ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ 2ನೇ ಪ್ರಾಶಸ್ತ್ಯ ಮತ: ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ನವರ 2ನೇ ಪ್ರಾಶಸ್ತ್ಯ ಮತ ಜೆಡಿಎಸ್‌ ಅಭ್ಯರ್ಥಿಗೆ ನೀಡಲು ಮನವಿ
Last Updated 7 ಜೂನ್ 2022, 8:00 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯಸಭಾ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಅವರಿಗೆ ಜೆಡಿಎಸ್‌ನ 32 ಸದಸ್ಯರ 2ನೇ ಪ್ರಾಶಸ್ತ್ಯ ಮತಗಳನ್ನು ನೀಡಲು ಪಕ್ಷ ಸಿದ್ಧವಿದೆ. ಕಾಂಗ್ರೆಸ್‌ನವರು 2ನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್‌ ಅಭ್ಯರ್ಥಿ ಡಿ. ಕುಪೇಂದ್ರ ರೆಡ್ಡಿ ಅವರಿಗೆ ನೀಡಲಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯನ್ನು ಸೋಲಿಸಬೇಕಾದರೆ ಕಾಂಗ್ರೆಸ್‌ನ 2ನೇ ಅಭ್ಯರ್ಥಿಯನ್ನು ಜೆಡಿಎಸ್‌ ಬೆಂಬಲಿಸಬೇಕು. ಜೆಡಿಎಸ್‌ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಸೋಲಿಸುವುದೇ ನಿಮ್ಮ ಉದ್ದೇಶವಾಗಿದ್ದರೆ ಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್‌ ನಾಯಕರು ನಮ್ಮ ಜತೆ ಚರ್ಚಿಸಿ ಮನವಿ ಮಾಡಬಹುದಿತ್ತಲ್ಲವೇ? ನಾವು ಅಭ್ಯರ್ಥಿಯನ್ನು ಘೋಷಿಸಿದ ಮೇಲೆ ನಿವೃತ್ತಿಗೊಳಿಸಲು ಸಾಧ್ಯವಿಲ್ಲ’ ಎಂದರು.

‘ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ನಿಲ್ಲಿಸಿರುವುದರಿಂದ ತೆಗೆಯಲು ಆಗುವುದಿಲ್ಲ. 2ನೇ ಪ್ರಾಶಸ್ತ್ಯ ಮತಗಳನ್ನು ನಮಗೆ ಕೊಡಿ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಜೂನ್‌ 2ರಂದು ದೂರವಾಣಿ ಕರೆ ಮಾಡಿ ಮನವಿ ಮಾಡಿದರು. ನಮ್ಮ 2ನೇ ಪ್ರಾಶಸ್ತ್ಯ ಮತಗಳನ್ನು ನೀಡುವಂತೆ ಶಾಸಕರನ್ನು ಮನವೊಲಿಸುವೆ ಎಂದು ತಿಳಿಸಿದೆ. ಆದರೆ, ಕಾಂಗ್ರೆಸ್‌ನದ್ದು ಮೊದಲನೇ ಪ್ರಾಶಸ್ತ್ಯದ 22 ಅಥವಾ 23 ಮತಗಳಿದ್ದು, ನಾವು 32 ಕೊಟ್ಟರೂ ಮೊದಲನೇ ಸುತ್ತಿನಲ್ಲೇ ಗೆಲ್ಲುವ ಅವಕಾಶವನ್ನು ಅವರು ಕಳೆದುಕೊಳ್ಳುತ್ತಾರೆ. ಹೀಗಾಗಿ, ಸುರ್ಜೇವಾಲಾ ಅವರಿಗೆ ಸೋಮವಾರ ಕರೆ ಮಾಡಿ ಮಾತನಾಡಿದೆ. ನಾವು 32 ಮತಗಳನ್ನು ನಿಮಗೆ ವರ್ಗಾಯಿಸುತ್ತೇವೆ. ನಿಮ್ಮ ಎರಡನೇ ಅಭ್ಯರ್ಥಿಯ 2ನೇ ಪ್ರಾಶಸ್ತ್ಯದ 23 ಮತಗಳನ್ನು ನಮಗೆ ವರ್ಗಾಯಿಸಿ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸೋಣ ಎಂದು ಮನವಿ ಮಾಡಿದೆ. ನಿಮ್ಮ ಜತೆ ಮಾತನಾಡಲು ಪಕ್ಷದ ನಾಯಕರನ್ನು ಕಳುಹಿಸುತ್ತೇನೆ ಎಂದು ಸುರ್ಜೇವಾಲಾ ಹೇಳಿದ್ದರು. ಆದರೆ, ಯಾರೂ ಚರ್ಚೆಗೆ ಬಂದಿಲ್ಲ’ ಎಂದು ತಿಳಿಸಿದರು.

‘ಕಾಂಗ್ರೆಸ್‌ಗೆ ಆತ್ಮಸಾಕ್ಷಿ ಮತಗಳು ಸಿಗುತ್ತವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆತ್ಮ ಸಾಕ್ಷಿ ಮತಗಳನ್ನು ಹೇಳುವ ಮುನ್ನ ನಿಮ್ಮಲ್ಲಿ ಆತ್ಮಸಾಕ್ಷಿ ಇದೆಯೇ ಎಂದು ಕೇಳಿಕೊಳ್ಳಿ ಪ್ರಶ್ನಿಸಿಕೊಳ್ಳಿ. 2008–09ರಲ್ಲಿ ಆಪರೇಷನ್‌ ಕಮಲ ಆದಾಗ ನಿಮ್ಮ ಹಾಗೂ ಬಿ.ಎಸ್‌.ಯಡಿಯೂರಪ್ಪ ನಡುವೆ ಏನು ನಡೆಯಿತು ಎಂಬುದರ ಬಗ್ಗೆ ಈವರೆಗೆ ಬಾಯಿ ಬಿಟ್ಟಿದ್ದೀರಾ? ವಿಮಾನ ನಿಲ್ದಾಣದ ವಿಐಪಿ ಕೊಠಡಿಯಲ್ಲಿ ಯಡಿಯೂರಪ್ಪ ಹಾಗೂ ನೀವು ಕುಳಿತು ಮಾತನಾಡುತ್ತಿರುವ ಚಿತ್ರ ಬಿಡುಗಡೆಯಾಗಿದೆ. ಆ ಚಿತ್ರ ಯಾವ ಉದ್ದೇಶಕ್ಕೆ, ಯಾರ ಕಡೆಯಿಂದ ಬಿಡುಗಡೆಯಾಗಿದೆ? ಯಾವ ಸಂದೇಶವನ್ನು ನೀಡಲು ಆ ಚಿತ್ರವನ್ನು ಹಾಕಿಸಿದ್ದೀರಿ’ ಎಂದು ಪ್ರಶ್ನಿಸಿದರು.

‘ನನ್ನ ಪಕ್ಷವನ್ನು ಉಳಿಸುವ ಕೆಲಸ ನಿಮಗೆ ಬೇಡ. ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಕಾಂಗ್ರೆಸ್‌ ಪಕ್ಷವನ್ನು ಉಳಿಸಲು ಶ್ರಮಿಸಿ. 2023ಕ್ಕೆ ಆ ಋಣವನ್ನು ತೀರಿಸಿಕೊಳ್ಳಿ. ನಿಮ್ಮ ಬುರುಡೆ ಭಾಷಣ ಕೇಳಿ ಯಾರೂ ಮತ ನೀಡುವುದಿಲ್ಲ. ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕಾದರೆ ಸಿದ್ದರಾಮಯ್ಯ ಸಂಕುಚಿತ ಮನೋಭಾವ, ಕಲ್ಮಶದಿಂದ ಹೊರಗೆ ಬರಬೇಕು. ಹೊಸ ರಾಜಕಾರಣವನ್ನು ಆರಂಭಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕರಾದ ಸಾ.ರಾ. ಮಹೇಶ್‌, ಬಂಡೆಪ್ಪ ಕಾಶಂಪೂರ, ಎಂ.ಅಶ್ವಿನ್ ಕುಮಾರ್, ವಿಧಾನ ಪರಿಷತ್‌ ಸದಸ್ಯರಾದ ಸಿ.ಎನ್‌. ಮಂಜೇಗೌಡ, ಕೆ.ಟಿ.ಶ್ರೀಕಂಠೇಗೌಡ, ದಕ್ಷಿಣ ಪದವೀಧರರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಕೆ.ರಾಮು ಇದ್ದರು.

‘ನಾವೇನು ನಿಮ್ಮ ಗುಲಾಮರೇ?’

‘ಜಾತ್ಯತೀತ ಅಸ್ಮಿತೆಯನ್ನು ಕಾಪಾಡಬೇಕಾದರೆ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದನ್ನು ಉಳಿಸಲು ನೀವು ಗುತ್ತಿಗೆ ಪಡೆದಿದ್ದೀರಾ? ನಾವೇನು ನಿಮ್ಮ ಗುಲಾಮರೇ? ಬಿಜೆಪಿ 105 ಸ್ಥಾನ ಗೆಲ್ಲಲು ನೀವೇ ಕಾರಣರಲ್ಲವೇ? ಜೆಡಿಎಸ್‌ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಬಿಂಬಿಸಲು ಹೋಗಿ ನೀವು 70 ಸ್ಥಾನಗಳಿಗೆ ಬಂದು ನಿಂತಿದ್ದೀರಿ. ನಿಜವಾದ ಬಿ ಟೀಂ ನಾಯಕ ಯಾರು ಎಂಬುದು ಜೂನ್‌ 10ರಂದು ಹೊರಗೆ ಬರುತ್ತದೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ಚಡ್ಡಿಗೆ ಅಗೌರವ ತರಬೇಡಿ’

‘ಈಗ ಚಡ್ಡಿ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ಈ ಚಡ್ಡಿಯಲ್ಲಿ ಏನೂ ಇಲ್ಲ. ನಾಗಪುರದ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಹಾಕಿಕೊಳ್ಳುವ ಚಡ್ಡಿಯಿಂದ ಆಗುವ ಮಾರಕದ ಬಗ್ಗೆ ಚರ್ಚೆ ನಡೆಸಲಿ. ರೈತರು ಹಾಕಿಕೊಳ್ಳುವ ಚಡ್ಡಿಗೆ ಅಗೌರವ ತರಬೇಡಿ’ ಎಂದು ಎಚ್‌.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT