ವಿದ್ಯಾರ್ಥಿನಿಗಳ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

ಸೋಮವಾರ, ಮೇ 27, 2019
29 °C
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನೂರಾರು ವಿದ್ಯಾರ್ಥಿಗಳಿಂದ ಖಂಡನೆ

ವಿದ್ಯಾರ್ಥಿನಿಗಳ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Prajavani

ಮೈಸೂರು: ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ರಕ್ಷಣೆಗೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಮಾನಸ ಗಂಗೋತ್ರಿಯ ’ಕ್ಲಾಕ್‌ ಟವರ್‌’ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ನೇತೃತ್ವದಲ್ಲಿ ಇಲ್ಲಿ ಸೇರಿದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಯಚೂರಿನ ವಿದ್ಯಾರ್ಥಿನಿಯ ಸಾವನ್ನು ಒಕ್ಕೊರಲಿನಿಂದ ಖಂಡಿಸಿದರು. ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಯನ್ನೂ ಕಟು ಶಬ್ದಗಳಲ್ಲಿ ವಿರೋಧಿಸಿದರು.

ಇದರ ಜತೆಗೆ, ತಮಿಳುನಾಡಿನ ಪೊನ್ಪರಪಿ ಎಂಬಲ್ಲಿ ದಲಿತರು ವಾಸಿಸುತ್ತಿದ್ದ ಗ್ರಾಮಕ್ಕೆ ನುಗ್ಗಿದ ಮೇಲ್ವರ್ಗದ ಜನರು ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದೂ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಎಲ್ಲಾ ಘಟನೆಗಳು ಮನುಕುಲದ ಮೇಲೆ ನಡೆದ ಅಮಾನವೀಯ ದಾಳಿಗಳಾಗಿವೆ. ಲಿಂಗ, ಜಾತಿ, ಧರ್ಮ ಮತ್ತು ವರ್ಣದ ಹೆಸರಿನಲ್ಲಿ ನಡೆದ ಘನಘೋರ ಕೃತ್ಯಗಳಾಗಿವೆ ಎಂದು ಕಿಡಿಕಾರಿದರು.

ರಾಯಚೂರಿನ ವಿದ್ಯಾರ್ಥಿನಿಯ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.

‌ತಮಿಳುನಾಡಿನ ಘಟನೆ ಕುರಿತೂ ನ್ಯಾಯಸಮ್ಮತವಾದ ತನಿಖೆ ನಡೆಯಬೇಕು. ನಿರ್ದಾಕ್ಷೀಣ್ಯವಾಗಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಜಾಗತಿಕ ಭಯೋತ್ಪಾದನೆಯ ವಿರುದ್ಧ ಎಲ್ಲ ರಾಷ್ಟ್ರಗಳೂ ಒಗ್ಗೂಡಬೇಕು. ಭಯೋತ್ಪಾದನೆಯನ್ನು ತೊಡೆದು ಹಾಕಲು ಎಲ್ಲರೂ ಒಂದುಗೂಡಿ ಯುದ್ಧ ಸಾರಬೇಕು ಎಂದು ಮನವಿ ಮಾಡಿದರು.

ಜಗತ್ತಿನಲ್ಲಿ ಶಾಂತಿ ನೆಲಸಬೇಕು. ರಾಜ್ಯ ಮತ್ತು ರಾಷ್ಟ್ರದಲ್ಲಿ ಹೆಣ್ಣು ಮಕ್ಕಳಿಗೆ ಭದ್ರತೆ ಕಲ್ಪಿಸಬೇಕು. ದಲಿತರ ಮೇಲಿನ ದೌರ್ಜನ್ಯಗಳು ನಿಲ್ಲಬೇಕು ಎಂದು ಅವರು ಒತ್ತಾಯಿಸಿದರು.‌

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಡಿ.ಮಹದೇವಸ್ವಾಮಿ ಮಂಗಲ, ಗೌರವಾಧ್ಯಕ್ಷ ಎಸ್.ಗೋಪಾಲ್, ‍ಪ್ರಧಾನ ಕಾರ್ಯದರ್ಶಿ ಮಹೇಶ್‌ಸೋಸ್ಲೆ, ಕಾರ್ಯದರ್ಶಿ ನಾಗೇಂದ್ರ, ಖಜಾಂಚಿ ಬಿ.ಎಲ್.ರಘು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.

ವಿದ್ಯಾರ್ಥಿನಿ ಸಾವಿಗೆ ಖಂಡನೆ‌

ಕನ್ನಡ ಜನಪರ ವೇದಿಕೆ ನೇತೃತ್ವದಲ್ಲಿ ಇಲ್ಲಿನ ಮಹಾತ್ಮ ಗಾಂಧಿ ಚೌಕದಲ್ಲಿ ಬುಧವಾರ ಕಾರ್ಯಕರ್ತರು ರಾಯಚೂರಿನ ವಿದ್ಯಾರ್ಥಿನಿಯ ಸಾವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.‌

ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಘಟನೆಗಳು ನಿಲ್ಲಬೇಕು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.‌

ಘೋಷಣಾ ಫಲಕಗಳನ್ನು ಹಿಡಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸೋಮೇಗೌಡ, ಗೌರವಾಧ್ಯಕ್ಷ ಹೊನ್ನೇಗೌಡ, ಕಾರ್ಯದರ್ಶಿ ಬಿ.ಡಿ.ನಿಂಗಪ್ಪ, ನಗರ ಘಟಕದ ಅಧ್ಯಕ್ಷ ಹೇಮಂತಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !