ಹಕ್ಕಿನ ಹೋರಾಟ ಇಂದಿನ ಅಗತ್ಯವಾಗಿದ್ದು, ಇದಕ್ಕಾಗಿ ‘ಜಸ್ಟ್ ಆಸ್ಕಿಂಗ್ ಫೌಂಡೇಷನ್’ ರಚಿಸಲಾಗುತ್ತಿದೆ. ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೇ ಹಾಗೂ ಯಾವುದೇ ಸರ್ಕಾರ ಬಂದರೂ ಪ್ರಶ್ನಿಸುವ ಮನೋಭಾವ ಜನರಲ್ಲಿ ಬೆಳೆಸುವುದು ಇದರ ಮೂಲ ಉದ್ದೇಶ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ರಾಜ್ಯದಲ್ಲಿ 200 ಮಂದಿ ಇರುವ ವಾಟ್ಸ್ ಆ್ಯಪ್ ಗುಂಪನ್ನು ಕೂಡ ರಚಿಸಲಾಗಿದೆ’ ಎಂದರು.

ಹಸು ಯಾವಾಗ ಹಿಂದೂ ಆಯ್ತು ?

ಹಸು, ತೆಂಗಿನ ಕಾಯಿ ಯಾವಾಗ ಹಿಂದೂ ಆಯ್ತು. ಕುರಿ, ಖರ್ಜೂರ ಯಾವಾಗ ಮುಸ್ಲಿಂ ಆಯ್ತು. ಹಸಿರಿಗೆ, ಕೇಸರಿಗೆ ಯಾವಾಗ ಜಾತಿ ಬಂತು. ಇದನ್ನು ಪ್ರಶ್ನಿಸುವುದು ತಪ್ಪಾ ಎಂದು ಪ್ರಕಾಶ್ ರೈ ಪ್ರಶ್ನಿಸಿದರು.

ರೈ ಪ್ರಶ್ನೋತ್ತರ

ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಕಲಾವಿದರ ಸಂಖ್ಯೆ ಕಡಿಮೆ ಇದೆ. ಬೆನ್ನು ತಿರುಗಿಸುವವರ ಸಂಖ್ಯೆ ಹೆಚ್ಚು.ಅವರವರ ಭಾವಕ್ಕೆ, ಭಕ್ತಿಗೆ. ನಾನು ಬರೀ ಪ್ರತಿಭೆಯಿಂದಲೇ ಬೆಳೆದವನಲ್ಲ. ಇಂದಿನ ಸ್ಥಾನಮಾನಕ್ಕೆ ಜನರೇ ಕಾರಣರು. ಹೋರಾಟದಿಂದ ಸಮಾಜಕ್ಕೆ ಮತ್ತು ನನಗಿರುವ ಸಂಬಂಧ ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಬನ್ನಿ ಎಂದು ದೊಡ್ಡ ಕಲಾವಿದರಲ್ಲಿ ಕೇಳುತ್ತಿದ್ದೇನೆ. ಜನ ಪ್ರಶ್ನೆ ಮಾಡಲು ಶುರು ಮಾಡಿದ ಮೇಲೆ ಖಂಡಿತಾ ಎಲ್ಲರೂ ಬರುತ್ತಾರೆ. ನಾವು ಪ್ರಶ್ನಿಸಬೇಕು. ಆಗಲೇ ಉತ್ತರ ಸಿಗುತ್ತದೆ.

ನಿಮ್ಮ ಹೋರಾಟ ತಡವಾಯಿತಲ್ಲ:

ನನಗೆ ತಡವಾಗಿ ಜ್ಞಾನೋದಯವಾಗಿದೆ. ಈಗಲಾದರೂ ತಪ್ಪನ್ನು ಪ್ರಶ್ನಿಸುತ್ತಿರುವ ಸಂತೃಪ್ತಿ ಇದೆ. ಇದೇ ರೀತಿ ಇನ್ನು 10 ವರ್ಷದಲ್ಲಿ ಪ್ರತಿಯೊಬ್ಬರು ಪ್ರಶ್ನಿಸುವ ಮನೋ ಭಾವ ಬೆಳೆಸಿಕೊಳ್ಳಬೇಕು. ಅದೇ ನನ್ನ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT