ಜನೌಷಧ ಮಳಿಗೆ: ಔಷಧಗಳ ಕೊರತೆ

7

ಜನೌಷಧ ಮಳಿಗೆ: ಔಷಧಗಳ ಕೊರತೆ

Published:
Updated:
Deccan Herald

ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಗಳು ಸಿಗಬೇಕು ಎಂಬ ಉದ್ದೇಶದಿಂದ ಆರಂಭಗೊಂಡ ‘ಜನೌಷಧ ಯೋಜನೆ’ಯು ಮೈಸೂರಿನಲ್ಲಿ ಕುಂಟುತ್ತ ಸಾಗಿದೆ. ಕೆಲವು ಮಳಿಗೆಗಳು ಮುಚ್ಚಿದ್ದರೆ, ಕೆಲವು ಮಳಿಗೆಗಳು ತೆರೆದಿದ್ದರೂ ‍ಪ್ರಯೋಜನವಿಲ್ಲದಂತೆ ಆಗಿವೆ.

ಇದಕ್ಕೆ ಮುಖ್ಯ ಕಾರಣ ಪ್ರತಿನಿತ್ಯ ಅಗತ್ಯವಿರುವ, ಹೆಚ್ಚು ಬಳಕೆಯಾಗುವ ಔಷಧಗಳು ಈ ಜನೆರಿಕ್‌ ಔಷಧ ಮಳಿಗೆಗಳಲ್ಲಿ ಸಿಗದೇ ಇರುವುದು. ಅದರಲ್ಲೂ ಹಿರಿಯ ನಾಗರಿಕರಿಗೆ ಸಹಾಯವಾಗುವ ಔಷಧಗಳು ಇಲ್ಲದೇ ಇರುವುದು. ಇದರಿಂದಾಗಿ ಹಿರಿಯ ನಾಗರಿಕರು ಹಿಂದಿನಂತೆ ಖಾಸಗಿ ಔಷಧ ಮಳಿಗೆಗಳಿಗೆ ಹೋಗಿ ದುಬಾರಿ ಬೆಲೆ ಕೊಟ್ಟು ಔಷಧಗಳನ್ನು ಖರೀದಿ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಕನಿಷ್ಠವೆಂದರೂ 15ಕ್ಕೂ ಹೆಚ್ಚು ಔಷಧಗಳು ನಗರದ ಜನೌಷಧ ಮಳಿಗೆಗಳಲ್ಲಿ ಸಿಗುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಹಿರಿಯರಿಗೆ ಅಗತ್ಯವಾಗಿ ಬೇಕಿರುವ ಇನ್ಸುಲಿನ್. ಇನ್ಸುಲಿನ್‌ ಪೆನ್‌ಗಳಲ್ಲಿ ಎರಡು ರೀತಿಯ ಔಷಧಗಳು ಸಿಗುತ್ತದೆ. ಹ್ಯೂಮನ್‌ ಮಿಕ್ಸ್‌ಚರ್ಡ್‌ 50:50 ಹಾಗೂ ಇನ್ಸುಲಿನ್‌ ಆಟ್ರಿಪಿಡ್. ಇವರೆಡನ್ನೂ ಚುಚ್ಚುಮದ್ದಿನ ಸ್ವರೂಪದಲ್ಲಿ ತೆಗೆದುಕೊಳ್ಳುವ ಅತ್ಯಗತ್ಯ ಔಷಧಿಗಳು.

ಈ ಎರಡೂ ವಿಧದ ಔಷಧಿಗಳನ್ನು ಮನೆಯಲ್ಲಿ ರೋಗಿಗಳು ತಾವೇ ಅಥವಾ ತಮ್ಮ ಕುಟುಂಬ ಸದಸ್ಯರ ಸಹಾಯದಿಂದಲೇ ಚುಚ್ಚುಮದ್ದಿನ ಮೂಲಕ ತೆಗೆದುಕೊಳ್ಳಬಹುದು. ಇವರಿಗೆ ಅನುಕೂಲ ಆಗಲಿ ಎಂದೇ ಪೆನ್‌ ಸ್ವರೂಪದ ಇಂಜೆಕ್ಷನ್‌ ಲಭ್ಯವಿದೆ. ಇದರೊಳಗೆ ಔಷಧಿ ತುಂಬಿರುವ ಕೊಳವೆ (ಕಾಟ್ರಿಜ್) ಇರಿಸಿ ಚುಚ್ಚಿಕೊಳ್ಳಬೇಕು. ಈ ಔಷಧಿಗಳಿಗೆ ಮಾರುಕಟ್ಟೆಯಲ್ಲಿ ₹ 280 ಇದೆ. ಆದರೆ, ಜನೌಷಧ ಮಳಿಗೆಯಲ್ಲಿ ಇದರ ಬೆಲೆ ಕೇವಲ ₹ 96.50. ಕಳೆದೆರಡು ತಿಂಗಳಿಂದ ಈ ಕಾಟ್ರಿಜ್‌ಗಳು ಈ ಮಳಿಗೆಗಳಲ್ಲಿ ಸಿಗದೇ ಇರುವುದು ಹಿರಿಯರ ನಾಗರಿಕರಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿವೆ.

ಜಿಲ್ಲೆಯಲ್ಲಿ ಒಟ್ಟು 32 ಜನೌಷಧ ಮಳಿಗೆಗಳಿವೆ. ನಗರ ಮಿತಿಯಲ್ಲಿ 21 ಮಳಿಗೆಗಳಿವೆ. ಈ ಮಳಿಗೆಗಳ ಪೈಕಿ ಹಿರಿಯ ನಾಗರಿಕರಿಗೆ ಬೇಕಾದ 15 ಅಗತ್ಯ ಔಷಧಿಗಳು ಸಿಗುತ್ತಿಲ್ಲ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ಹಿರಿಯ ವಕೀಲ ಹಾಗೂ ಮೈಸೂರು ಗ್ರಾಹಕರ ಪರಿಷತ್‌ ಸದಸ್ಯ ಕೊ.ಸು.ನರಸಿಂಹಮೂರ್ತಿ ‍‘ಪ್ರಜಾವಾಣಿ’ಗೆ ತಿಳಿಸಿದರು.

ಇದಕ್ಕೆ ಶಾಸಕ ಎಸ್‌.ಎ.ರಾಮದಾಸ್ ಅವರು ಪ್ರತಿಕ್ರಿಯಿಸಿ, ಅಗತ್ಯವಾಗಿರುವ 15ಕ್ಕೂ ಹೆಚ್ಚು ಔಷಧಿಗಳನ್ನು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ, 1 ತಿಂಗಳ ಕಾಲಾವಕಾಶ ಕೋರಿರುವುದು ಹೆಚ್ಚಾಯಿತು ಎನ್ನುವುದು ಹಿರಿಯ ನಾಗರಿಕರ ಅಳಲು.

ಏಕೀ ಸಮಸ್ಯೆ?: ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ರಾಜ್ಯ ಜನೌಷಧ ಮಾರುಕಟ್ಟೆ ವ್ಯವಸ್ಥಾಪಕ ರೇವಣ್ಣ ಆರಾಧ್ಯ, ಅತಿಯಾದ ಬೇಡಿಕೆಯು ಪೂರೈಕೆ ಮಾಡಲು ಕೈ ಕಟ್ಟಿಹಾಕಿದೆ ಎಂದು ತಿಳಿಸಿದರು.

‘ನಮ್ಮ ಬಳಿ ಇನ್ಸುಲಿನ್ ಕಾಟ್ರಿಜ್‌ಗಳು ಅತಿ ಕಡಿಮೆ ಬೆಲೆಗೆ ಸಿಗುತ್ತಿರುವ ವಿಚಾರ ತಿಳಿದ ನಾಗರಿಕರು ಮುಗಿಬಿದ್ದು ಔಷಧಿ ಖರೀದಿಸಿದ್ದಾರೆ. ಹಾಗಾಗಿ, ನಮ್ಮ ಬಳಿ ಇದ್ದ ದಾಸ್ತಾನು ಖಾಲಿಯಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಕೆಲವೇ ದಿನಗಳಲ್ಲಿ ಕಾಟ್ರಿಜ್‌ಗಳನ್ನು ಪೂರೈಸಲಾಗುವುದು. ಇನ್ನುಮುಂದೆ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಕಾಟ್ರಿಜ್‌ಗಳನ್ನು ಗ್ರಾಹಕರಿಗೆ ನೀಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಇದೇ ರೀತಿ ಸ್ಯಾನಿಟರಿ ನ್ಯಾಪ್ಕಿನ್‌ಗಳ ವಿಚಾರದಲ್ಲೂ ಎಚ್ಚರಿಕೆ ನೀಡಲಾಗಿದೆ. ಕಡಿಮೆ ಬೆಲೆಗೆ ಸಿಗುತ್ತದೆಯೆಂದು ಖರೀದಿಸಿ ಮನೆಯಲ್ಲಿ ಇಟ್ಟುಕೊಳ್ಳಲು ಅವಕಾಶ ಕೊಡುವುದಿಲ್ಲ. ಅಗತ್ಯಕ್ಕೆ ತಕ್ಕಷ್ಟು ನ್ಯಾಪ್ಕಿನ್‌ಗಳನ್ನು ಮಾತ್ರ ಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !