ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಬಾಡಿದ ಕಮಲ, ಕೈ ಮೇಲು

2009ರ ಚುನಾವಣೆಯಲ್ಲಿ ಅಡಗೂರು ಎಚ್.ವಿಶ್ವನಾಥ್ ಆಯ್ಕೆ
Last Updated 10 ಏಪ್ರಿಲ್ 2019, 17:17 IST
ಅಕ್ಷರ ಗಾತ್ರ

ಮೈಸೂರು: 2004ರಲ್ಲಿ ನಡೆದ ಚುನಾವಣೆಯಲ್ಲಿ ಅಟಲ್‌ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸೋಲು ಕಂಡಿತು. ಯುಪಿಎ ಬಹುಮತ ಗಳಿಸಿದ್ದರೂ ಅಚ್ಚರಿಯ ಬೆಳವಣಿಗೆಯಲ್ಲಿ ಸೋನಿಯಾ ಗಾಂಧಿ ಪ್ರಧಾನಿ ಆಗಲು ನಿರಾಕರಿಸಿದರು. ಅರ್ಥಶಾಸ್ತ್ರಜ್ಞ ಡಾ.ಮನಮೋಹನ್‌ಸಿಂಗ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತು.

5 ವರ್ಷಗಳನ್ನು ಪೂರ್ಣಗೊಳಿಸಿದ ನಂತರ 2009ರಲ್ಲಿ ಚುನಾವಣೆ ಘೋಷಣೆಯಾದಾಗ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಬದಲಾವಣೆಗಳು ನಡೆದಿರಲಿಲ್ಲ. ಅನಾರೋಗ್ಯದಿಂದ ವಾಜಪೇಯಿ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದರು. ಲಾಲ್‌ಕೃಷ್ಣ ಅಡ್ವಾಣಿ ಮುನ್ನೆಲೆಗೆ ಬಂದಿದ್ದರು.

ಇತ್ತ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಘಟಿಸಿದ್ದವು. 2004ರಿಂದ 2006ರವರೆಗೆ ಕಾಂಗ್ರೆಸ್‌ ಜೆಡಿಎಸ್ ಸರ್ಕಾರ ಅಸ್ತಿತ್ವದಲ್ಲಿದ್ದು, ಕಾಂಗ್ರೆಸ್‌ನ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದರು. ನಂತರ, ಜೆಡಿಎಸ್ ಮೈತ್ರಿಕೂಟದಿಂದ ಹೊರಬಂದು ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿತು. ಎಚ್.ಡಿ.ಕುಮಾರಸ್ವಾಮಿ 2006ರ ಫೆಬ್ರುವರಿಯಿಂದ 2007ರ ಅಕ್ಟೋಬರ್‌ವರೆಗೆ ಮುಖ್ಯಮಂತ್ರಿಯಾಗಿದ್ದರು. ನಂತರ, ಬಿಜೆಪಿಗೆ ಅಧಿಕಾರ ಬಿಟ್ಟು ಕೊಡುವಾಗ ಆದ ಭಿನ್ನಾಭಿಪ್ರಾಯದಿಂದ ಸರ್ಕಾರ ಬಿದ್ದು ಹೋಯಿತು. ಕೇವಲ ನಾಲ್ಕೇ ವರ್ಷಕ್ಕೆ (2008) ವಿಧಾನಸಭಾ ಚುನಾವಣೆ ಎದುರಾಯಿತು. ಈ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು.‌

5 ವರ್ಷಗಳಲ್ಲಿ ರಾಜ್ಯವು ಮೂವರು ಮುಖ್ಯಮಂತ್ರಿಗಳನ್ನು ಕಾಣುವಂತಾಗಿತ್ತು. ಇತ್ತ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳು ನಡೆದಿದ್ದವು. ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ) ಸಂಘಟಿಸಿ ಕಾಂಗ್ರೆಸ್‌ ಸೇರಿದರು. ಇದು ಕಾಂಗ್ರೆಸ್‌ಗೆ ವಿಶೇಷವಾಗಿ ಈ ಭಾಗದಲ್ಲಿ ಶಕ್ತಿ ತುಂಬಿತು. ಸಿದ್ದರಾಮಯ್ಯ ಅವರೊಂದಿಗೆ ಅವರ ಬೆಂಬಲಿಗರೂ ಪಕ್ಷ ತ್ಯಜಿಸಿದ್ದು, ಜೆಡಿಎಸ್‌ಗೆ ಬಲವಾದ ಪೆಟ್ಟನ್ನೇ ಕೊಟ್ಟಿತ್ತು.

ಬಿಜೆಪಿ ಪಾಳೆಯದಲ್ಲಿ ಅಂತಹ ಬದಲಾವಣೆಗಳು ಘಟಿಸಿರಲಿಲ್ಲ. ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ ಸಿ.ಎಚ್.ವಿಜಯಶಂಕರ್‌ ಅವರಿಗೆ ಅನಾಯಾಸವಾಗಿ ಟಿಕೆಟ್ ಲಭಿಸಿತು. ಮೂರನೇ ಸ್ಥಾನಕ್ಕೆ ಕುಸಿದು ಮುಖಭಂಗ ಅನುಭವಿಸಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ರಾಜ್ಯ ಮತ್ತು ರಾಷ್ಟ್ರರಾಜಕಾರಣದತ್ತ ಹೆಚ್ಚಿನ ಗಮನ ಹರಿಸಲಿಲ್ಲ. ಜತೆಗೆ, ಅವರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ರಾಜಕಾರಣದಲ್ಲೇ ಹೆಚ್ಚಿನ ಆಸಕ್ತಿ ವಹಿಸಿದರು. ಹೀಗಾಗಿ, ಅಷ್ಟೊತ್ತಿಗೆ ಈ ಭಾಗದ ಕಾಂಗ್ರೆಸ್‌ನಲ್ಲಿ ಪ್ರಭಾವಿಯಾಗಿದ್ದ ಅಡಗೂರು ಎಚ್.ವಿಶ್ವನಾಥ್ ಅವರಿಗೂ ಹೆಚ್ಚಿನ ಲಾಬಿ ಇಲ್ಲದೆ ಟಿಕೆಟ್ ಸಿಗುವಂತಾಯಿತು.

ಒಂದು ರೀತಿಯಲ್ಲಿ ಬಲಹೀನ ಎನಿಸಿದ್ದ ಜೆಡಿಎಸ್‌ನಿಂದ ಬಿ.ಎ.ಜೀವಿಜಯ ಸ್ಪರ್ಧಿಸಿ ಉತ್ತಮ ಸ್ಪರ್ಧೆಯನ್ನೇ ಒಡ್ಡಿದರು. ಕಾಂಗ್ರೆಸ್‌ಗೆ ಅಹಿಂದ ಬಲವೂ ಸೇರಿದ್ದರಿಂದ ಹಿಂದಿನ ಬಾರಿಗಿಂತ ತೀವ್ರ ಸ್ಪರ್ಧೆ ಒಡ್ಡುವ ನಿರೀಕ್ಷೆ ಇತ್ತು. ಬಿಜೆಪಿಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿರುವುದಷ್ಟೇ ಆಸರೆಯಾಗಿತ್ತು.‌

ಅದೇ ತಾನೆ ಕಾಂಗ್ರೆಸ್‌ಗೆ ಸೇರಿದ್ದ ಸಿದ್ದರಾಮಯ್ಯ ಅವರಿಗೂ ಈ ಚುನಾವಣೆ ಪ್ರತಿಷ್ಠೆಯ ಸಂಕೇತವಾಗಿತ್ತು. ಹಾಗಾಗಿ, ಬಿರುಸಿನ ಪ್ರಚಾರ ನಡೆಸಿದರು. ಚಾಮುಂಡೇಶ್ವರಿ, ನರಸಿಂಹರಾಜ, ಹುಣಸೂರು ಹಾಗೂ ಪಿರಿಯಾಪಟ್ಟಣ ಶಾಸಕರೂ ಹೆಚ್ಚಿನ ಪ್ರಚಾರದಲ್ಲಿ ಪಾಲ್ಗೊಂಡರು. ಅದರಲ್ಲೂ ವಿಶೇಷವಾಗಿ ನರಸಿಂಹರಾಜ ಕ್ಷೇತ್ರದಲ್ಲಿ ಹೆಚ್ಚಿನ ಮತಗಳು ಕಾಂಗ್ರೆಸ್‌ಗೆ ಲಭಿಸಿದವು. ಹೀಗಾಗಿ, 7,691 ಮತಗಳ ಅಂತರದಿಂದ ಕಾಂಗ್ರೆಸ್‌ನ ವಿಶ್ವನಾಥ್ ಗೆಲುವಿನ ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT