ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಿನಿಯಿಂದ ನೀರು ತರಲು ₹ 150 ಕೋಟಿ: ಭೈರತಿ ಬಸವರಾಜ

Last Updated 22 ಸೆಪ್ಟೆಂಬರ್ 2022, 14:24 IST
ಅಕ್ಷರ ಗಾತ್ರ

ಮೈಸೂರು: ‘ನಗರಕ್ಕೆ ಕುಡಿಯುವ ನೀರು ಪೂರೈಸುವ ಹಳೆಉಂಡುವಾಡಿ ಯೋಜನೆಗೆ ₹ 531 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಕಬಿನಿಯಿಂದ ನೀರು ತರಲು ₹ 150 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ರಾಮಲಿಂಗೇಶ್ವರ ಉದ್ಯಾನದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಆಯೋಜಿಸಿರುವ ‘ಮೋದಿ ಯುಗ ಉತ್ಸವ’ದಲ್ಲಿ 6ನೇ ದಿನವಾದ ಗುರುವಾರ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.

‘ನಗರದಲ್ಲಿ 69ಸಾವಿರ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಿದ್ದೇವೆ. ಹಿಂದಿನ ಸರ್ಕಾರಕ್ಕೆ ಒಂದು ಬಲ್ಬ್‌ ಹಾಕಲೂ ಸಾಧ್ಯವಾಗಿರಲಿಲ್ಲ’ ಎಂದು ಟೀಕಿಸಿದರು.

ಚ್ಯುತಿಯಾಗದಂತೆ ನೋಡಿಕೊಳ್ಳಬೇಕು:

‘ಮೈಸೂರು ಪಾರಂಪರಿಕ ನಗರವಾಗಿದ್ದು, ಅದಕ್ಕೆ ಚ್ಯುತಿ ಬಾರದಂತೆ ನಾವು ನಡೆದುಕೊಳ್ಳಬೇಕು. ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ನಾಡಹಬ್ಬದ ಉದ್ಘಾಟನೆಗೆ ಬರುತ್ತಿದ್ದು, ನಗರದಾದ್ಯಂತ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ವಿರೋಧ ಪಕ್ಷದವರು ಆಧಾರರಹಿತವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದರು.

ರಾಮದಾಸ್ ಮಾದರಿ:‘ಮೋದಿ ಸಂಕಲ್ಪದಂತೆ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರಿ ಸೌಲಭ್ಯ ತಲುಪಿಸುವುದಕ್ಕಾಗಿ ರಾಮದಾಸ್ ಶ್ರಮಿಸುತ್ತಿರುವುದು ಮಾದರಿಯಾಗಿದೆ. ಇಂತಹ ಕಾರ್ಯಕ್ರಮವನ್ನು ನಮ್ಮ ಕ್ಷೇತ್ರದಲ್ಲೂ ಮಾಡಲಾಗಿಲ್ಲ’ ಎಂದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ‘ಕಿಚನ್ ಗಾರ್ಡನ್’ ಪರಿಕಲ್ಪನೆಯಲ್ಲಿ ಸಾವಿರ ಮನೆಗಳನ್ನು ಗುರುತಿಸಿ ಆ ಮೂಲಕ ಆದಾಯ ಗಳಿಸುವಂತೆ ಮಾಡಲಾಗುವುದು. ತೋಟಗಾರಿಕೆ ಇಲಾಖೆಯಿಂದ ಸಸಿಗಳನ್ನು ವಿತರಿಸಲಾಗುತ್ತದೆ’ ಎಂದು ತಿಳಿಸಿದರು.

‘ರಸ್ತೆ ಬದಿ ವ್ಯಾಪಾರಿಗಳ ನೋಂದಣಿ ಆರಂಭಿಸಲಾಗಿದೆ. ಅವರಿಗೆ ಗುರುತಿನ‌‌ ಚೀಟಿ ಕೊಡಲಾಗುವುದು. ಚೀಟಿ‌ ಇಲ್ಲದೆ ಅಕ್ರಮವಾಗಿ ವ್ಯಾಪಾರಕ್ಕೆ ಅವಕಾಶ ಇರುವುದಿಲ್ಲ. ಚೀಟಿ ಪಡೆದರೆ ಸರ್ಕಾರದ ‌ವಿವಿಧ ಇಲಾಖೆಗಳ ಸೌಲಭ್ಯಗಳೂ ದೊರೆಯುತ್ತವೆ. ಸರ್ಕಾರವನ್ನು ಫಲಾನುಭವಿಗಳ ಮನೆಗೆ ಒಯ್ಯುತ್ತಿದ್ದೇವೆ’ ಎಂದು ಹೇಳಿದರು.

ಸೌಲಭ್ಯ ವಿತರಣೆ:ಸ್ವಯಂ ಉದ್ಯೋಗ ಯೋಜನೆಯಡಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಪೌರಕಾರ್ಮಿಕರಿಗೆ ಸ್ವಚ್ಛತಾ ಪರಿಕರಗಳ ಕಿಟ್, ಪಾಲಿಕೆಯಿಂದ ಹೆಣ್ಣು ಮಕ್ಕಳಿಗೆ ₹ 97ಸಾವಿರದ ‘ಯೋಗಲಕ್ಷ್ಮಿ ಬಾಂಡ್’, ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಪತ್ರ, ಸಾಲ ಸೌಲಭ್ಯದ ಮಂಜೂರಾತಿ ಪತ್ರ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗೆ ಸಹಾಯಧನ ನೀಡಲಾಯಿತು.

ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಚಂಪಕಾ, ಬಿ.ವಿ.ಮಂಜುನಾಥ್, ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್, ಕೆ.ಆರ್.ಕ್ಷೇತ್ರದ ಅಧ್ಯಕ್ಷ ವಡಿವೇಲು, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ, ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ಮುಖಂಡರಾದ ಪಿ.ಟಿ.ಕೃಷ್ಣ, ಓಂ ಶ್ರೀನಿವಾಸ್, ನಾಗೇಂದ್ರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರುದ್ರೇಶ್ ಇದ್ದರು.

₹ 2 ಕೋಟಿ ವೆಚ್ಚದಲ್ಲಿ ಶ್ವಾನ ಪುನರ್ವಸತಿ ಕೇಂದ್ರ
‘ಪಾಲಿಕೆಯಿಂದ ₹ 2 ಕೋಟಿ ವೆಚ್ಚದಲ್ಲಿ 3 ಎಕರೆಯಲ್ಲಿ ‘ಶ್ವಾನಗಳ ಚಿಕಿತ್ಸೆ ಮತ್ತು ಪುನರ್ವಸತಿ ಕೇಂದ್ರ’ ಸ್ಥಾಪಿಸಲಾಗುವುದು.ಮಂಗಗಳ ಪುನರ್ವಸತಿ ಕೇಂದ್ರಕ್ಕೆ ಚಾಮುಂಡಿ ಬೆಟ್ಟ ರಸ್ತೆಯಲ್ಲಿ 4 ಎಕರೆ ಜಾಗ ಗುರುತಿಸಲಾಗಿದೆ. ಇದಕ್ಕಾಗಿ ₹ 2 ಕೋಟೆ ಇಡಲಾಗಿದೆ’ ಎಂದು ರಾಮದಾಸ್ ತಿಳಿಸಿದರು.

‘ಮುಡಾದಿಂದ ₹ 61.55 ಕೋಟಿ ವೆಚ್ಚದಲ್ಲಿ ವಿವಿಧ 28 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ’ ಎಂದರು.

ಸಾಕಷ್ಟು ಅನುದಾನ
ಕೃಷ್ಣರಾಜ ಕ್ಷೇತ್ರದ ಅಭಿವೃದ್ಧಿಗೆ ಇಲಾಖೆಯಿಂದ ಸಾಕಷ್ಟು ಅನುದಾನ ಒದಗಿಸಿದ್ದೇವೆ.
–ಭೈರತಿ ಬಸವರಾಜ, ನಗರಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT