ಚುರುಕು ಪಡೆದ ಬಿತ್ತನೆ ಕಾರ್ಯ

7
ಸಮೃದ್ಧ ಮಳೆ; ಶೇ 100ರಷ್ಟು ಬಿತ್ತನೆ ಗುರಿ

ಚುರುಕು ಪಡೆದ ಬಿತ್ತನೆ ಕಾರ್ಯ

Published:
Updated:

ಮೈಸೂರು: ಈ ಬಾರಿ ಮುಂಗಾರು ರೈತರ ಕೈ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿದೆ. ಕಳೆದೆರಡು ವರ್ಷಗಳಿಂದ ಪೂರ್ವ ಮುಂಗಾರಿನಲ್ಲಿ ಸಮೃದ್ಧ ಮಳೆ ಕಂಡಿದ್ದ ಜಿಲ್ಲೆ ಮುಂಗಾರಿನಲ್ಲಿ ಕೊರತೆ ಅನುಭವಿಸಿತ್ತು. ಇದರಿಂದ ಪೂರ್ವಮುಂಗಾರಿನಲ್ಲಿ ಬಿತ್ತಿದ ಬೆಳೆಯೂ ಸಿಗದೆ ಮುಂಗಾರಿನಲ್ಲಿ ಬಿತ್ತನೆ ಕಾರ್ಯವನ್ನು ಕೈಗೊಳ್ಳಲಾಗದೆ ರೈತರು ಹತಾಶೆಗೊಂಡಿದ್ದರು.

ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಮಳೆ ಎಲ್ಲ ತಾಲ್ಲೂಕಿನಲ್ಲೂ ಸುರಿದಿದೆ. ಅದರಲ್ಲೂ ಮುಂಗಾರು ಮಳೆ ಜೂನ್ ಮಧ್ಯ ಭಾಗದ ಹೊತ್ತಿಗೆ ಶೇ 96.9ರಷ್ಟು (ಜೂನ್‌ ತಿಂಗಳ ವಾಡಿಕೆ ಮಳೆ) ಬಂದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜೂನ್ 12ರ ವರೆಗೆ ನಂಜನಗೂಡಿನಲ್ಲಿ ಶೇ 127.2ರಷ್ಟು ಅತ್ಯಧಿಕ ಮಳೆಯಾಗಿದೆ. ತಿ.ನರಸೀಪುರದಲ್ಲಿ ಶೇ 120, ಮೈಸೂರಿನಲ್ಲಿ ಶೇ 118.1, ಕೆ.ಆರ್.ನಗರದಲ್ಲಿ ಶೇ 94.7, ಎಚ್.ಡಿ.ಕೋಟೆಯಲ್ಲಿ ಶೇ 92.5, ಹುಣಸೂರಿನಲ್ಲಿ ಶೇ 84.6 ಹಾಗೂ ಪಿರಿಯಾಪಟ್ಟಣದಲ್ಲಿ ಶೇ 71.7ರಷ್ಟು ಮಳೆ ಸುರಿದಿದೆ.

ಜಿಲ್ಲೆಯ ಬಹುತೇಕ ಕೆರೆಕಟ್ಟೆಗಳು ತುಂಬಿವೆ. ಜಲಾಶಯಗಳು ಭರ್ತಿಯಾಗಿವೆ. ಇದರಿಂದ ಕೊಳವೆಬಾವಿಗಳಲ್ಲೂ ಉತ್ತಮ ನೀರು ಬರುತ್ತಿದೆ. ಹೀಗಾಗಿ, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಮುಂಗಾರುಪೂರ್ವದಲ್ಲಿ ಬಿತ್ತನೆಯಾಗಿದ್ದ ಬೆಳೆಗಳೆಲ್ಲ ಸೊಂಪಾಗಿ ಬೆಳೆದಿವೆ.

ಶೇ 57ರಷ್ಟು ಭೂಮಿಯಲ್ಲಿ ಬಿತ್ತನೆ ಕಾರ್ಯ:

ಜಿಲ್ಲೆಯಲ್ಲಿ ಈವರೆಗೆ ಶೇ 57ರಷ್ಟು ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಮಳೆಯಾಶ್ರಿತ ಭೂಮಿಯ ಪೈಕಿ ಶೇ 80ರಷ್ಟು ಭೂಮಿಯಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದರೆ, ನೀರಾವರಿ ಪ್ರದೇಶದಲ್ಲಿ ಬಿತ್ತನೆ ನಡೆಯಬೇಕಿದೆ.‌ ಮಳೆಯಾಶ್ರಿತ ಭೂಮಿಯಲ್ಲಿ ಶೇ 100ರಷ್ಟು ಬಿತ್ತನೆ ನಡೆಸುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.

ಜಲಾಶಯಗಳು ಭರ್ತಿಯಾಗಿರುವುದರಿಂದ ಶೇ 100ರಷ್ಟು ಪ್ರಮಾಣದಲ್ಲಿ ಭತ್ತದ ಬಿತ್ತನೆ ಕಾರ್ಯ ನಡೆಯುವ ಅಂದಾಜನ್ನು ಕೃಷಿ ಇಲಾಖೆ ಹೊಂದಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ವಿಶೇಷ ಬೇಡಿಕೆ ಸಲ್ಲಿಸಿ ಸಾಕಷ್ಟು ಪ್ರಮಾಣದಲ್ಲಿ ಭತ್ತದ ಬಿತ್ತನೆ ಬೀಜವನ್ನು ತರಿಸಿಕೊಳ್ಳಲಾಗಿದೆ. 24 ಸಾವಿರ ಕ್ವಿಂಟಲ್‌ ಭತ್ತದ ಬಿತ್ತನೆಗೆ ಬೇಡಿಕೆ ಇದೆ. 4,800 ಟನ್ ರಸಗೊಬ್ಬರ ಈಗಾಗಲೇ ಜಿಲ್ಲೆಯಲ್ಲಿ ದಾಸ್ತಾನಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್ ತಿಳಿಸಿದ್ದಾರೆ.

ಶೇಕಡವಾರು ಬಿತ್ತನೆ ಕಾರ್ಯ 
57 ಭೂಮಿಯಲ್ಲಿ ಬಿತ್ತನೆ
80 ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆ ಕಾರ್ಯ
24 ಸಾವಿರ ಟನ್ ಭತ್ತದ ಬೀಜಕ್ಕೆ ಬೇಡಿಕೆ‌
4,800 ಟನ್ ರಸಗೊಬ್ಬರ ದಾಸ್ತಾನು
100 ಭತ್ತದ ಬಿತ್ತನೆ ಪೂರ್ಣಗೊಳ್ಳುವ ವಿಶ್ವಾಸ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !