‘ಮೋದಿ ಗನ್‌ ಹಿಡಿದು ಯುದ್ಧಕ್ಕೆ ಹೋಗಿದ್ರಾ?’: ಸಿದ್ದರಾಮಯ್ಯ ಲೇವಡಿ

ಶುಕ್ರವಾರ, ಏಪ್ರಿಲ್ 26, 2019
33 °C

‘ಮೋದಿ ಗನ್‌ ಹಿಡಿದು ಯುದ್ಧಕ್ಕೆ ಹೋಗಿದ್ರಾ?’: ಸಿದ್ದರಾಮಯ್ಯ ಲೇವಡಿ

Published:
Updated:
Prajavani

ಮೈಸೂರು: ಉಗ್ರರ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್‌ನ ಶ್ರೇಯ ಸೈನಿಕರಿಗೆ ಸಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ ಗನ್‌ ಹಿಡಿದುಕೊಂಡು ಹೋಗಿಲ್ಲ. ಬಾಂಬ್‌ ಹಾಕಲು ಯುದ್ಧ ವಿಮಾನ ಚಾಲನೆ ಮಾಡಿಲ್ಲ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಲ್ಲಿ ಮಂಗಳವಾರ ಲೇವಡಿ ಮಾಡಿದರು.

ಸೇನೆಯ ಸಾಧನೆಯನ್ನು ಚುನಾವಣೆಯ ಲಾಭಕ್ಕಾಗಿ ಬಳಸಬಾರದು. ಸೇನೆ ಒಂದು ರಾಜಕೀಯ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ದೇಶಕ್ಕೆ ಸೇರಿದ್ದು ಎಂದು ಜಿಲ್ಲಾ ಪತ್ರಕರ್ತರ ಸಂಘ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ತಿಳಿಸಿದರು.

ಭಾರತೀಯ ಸೇನೆ ಸರ್ಜಿಕಲ್‌ ಸ್ಟ್ರೈಕ್ ನಡೆಸಿದ್ದು ಇದೇ ಮೊದಲಲ್ಲ. ಈ ಹಿಂದೆ 12 ಸಲ ಇಂತಹ ದಾಳಿಗಳು ನಡೆದಿವೆ. ಪಾಕಿಸ್ತಾನದ ಜತೆ ನಾಲ್ಕು ಯುದ್ಧಗಳು ಆಗಿವೆ. ಆಗ ಬಿಜೆಪಿಯವರು ಇರಲಿಲ್ಲ. 1947–48ರಲ್ಲಿ ಮೊದಲ ಯುದ್ಧದ ವೇಳೆ ಮೋದಿ ಹುಟ್ಟಿಯೇ ಇರಲಿಲ್ಲ. ಈಗ ದೇಶಭಕ್ತಿಯನ್ನು ಮುಂದಿಟ್ಟು ಮತ ಕೇಳುತ್ತಿದ್ದಾರೆ. ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪದೇ ಪದೇ ಆರೋಗ್ಯ ಸಮಸ್ಯೆಯ ಬಗ್ಗೆ ಮಾತನಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ‘ಆ ವಿಷಯವನ್ನು ಸಮನ್ವಯ ಸಮಿತಿ ಸಭೆಯಲ್ಲಿ ಅವರೊಂದಿಗೆ ಕೇಳುತ್ತೇನೆ’ ಎಂದರು.

ಸತ್ಯಹರಿಶ್ಚಂದ್ರರ ಮೊಮ್ಮಕ್ಕಳಾ?: ಹಾಸನ, ಮಂಡ್ಯದಲ್ಲಿ ನಡೆದ ಐ.ಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಐ.ಟಿ ದಾಳಿಗೆ ವಿರೋಧವಿಲ್ಲ. ಆದರೆ ರಾಜಕೀಯ ಪ್ರೇರಿತ ಆಗಿರಬಾರದು. ಚುನಾವಣೆ ಸಮಯಲ್ಲೇ ಏಕೆ ದಾಳಿ ಮಾಡಬೇಕು ಎಂದು ಪ್ರಶ್ನಿಸಿದರು. ಬಿಜೆಪಿಯವರೆಲ್ಲ ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳಾ. ನಮ್ಮ ಶಾಸಕರಿಗೆ ₹ 25ರಿಂದ 30 ಕೋಟಿ ಆಮಿಷ ಮಾಡಿರುವ ಯಡಿಯೂರಪ್ಪ ಮನೆ ಮೇಲೆ ದಾಳಿ ನಡೆಸಲಿ. ಈಶ್ವರಪ್ಪ, ಜಗದೀಶ್‌ ಶೆಟ್ಟರ್‌, ಶೋಭಾ ಕರಂದ್ಲಾಜೆ ಅವರ ಮನೆಗಳನ್ನು ಶೋಧಿಸುವಂತೆ ಆಗ್ರಹಿಸಿದರು.

ರಾಹು, ಕೇತುಗಳು ಈಗ ಇಲ್ಲ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶನಿ, ರಾಹು, ಕೇತುಗಳು ಇವೆಯೇ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ, ಈಗ ಅವೆಲ್ಲ ಇಲ್ಲ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದ್ದವು ಎಂದು ಉತ್ತರಿಸಿದರು.

‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಹು, ಕೇತುಗಳು ಸೇರಿ ನನ್ನನ್ನು ಸೋಲಿಸಿದವು’ ಎಂದು ವಿಧಾನಸಭಾ ಚುನಾವಣೆ ಬಳಿಕ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !