ಪಿಯು ಫಲಿತಾಂಶ: ಮೈಸೂರಿಗೆ 15ನೇ ಸ್ಥಾನ

ಸೋಮವಾರ, ಏಪ್ರಿಲ್ 22, 2019
33 °C
ಒಟ್ಟು ಫಲಿತಾಂಶ ಶೇ 68.55; ನಗರ ಪ್ರದೇಶ ಶೇ 69.76, ಗ್ರಾಮಾಂತರ ಪ್ರದೇಶ ಶೇ 61.34 ಫಲಿತಾಂಶ

ಪಿಯು ಫಲಿತಾಂಶ: ಮೈಸೂರಿಗೆ 15ನೇ ಸ್ಥಾನ

Published:
Updated:
Prajavani

ಮೈಸೂರು: ಅರಮನೆ ನಗರಿ ಮೈಸೂರಿನ ಪಿಯು ಫಲಿತಾಂಶ ಹೆಚ್ಚೂ ಕಡಿಮೆ ಯಥಾಸ್ಥಿತಿಯನ್ನೇ ಕಾ‍ಪಾಡಿಕೊಂಡಿದೆ. 2018–19ನೇ ಸಾಲಿನ ಫಲಿತಾಂಶದಲ್ಲಿ ಮೈಸೂರು ರಾಜ್ಯದಲ್ಲಿ 15ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಮೈಸೂರಿನ ಫಲಿತಾಂಶವು ಕಳೆದ ಸಾಲಿನಲ್ಲಿ ಶೇ 66.77 ಇತ್ತು. ಈ ಸಾಲಿನಲ್ಲಿ ಶೇ 68.55ಕ್ಕೆ ಏರಿಕೆಯಾಗಿದೆ. ಹಾಗಾಗಿ, ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ 1.78ರಷ್ಟು ಫಲಿತಾಂಶದಲ್ಲಿ ಏರಿಕೆಯಾಗಿದೆ. ಆದರೆ, ಫಲಿತಾಂಶ ಪಟ್ಟಿಯಲ್ಲಿ ಮೈಸೂರಿನ ಸ್ಥಾನಮಾನ ಹಿಂದಿನ ಸಾಲಿನಷ್ಟೇ ಇದೆ. 2015–16ನೇ ಸಾಲಿನಲ್ಲಿ 11ನೇ ಸ್ಥಾನ, 2016–17ನೇ ಸಾಲಿನಲ್ಲಿ 14ನೇ ಸ್ಥಾನ, 2017–18ನೇ ಸಾಲಿನಲ್ಲಿ 17ನೇ ಸ್ಥಾನ ಸಿಕ್ಕಿತ್ತು.

ಜಿಲ್ಲೆಯಲ್ಲಿ ಮೊದಲ ಬಾರಿ ಪರೀಕ್ಷೆ ಬರೆದವರು 28,595. ಇವರ ಪೈಕಿ 19,601 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರತಿ ವರ್ಷದಂತೆ ಬಾಲಕಿಯರೇ ಫಲಿತಾಂಶದಲ್ಲಿ ಸಾಧನೆ ಮೆರೆದಿದ್ದಾರೆ. ಒಟ್ಟು 12,342 (ಶೇ 69.57) ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ಬಾಲಕರ ಸಂಖ್ಯೆ 8,918 (ಶೇ 53.2). ಕಲಾ ವಿಭಾಗದಲ್ಲಿ 7,511 ವಿದ್ಯಾರ್ಥಿಗಳ ಪೈಕಿ 4,271 (ಶೇ 56.86) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯದಲ್ಲಿ ವಿಭಾಗದಲ್ಲಿ 10,705 ವಿದ್ಯಾರ್ಥಿಗಳ ಪೈಕಿ 8,004 (ಶೇ 74.77) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 10,379 ವಿದ್ಯಾರ್ಥಿಗಳ ಪೈಕಿ 7,326 (70.58) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ನಗರ ಪ್ರದೇಶದಿಂದ ಒಟ್ಟು 24,485 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 17,080 (ಶೇ 69.76) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 4,110 ವಿದ್ಯಾರ್ಥಿಗಳ ಪೈಕಿ 2521 (ಶೇ 61.34) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಗ್ರಾಮಾಂತರ ಪ್ರದೇಶದ ಶೇ 60.44 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

ಪುನರಾವರ್ತಿತ ಅಭ್ಯರ್ಥಿಗಳು ಒಟ್ಟು 4,497 ಮಂದಿ ಇದ್ದರು. ಇವರ ಪೈಕಿ 1,287 ಮಂದಿ ಉತ್ತೀರ್ಣರಾಗಿದ್ದಾರೆ. ಅಂತೆಯೇ, ಖಾಸಗಿ ಅಭ್ಯರ್ಥಿಗಳು ಒಟ್ಟು 1,413 ಮಂದಿ ಇದ್ದರು. ಇವರ ‍ಪೈಕಿ 372 ಮಂದಿ ಉತ್ತೀರ್ಣರಾಗಿದ್ದಾರೆ.

‘ಈ ಸಾಲಿನಲ್ಲಿ ಪರೀಕ್ಷೆಗಳು ಕಟ್ಟುನಿಟ್ಟಾಗಿ ನಡೆದಿದ್ದವು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಾಗಿತ್ತು. ಅತ್ಯಂತ ಪಾರದರ್ಶಕವಾಗಿ ಪರೀಕ್ಷೆಗಳು ನಡೆದಿದ್ದವು. ವರ್ಷಪೂರ್ತಿ ಸಿದ್ಧತೆಗಳನ್ನು ನಡೆಸಿ, ಪೂರ್ವಸಿದ್ಧತಾ ಪರೀಕ್ಷೆಗಳು, ಶಿಕ್ಷಕರಿಗೆ ತರಬೇತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ಸಾಲಿಗಿಂತ ಅಲ್ಪಸಾಧನೆ ಈ ವರ್ಷ ಸಿಕ್ಕಿದೆ. ಲೋಪಗಳನ್ನು ಗಮನಿಸಿ ಸುಧಾರಣೆಗೆ ಪ್ರಯತ್ನಿಸಲಾಗುವುದು’ ಎಂದು ಡಿಡಿಪಿಯು ಡಾ.ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !