ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ತಿಂಗಳೊಳಗೆ 24X7 ಶುದ್ಧ ಕುಡಿಯುವ ನೀರು ಪೂರೈಕೆ -ಶಾಸಕ.ರಾಮದಾಸ್ ಭರವಸೆ

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಸಂಚಾರ–ಪರಿಶೀಲನೆ:
Last Updated 24 ಜೂನ್ 2019, 13:14 IST
ಅಕ್ಷರ ಗಾತ್ರ

ಮೈಸೂರು: ‘ತಿಂಗಳೊಳಗೆ 24X7 ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಭರವಸೆ ನೀಡಿದರು.

ಕ್ಷೇತ್ರದ ವಿವಿಧೆಡೆ ಸೋಮವಾರ ಸಂಚಾರ ನಡೆಸಿದ ಶಾಸಕರು ಸ್ಥಳೀಯರಿಂದ ಅಹವಾಲು ಸ್ವೀಕರಿಸಿ, ನೀರಿನ ಸಮಸ್ಯೆ ಪರಿಹಾರಕ್ಕಾಗಿ ತುರ್ತು ಕ್ರಮ ಜರುಗಿಸುವುದಾಗಿ ಹೇಳಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್‌‌-57 ರಲ್ಲಿ ಮಸಣಿಕಮ್ಮ ದೇವಸ್ಥಾನ, ಅಂಬೇಡ್ಕರ್ ಸಮುದಾಯ ಭವನ, ಹೊಂಗೆ ಮರದ ಉದ್ಯಾನ, ಉಮಾ ಮಹೇಶ್ವರಿ ದೇವಸ್ಥಾನ, ಕೆ.ಎಚ್.ಬಿ.ಕಾಂಪ್ಲೆಕ್ಸ್, ಲವಕುಶ ಉದ್ಯಾನ, ಸೌಗಂಧಿಕ ಉದ್ಯಾನ, ಕೆ.ಬ್ಲಾಕ್ ನಂದಿನಿ ಹಾಲಿನ ಡೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕರು ಸ್ಥಳೀಯರಿಂದ ಅಹವಾಲು ಆಲಿಸಿದರು.

ಯು.ಜಿ.ಡಿ, ವಿದ್ಯುತ್ ಕಂಬಗಳು, ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳು ಶಾಸಕರ ಸಂಚಾರದಲ್ಲಿ ಪ್ರತಿಧ್ವನಿಸಿದವು. ಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಿ, ವರದಿ ನೀಡಿ ಎಂದು ರಾಮದಾಸ್ ಸೂಚಿಸಿದರು.

ಉದ್ಯಾನಗಳಿಗೆ ಭೇಟಿ ನೀಡಿದ ಸಂದರ್ಭ, ನೀರು–ಬೆಳಕಿನ ವ್ಯವಸ್ಥೆ ಆಗಬೇಕು. ನಿರ್ವಹಣೆ ಸಮರ್ಪಕವಿಲ್ಲ ಎಂಬ ದೂರು ಕೇಳಿ ಬಂದವು. ಸ್ಥಳೀಯರ ದೂರಿಗೆ ಸ್ಪಂದಿಸಿದ ರಾಮದಾಸ್‌, ಶಾಸಕರ ಅನುದಾನದಿಂದ ಈ ಎಲ್ಲಾ ಉದ್ಯಾನಗಳ ಅಭಿವೃದ್ಧಿಯನ್ನು ಮಾಡಿ, ತದ ನಂತರ ಅದನ್ನು ನಿರ್ವಹಣೆ ಮಾಡುವಂತೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಳೆ–ಗಾಳಿಗೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸದೇ, ಅಲ್ಲಲ್ಲೇ ಬಿಟ್ಟಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ತೆರವುಗೊಳಿಸಿ ವರದಿ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಗಂಡ ಭೇರುಂಡ ಉದ್ಯಾನಕ್ಕೆ ಭೇಟಿ ನೀಡಿದ ಶಾಸಕರು ಸ್ಥಳೀಯ ನಿವಾಸಿಗಳಿಂದ ಸಲಹೆ ಸ್ವೀಕರಿಸಿದರು. ಸ್ಥಳೀಯ ನಗರ ಪಾಲಿಕೆ ಸದಸ್ಯರ ಅನುದಾನದಲ್ಲಿ ಉದ್ಯಾನಕ್ಕೆ ನೀಡಲಾಗಿರುವ ಮೂರು ಹುಲ್ಲು ಕತ್ತರಿಸುವ ಯಂತ್ರ ವೀಕ್ಷಿಸಿದರು. ಸ್ವತಃ ತಾವೇ ಹುಲ್ಲು ಕತ್ತರಿಸಿದ್ದು ವಿಶೇಷವಾಗಿತ್ತು. ಯು.ಜಿ.ಡಿ. ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು. ಕೋತಿ, ನಾಯಿಗಳ ಉಪಟಳ ಶಮನಕ್ಕೆ ಸ್ಥಳೀಯ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.

ಕುವೆಂಪು ನಗರದ ಶಾಂತಿಸಾಗರ್ ಕಾಂಪ್ಲೆಕ್ಸ್‌ನಲ್ಲಿ ಟ್ರಾಫಿಕ್ ಸಮಸ್ಯೆ, ಜನರಿಗೆ ಬಸ್ ಹತ್ತಲು ಬಹಳ ಸಮಸ್ಯೆಯಾಗುತ್ತಿರುವುದು ಗೋಚರಿಸಿತು. ಸ್ಥಳೀಯರಿಗೆ ಅನೂಕೂಲವಾಗುವಂತೆ ಸೂಕ್ತ ಬಸ್ ನಿಲ್ದಾಣ ನಿರ್ಮಾಣ, ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಂಬಂಧಿಸಿದ ಟ್ರಾಫಿಕ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಈ ಸಂಬಂಧ ಸಭೆ ನಡೆಸುವಂತೆ ಆದೇಶಿಸಿದರು.

ಲವಕುಶ ಉದ್ಯಾನದ ಎದುರಿನ ಪಾಳು ಬಿದ್ದಿರುವ ಜಾಗ, ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರುತ್ತಿದ್ದಂತೆ, ರಾಮದಾಸ್‌ ಜಾಗದ ಪೂರ್ಣ ಮಾಹಿತಿ ನೀಡುವಂತೆ ಮೂಡಾ ಅಧಿಕಾರಿಗಳಿಗೆ ಸೂಚಿಸಿದರು.

ಕುವೆಂಪು ನಗರದಲ್ಲಿರುವ ವಿದ್ಯಾವರ್ಧಕ ಶಾಲೆಯಿಂದ ನಿತ್ಯ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ನಿವಾಸಿಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಆ ಶಾಲೆಯ ಹಿಂಭಾಗದಲ್ಲಿ ಮತ್ತೊಂದು ಗೇಟ್ ನಿರ್ಮಿಸಿದರೆ, ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಸ್ಥಳೀಯರು ಕೋರಿದರು. ಇದಕ್ಕೆ ಕೂಡಲೇ ಶಾಸಕರು ಸಂಬಂಧಿಸಿದ ಪೊಲೀಸ್ ಸಿಬ್ಬಂದಿಗಳಿಗೆ, ಶಾಲೆಯ ಮುಖ್ಯಸ್ಥರೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ಎಂ.ಸಿ.ರಮೇಶ್, ಮುಖಂಡರಾದ ರವಿಶಂಕರ್, ಉಪೇಂದ್ರ, ಆದಿ, ವೆಂಕಟೇಶ್‍ದಾಸ್, ವಾಸು, ಗಿರಿಧರ್‌ ಯಾದವ್, ಮಂಜುಳಾ, ಅನುಪಮಾ, ರಾಜಣ್ಣ, ಗಿರೀಶ್, ನಾಗರಾಜು, ಸಿದ್ದೇಗೌಡ ಹಾಗೂ ನಗರಪಾಲಿಕೆಯ ಎಲ್ಲಾ ಅಧಿಕಾರಿಗಳು, ಅರಣ್ಯ ಇಲಾಖೆ, ವಿದ್ಯುತ್ ಇಲಾಖೆ, ಮೂಡಾ, ಪೊಲೀಸ್ ಇಲಾಖೆ, ಸಂಚಾರಿ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳು, ವಾರ್ಡ್ ಪ್ರಮುಖರು ಶಾಸಕರ ಭೇಟಿಯ ಸಂದರ್ಭ ಜತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT