ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ₹1.29 ಲಕ್ಷ ಕೋಟಿ ಬಂದಿದೆ: ಪ್ರತಾಪಸಿಂಹ

ಕೇಂದ್ರ ಸರ್ಕಾರದ ಸಾಧನೆಗಳ ವಿವರ ನೀಡಿದ ಸಂಸದ ಪ್ರತಾಪಸಿಂಹ
Last Updated 4 ಜೂನ್ 2022, 9:40 IST
ಅಕ್ಷರ ಗಾತ್ರ

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 8 ವರ್ಷಗಳಲ್ಲಿ ಕರ್ನಾಟಕಕ್ಕೆ ₹1.29 ಲಕ್ಷ ಕೋಟಿ ನೀಡಿದೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

‘ಜೂನ್‌ 21ರಂದು ವಿಶ್ವ 8ನೇ ಯೋಗ ದಿನಾಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ನರೇಗಾ ಯೋಜನೆಯಡಿ ₹27,418 ಕೋಟಿ ನೀಡಿದ್ದು, ಕೆರೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ 500 ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ₹19,374 ಕೋಟಿ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ 47.86 ಲಕ್ಷ ರೈತರಿಗೆ ₹8,704 ಕೋಟಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ₹2,111 ಕೋಟಿ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ₹500 ಕೋಟಿ, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ನೀಡುವ ಸಾಲ ಯೋಜನೆಗೆ ₹19,950 ಕೋಟಿ ನೀಡಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ರಾಜ್ಯದಲ್ಲಿ 3,298 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ₹1.50 ಲಕ್ಷ ಕೋಟಿ ನಿಗದಿಪಡಿಸಲಾಗಿದೆ. ₹50,527 ಕೋಟಿ ಮೊತ್ತದ ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮೈಸೂರು– ಬೆಂಗಳೂರು ಹೆದ್ದಾರಿಗೆ ₹9,551 ಕೋಟಿ ನೀಡಲಾಗಿದೆ. ಮೈಸೂರಿನ ವರ್ತುಲ ರಸ್ತೆಗೆ ಡಾಂಬರು ಹಾಕಲು ₹160 ಕೋಟಿ, ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಮಡಿಕೇರಿಗೆ ₹4 ಸಾವಿರ ಕೋಟಿ ನೀಡಲಾಗಿದೆ. ರಾಜ್ಯದ 27 ಜಿಲ್ಲೆಗಳಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ’ ಎಂದರು.

‘ಮೋದಿ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ರಾಷ್ಟ್ರದ ಹಿತಾಸಕ್ತಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಉಕ್ರೇನ್‌ ಯುದ್ಧದ ಬಿಕ್ಕಟ್ಟಿನ ವಿಚಾರದಲ್ಲಿ ಅಮೆರಿಕ, ಯುರೋಪ್‌ ರಾಷ್ಟ್ರಗಳ ಒತ್ತಡ ಇದ್ದರೂ ರಷ್ಯಾದೊಂದಿಗೆ ಉತ್ತಮ ಸಂಬಂಧವನ್ನು ಸಾಧಿಸಿ ಕಡಿಮೆ ದರಕ್ಕೆ ತೈಲವನ್ನು ಖರೀದಿಸಿ, ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ₹9ರಿಂದ ₹10 ಕಡಿಮೆ ಮಾಡಿದ್ದಾರೆ’ ಎಂದು ತಿಳಿಸಿದರು.

ಶಾಸಕ ಎಸ್‌.ಎ.ರಾಮದಾಸ್‌ ಮಾತನಾಡಿ, ‘ಮೋದಿ ಅವರ ಕನಸ್ಸಿನ ಯೋಜನೆಗಳಲ್ಲಿ ಒಂದಾದ 5 ಕೋಟಿ ಮನೆ ನೀಡುವ ಯೋಜನೆ ಶೇ 60ರಷ್ಟು ಪ್ರಗತಿ ಕಂಡಿದೆ. ದೇಶದಲ್ಲಿ 7 ಸಾವಿರ ಜನೌಷಧ ಕೇಂದ್ರಗಳನ್ನು ಸ್ಥಾಪಿಸಿದ್ದು, ರಾಜ್ಯದಲ್ಲಿ ಅತಿಹೆಚ್ಚು ಜನೌಷಧ ಕೇಂದ್ರಗಳು ಮೈಸೂರಿನಲ್ಲಿ ಸ್ಥಾಪನೆಗೊಂಡಿವೆ. ವ್ಯವಹಾರದಲ್ಲಿ ದೇಶದಲ್ಲೇ 7ನೇ ಸ್ಥಾನವನ್ನು ಮೈಸೂರು ಪಡೆದಿದೆ. ಪ್ರಸಾದ್‌ ಯೋಜನೆಯಡಿ ಚಾಮುಂಡೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ಮತ್ತೆ ₹50 ಕೋಟಿ ನೀಡಲಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಶಾಸಕ ಎಲ್‌. ನಾಗೇಂದ್ರ, ಮೇಯರ್‌ ಸುನಂದಾ ಪಾಲನೇತ್ರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್‌.ಶ್ರೀವತ್ಸ, ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್‌, ಮುಡಾ ಅಧ್ಯಕ್ಷ ಎಚ್‌.ವಿ. ರಾಜೀವ್‌, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ, ಕಾಡಾ ಅಧ್ಯಕ್ಷ ಶಿವಲಿಂಗಯ್ಯ ಇದ್ದರು.

***

ಮೈಸೂರು ನಗರದಿಂದ ಗುಂಡ್ಲುಪೇಟೆವರೆಗಿನ ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ.

–ಪ್ರತಾಪಸಿಂಹ, ಸಂಸದ

***

ದೈವಾಂಶ ಸಂಭೂತರಾದ ನರೇಂದ್ರ ಮೋದಿ ದೂರದೃಷ್ಟಿ ಹೊಂದಿದ ವ್ಯಕ್ತಿ. ಅವರಿಂದ ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿವೆ.

–ಎಸ್‌.ಎ.ರಾಮದಾಸ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT