ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಮನಕ್ಕೆ ವಿಜ್ಞಾನದ ಅಕ್ಷರ!

‘ಮೈಸೂರು ಸೈನ್ಸ್ ಫೌಂಡೇಶನ್’ಗೆ ದಶಕದ ಸಂಭ್ರಮ
Last Updated 3 ಜುಲೈ 2022, 1:54 IST
ಅಕ್ಷರ ಗಾತ್ರ

ಮೈಸೂರು: ವಿಜ್ಞಾನದ ಅಚ್ಚರಿಗಳನ್ನು ಉಚಿತ ಶಿಬಿರ, ಕಾರ್ಯಾಗಾರ, ಪ್ರವಾಸಗಳ ಮೂಲಕ ಚಿಣ್ಣರ ಮನದಲ್ಲಿ ಬಿತ್ತುತ್ತಿರುವ ನಗರದ ‘ಮೈಸೂರು ಸೈನ್ಸ್ ಫೌಂಡೇಶನ್’ಗೆ ಇದೇ ಜುಲೈ 11ಕ್ಕೆ ದಶಕದ ಸಂಭ್ರಮ. ಮಕ್ಕಳ ಎದೆಗಳಲ್ಲಿ ಬಿದ್ದ ಅಕ್ಷರಗಳು ದೇಶದಾದ್ಯಂತ ಫಲವನ್ನು ನೀಡುತ್ತಿವೆ.

ಮೈಸೂರು, ಚಾಮರಾಜನಗರ, ಮಂಡ್ಯ ನಗರಗಳೊಂದಿಗೆ ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ದುಡಿಯುತ್ತಿದ್ದ 10ಕ್ಕೂ ಹೆಚ್ಚು ಸಮಾನ ಮನಸ್ಕರು ಕಟ್ಟಿದ ಸಂಸ್ಥೆಯು ವಿಜ್ಞಾನ ಪ್ರೀತಿ ಹಂಚುತ್ತಿದೆ. ವೈಜ್ಞಾನಿಕ ಮನೋಭಾವ ಬೆಳೆಸುತ್ತಿರುವ ಅವರ ಕಾರ್ಯವನ್ನು ಇಸ್ರೋ ವಿಜ್ಞಾನಿಗಳೇ ಹೊಗಳಿದ್ದಾರೆ.

ಶಾಲೆಗಳಲ್ಲಿನ ಸಂಪನ್ಮೂಲಗಳ ಕೊರತೆ, ಶಿಕ್ಷಕರಿಗಿರುವ ಕಡಿಮೆ ಕೌಶಲಗಳು ಗ್ರಾಮೀಣ ಮಕ್ಕಳಿಗೆ ಗಣಿತ ಹಾಗೂ ವಿಜ್ಞಾನವನ್ನು ಕಠಿಣಗೊಳಿಸಿತ್ತು. ಹೀಗಾಗಿಯೇ ಸಿ. ಕೃಷ್ಣೇಗೌಡ, ಜಿ.ಬಿ. ಸಂತೋಷ್ ಕುಮಾರ್, ಎಂ.ಜಿ.ಎನ್ ಪ್ರಸಾದ್, ಡಾ.ಟಿ.ಶಿವಲಿಂಗಸ್ವಾಮಿ, ಎನ್. ಮಹದೇವಪ್ಪ, ಜಿ.ಕೆ. ಕಾಂತರಾಜು, ಸಿ.ಎನ್.ಗೀತಾ, ಸಿ.ಪುರಂದರ್, ಎಚ್.ಎಸ್.ಮಂಜುಳಾ ಶಾಸ್ತ್ರಿ, ಎಚ್.ವಿ.ಮುರಳೀಧರ್, ಬಿ.ಎಸ್.ಕೃಷ್ಣಮೂರ್ತಿ ಮೊದಲಾದವರು ವಿಜ್ಞಾನದ ಅರಿವಿನ ತೇರು ಎಳೆಯುತ್ತಿದ್ದಾರೆ.

ವಿಜ್ಞಾನಿಗಳಾದ ಟಿ.ತಿಪ್ಪೇಸ್ವಾಮಿ, ಪ್ರೊ.ಎಂ.ಆರ್.ನಂದನ್ ಸೇರಿದಂತೆ ಹಲವರು ನೆರವಾಗಿದ್ದಾರೆ. ಆರಂಭದಲ್ಲಿ ಕಲಾಮಂದಿರದ ಮನೆಯಂಗಳದಲ್ಲಿ ಮಾಸಿಕ ಉಪನ್ಯಾಸ ಏರ್ಪಡಿಸುತ್ತಿತ್ತು. ಭಾರತೀಯ ವಿಜ್ಞಾನ ಸಂಸ್ಥೆ, ಐಐಟಿ, ಇಸ್ರೊ ಮೊದಲಾದವುಗಳ ವಿಜ್ಞಾನಿಗಳು ಬಂದು ಉಪನ್ಯಾಸ ನೀಡಿದ್ದಾರೆ.

ಸೂರ್ಯಗ್ರಹಣ, ಚಂದ್ರಗ್ರಹಣ ಅಥವಾ ಯಾವುದೇ ವಿಜ್ಞಾನದ ವಿದ್ಯಾಮಾನಗಳು ನಡೆದಾಗ ವೀಕ್ಷಣಾ ಕಾರ್ಯಕ್ರಮ ನಡೆದಿವೆ. ಮಕ್ಕಳು ತಾವೇ ಮಾಡಿದ ದೂರದರ್ಶಕ ಹಾಗೂ ಇತರ ಪರಿಕರಗಳಿಂದ ಅಚ್ಚರಿಗಳನ್ನು ಕಣ್ತುಂಬಿಕೊಂಡಿದ್ದಾರೆ.

ಕೋವಿಡ್‌ ವೇಳೆ ಚಿಣ್ಣರಿಗೆ ವೆಬಿನಾರ್‌ಗಳ ಮೂಲಕ 144 ತರಗತಿ ನೀಡಿದ್ದಾರೆ. ಪವಾಡ ರಹಸ್ಯ ಬಯಲು, ಖಗೋಳ ವೀಕ್ಷಣಾ ಶಿಬಿರ ನಡೆಸಿದ್ದಾರೆ. ಜಿ.ಎಸ್. ಬಸವರಾಜಪ್ಪ ದತ್ತಿ ಪ್ರಶಸ್ತಿ ಸ್ಥಾಪಿಸಿ, ವಿಶಿಷ್ಟ ಕೊಡುಗೆ ನೀಡಿದ ವಿಜ್ಞಾನ ಶಿಕ್ಷಕರಿಗೆ ಪ್ರದಾನ ಮಾಡುತ್ತಿದೆ. ‘ವಿಭವ’ ತ್ರೈಮಾಸಿಕ ಪತ್ರಿಕೆ ತರುತ್ತಿದೆ. ವಿಜ್ಞಾನಿಗಳ ಕನ್ನಡ ಕಮ್ಮಟವನ್ನು ರಾಜ್ಯೋತ್ಸವದ ವೇಳೆ ನಡೆಸುತ್ತಿದೆ.

‘ಸಂಸ್ಥೆಗೆ 10 ವರ್ಷ ಎಂದು ಹೇಳಿಕೊಳ್ಳುವುದೇ ಹೆಮ್ಮೆ ಎನಿಸುತ್ತದೆ. ಸಾವಿರಾರು ಮಕ್ಕಳ ಕಣ್ಣುಗಳಲ್ಲಿ ವಿಜ್ಞಾನವನ್ನು ಕಲಿತ ಸಂತಸವನ್ನು ಕಣ್ತುಂಬಿಕೊಂಡಿದ್ದೇವೆ. ದೇಶದ ವಿಜ್ಞಾನ–ತಂತ್ರಜ್ಞಾನದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮಕ್ಕಳು ಸೇವೆ ಸಲ್ಲಿಸುತ್ತಿರುವ ಸುದ್ದಿ ಕೇಳಿದಾಗೆಲ್ಲ ಖುಷಿಯಾಗುತ್ತದೆ’ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಬಿ. ಸಂತೋಷ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದಶಕದ ಹೆಜ್ಜೆ...

256;ವಿಜ್ಙಾನ ಉಪನ್ಯಾಸ

50;ವಿದ್ಯಾರ್ಥಿ–ವಿಜ್ಞಾನಿ ನೇರಸಂವಾದ

200ಕ್ಕೂ ಹೆಚ್ಚು;ಪವಾಡರಹಸ್ಯ ಬಯಲು

10;ಕಾಸ್ಮೋಸ್ ಕಾರ್ಯಾಗಾರ

20:ಟೆಕ್ನೋ ಟೂರ್‌

30;ಸಂಸ್ಥೆಯ ವಿಜ್ಞಾನ ವಿದ್ಯಾರ್ಥಿ ಕ್ಲಬ್‌

5;ವಿಜ್ಞಾನ ಬೇಸಿಗೆ ಶಿಬಿರ

150;ಪಕ್ಷಿವೀಕ್ಷಣೆ, ಪರಿಸರ ನಡಿಗೆ

100;ಗ್ರಾಮೀಣ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

30;ಶಿಕ್ಷಕರ ಕಾರ್ಯಾಗಾರ

150;ವಿಶೇಷ ವಿಜ್ಞಾನ ದಿನಗಳ ಆಚರಣೆ

150; ವಿವಿಧ ವಿಜ್ಞಾನ ಸ್ಪರ್ಧೆ

12; ಸರಣಿ ರೇಡಿಯೊ ಕಾರ್ಯಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT