ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮಹೋತ್ಸವಕ್ಕೆ 14 ಆನೆಗಳು: ಭಾನುವಾರ ವೀರನಹೊಸಳ್ಳಿಯಿಂದ ಗಜಪಯಣ

Last Updated 5 ಆಗಸ್ಟ್ 2022, 16:04 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯಲ್ಲಿ ಭಾಗವಹಿಸಲಿರುವ ಆನೆಗಳ ಪಟ್ಟಿಯನ್ನು ಅರಣ್ಯ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಅವುಗಳಲ್ಲಿ 7 ಆನೆಗಳು ಮೊದಲ ಹಂತದಲ್ಲಿ ಮೈಸೂರು ತಲುಪಲಿವೆ.

ಹುಣಸೂರು ತಾಲ್ಲೂಕು ವೀರನಹೊಸಳ್ಳಿಯಲ್ಲಿ,ಆ.7ರಂದು ಬೆಳಿಗ್ಗೆ 9.01ರಿಂದ 9.35ರವರೆಗೆ ಸಲ್ಲುವ ಮುಹೂರ್ತದಲ್ಲಿ ‘ಗಜಪಯಣ’ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಗಜಪೂಜೆ ನೆರವೇರಿಸಿ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಇದರೊಂದಿಗೆ, ದಸರೆಗೂ ಚಾಲನೆ ಕೊಟ್ಟಂತಾಗಲಿದೆ.

ಕಾಡಿನಲ್ಲಿ ಪಳಗಿಸಿರುವ ಆನೆಗಳು ವಿಜಯದಶಮಿಯ ಮೆರವಣಿಗೆಯ ಮೆರುಗನ್ನು ಹೆಚ್ಚಿಸಲಿವೆ. ಈ ಬಾರಿ ಅತಿ ಹಿರಿಯ ಆನೆಗಳೆಂದರೆ 63 ವರ್ಷದ ವಿಜಯಾ ಮತ್ತು ಅರ್ಜುನ ಆಗಿವೆ. ಪಾರ್ಥಸಾರಥಿ ಆನೆಯು ಅತಿ ಕಿರಿಯ ಅಂದರೆ 18 ವರ್ಷದ್ದಾಗಿದೆ.

ಆನೆಗಳನ್ನು ಅರಣ್ಯ ಪ್ರದೇಶದಲ್ಲಿರುವ ವಿವಿಧ ಶಿಬಿರಗಳಿಂದ ಮೈಸೂರಿಗೆ ಕರೆತರುವ ಸಾಂಪ್ರದಾಯಿಕ ಕಾರ್ಯಕ್ರಮ, ಮಹಾರಾಜರ ಕಾಲದಿ೦ದಲೂ ನಡೆದುಕೊಂಡು ಬಂದಿದೆ. ಸಾಂಪ್ರದಾಯಿಕ ಪೂಜೆ ನಂತರ ಆನೆಗಳನ್ನು ಲಾರಿಯ ಮೂಲಕ ಮೈಸೂರಿಗೆ ಸಾಗಾಣಿಕೆ ಮಾಡಲಾಗುತ್ತದೆ.

ಮೊದಲನೇ ತಂಡದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ಬಳಿ ಸಾಂಪ್ರದಾಯಿಕ ಪೂಜೆ ನೆರವೇರಲಿದೆ. ತೆಂಗಿನಕಾಯಿ, ಬೆಲ್ಲ ಮತ್ತು ಕಬ್ಬನ್ನು ನೀಡಿ ಆನೆಗಳನ್ನು ಸ್ವಾಗತಿಸಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಅರಣ್ಯ ಮತ್ತು ವನ್ಯಪ್ರಾಣಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವೂ ಜರುಗಲಿದೆ.

ಈ ಬಾರಿ ಭಾಗವಹಿಸಲಿರುವ ಮೊದಲ ತಂಡದ ಆನೆಗಳನ್ನು ವೀರನಹೊಸಹಳ್ಳಿ-ಹುಣಸೂರು-ಬಿಳಿಕೆರೆ-ಇಲವಾಲ ಹೆದ್ದಾರಿಯ ಮೂಲಕ ಮೈಸೂರು ನಗರದ ಅರಣ್ಯ ಭವನದ ಆವರಣಕ್ಕೆ ಸಾಗಿಸಲಾಗುತ್ತದೆ. ಆ.10ರಂದು ಅರಣ್ಯ ಭವನದಲ್ಲಿ ಆನೆಗಳ ಸಾಂಪ್ರಾದಾಯಿಕ ಪೂಜೆ ನಂತರ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿಗೆ ಕರೆತರಲಾಗುತ್ತದೆ. ಅಲ್ಲಿ, ಮೈಸೂರು ಅರಮನೆ ಮಂಡಳಿ ಹಾಗೂ ಜಿಲ್ಲಾಡಳಿತದಿಂದ ಅರಮನೆ ಆವರಣಕ್ಕೆ ಸಂಭ್ರಮದಿಂದ ಬರಮಾಡಿಕೊಳ್ಳಲಾಗುತ್ತದೆ.

‘ಆನೆಗಳನ್ನು ನೋಡಿಕೊಳ್ಳುವ ಸಿಬ್ಬಂದಿಯ ಕುಟುಂಬದವರಿಗೆ ಅರಮನೆ ಆವರಣಲ್ಲಿ ತಾತ್ಕಾಲಿಕವಾಗಿ ನೀರು ನಿರೋಧಕ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಆನೆಗಳಿಗೆ ಪ್ರತಿನಿತ್ಯ ವಿಶೇಷ ಆಹಾರ ಪದಾರ್ಥಗಳನ್ನು ನೀಡುವುದರೊಂದಿಗೆ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುವುದು. ಜನಸಂದಣಿ ಹಾಗೂ ವಾಹನಗಳ ಶಬ್ದಗಳಿಗೆ ಹೆದರದಂತೆ ಅನುಭವ ಆಗಲೆಂದು ತಾಲೀಮಿನಲ್ಲಿ ಆದ್ಯತೆ ಕೊಡಲಾಗುತ್ತದೆ. ಕುಶಾಲತೋಪುಗಳನ್ನು ಸಿಡಿಸುವ ಮೂಲಕವೂ ತರಬೇತಿಯನ್ನು ನೀಡಲಾಗುತ್ತದೆ’ ಎನ್ನುತ್ತಾರೆ ಡಿಸಿಎಫ್‌ ವಿ.ಕರಿಕಾಳನ್.

ಯಾವ್ಯಾವ ಆನೆಗಳು?

* ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು (57), ಭೀಮ (22), ಮಹೇಂದ್ರ (39), ಗೋಪಾಲಸ್ವಾಮಿ (39).

* ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಳ್ಳೆ ಆನೆ ಶಿಬಿರದ ಅರ್ಜುನ (63).

* ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ ವಿಕ್ರಮ (59), ಧನಂಜಯ (44), ಕಾವೇರಿ (45), ಗೋಪಿ (41), ಶ್ರೀರಾಮ (40), ವಿಜಯ (63).

* ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಪುರ ಆನೆ ಶಿಬಿರದ ಚೈತ್ರಾ (49), ಲಕ್ಷ್ಮಿ (21) ಹಾಗೂ ಪಾರ್ಥಸಾರಥಿ (18).

ದಸರಾ: ಸಚಿವರಿಂದ ಸಭೆ 5ರಂದು
ಮೈಸೂರು:
ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆ.6 ಮತ್ತು 7ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

6ರಂದು ಮಧ್ಯಾಹ್ನ 3ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ದಸರಾ ಕುರಿತು ಸಭೆ ನಡೆಸುವರು. ಸಂಜೆ 4ಕ್ಕೆ ತಿ.ನರಸೀಪುರ ತಾಲ್ಲೂಕಿನ ಮುಗೂರಿನಲ್ಲಿರುವ ತ್ರಿಪುರಸುಂದರಮ್ಮಣ್ಣಿ ದೇವಾಲಯದ ರಾಜಗೋಪುರ ಕುಂಭಾಭಿಷೇಕ ಮತ್ತು ಕಳಸ ಪ್ರತಿಷ್ಠಾಪನೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳ ಪೂರ್ವಸಿದ್ಧತಾ ಸಭೆ ನಡೆಸುವರು. 7ರಂದು ಬೆಳಿಗ್ಗೆ 9ಕ್ಕೆ ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಯಲ್ಲಿ ದಸರಾ ಗಜ ಪಯಣ ಕಾರ್ಯಕ್ರಮದಲ್ಲಿ ಭಾಗವಹಿಸುವರು.

*

ಸರ್ಕಾರದಿಂದ ಆದೇಶವಾಗಿದೆ
ಮಾವುತರು, ಕಾವಾಡಿಗಳು ಹಾಗೂ ಜಮೆದಾರರ ಪ್ರಮುಖ ಬೇಡಿಕೆಯಾಗಿದ್ದ ವೇತನ ಹೆಚ್ಚಳಕ್ಕೆ ಸರ್ಕಾರದಿಂದ ಆದೇಶವಾಗಿದೆ. ಹೀಗಾಗಿ, ಅವರು ದಸರಾದಲ್ಲಿ ಸಂತೋಷದಿಂದ ಭಾಗವಹಿಸುತ್ತಿದ್ದಾರೆ.
–ಕೆ.ಕರಿಕಾಳನ್, ಡಿಸಿಎಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT