ನಾಲ್ಕನೇ ಬಾರಿಗೆ ವಿಜಯದ ನಗೆ ಬೀರಿದ ಒಡೆಯರ್

ಭಾನುವಾರ, ಏಪ್ರಿಲ್ 21, 2019
32 °C
1999ರ ಚುನಾವಣೆ; ಒಂದೇ ವರ್ಷಕ್ಕೆ ಮುದುಡಿದ ಕಮಲ,

ನಾಲ್ಕನೇ ಬಾರಿಗೆ ವಿಜಯದ ನಗೆ ಬೀರಿದ ಒಡೆಯರ್

Published:
Updated:
Prajavani

ಮೈಸೂರು: 13ನೇ ಲೋಕಸಭಾ ಚುನಾವಣೆ ಕೇವಲ ಒಂದೇ ವರ್ಷಕ್ಕೆ ಎದುರಾಯಿತು. ಈ ಮೂಲಕ ದೇಶದಲ್ಲಿ ಹತ್ತೇ ವರ್ಷದಲ್ಲಿ 4 ಲೋಕಸಭಾ ಚುನಾವಣೆಗಳು ನಡೆದವು.

1998ರ ಚುನಾವಣೆಯಲ್ಲೂ ಯಾವುದೇ ಪಕ್ಷಕ್ಕೆ ಬಹುಮತ ಲಭ್ಯವಾಗಲಿಲ್ಲ. ಆಗ ಎನ್‌ಡಿಎ ನೇತೃತ್ವದಲ್ಲಿ ಸುಮಾರು 20 ಪಕ್ಷಗಳು ಕೇಂದ್ರದ ಚುಕ್ಕಾಣಿ ಹಿಡಿದವು. ಈ ಎಲ್ಲ ಪಕ್ಷಗಳನ್ನು ಸರಿದೂಗಿಸುವ ಹೊಣೆಗಾರಿಕೆ ಅಟಲ್‌ಬಿಹಾರಿ ವಾಜಪೇಯಿ ಅವರ ಹೆಗಲೇರಿತು.

ಎಐಎಡಿಎಂಕೆ ಬೆಂಬಲ ವಾಪಸ್ ತೆಗೆದುಕೊಂಡಿದ್ದರಿಂದ 1999ರ ಏಪ್ರಿಲ್ 17ರಂದು ಕೇವಲ ಒಂದೇ ಒಂದು ಮತದ ಅಂತರದಿಂದ ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರ ವಿಶ್ವಾಸ ಮತ ಕಳೆದುಕೊಂಡಿತು. ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಸೇರಿದಂತೆ ಯಾವೊಂದು ಪಕ್ಷಗಳೂ ಸರ್ಕಾರ ರಚಿಸುವಷ್ಟು ಸಂಸದರನ್ನು ಹೊಂದಿರಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ಚುನಾವಣೆ ಘೋಷಿಸಲಾಯಿತು.

ಒಂದೇ ಒಂದು ಮತದ ಅಂತರದಿಂದ ಸರ್ಕಾರ ಬಿದ್ದು ಹೋಯಿತು. ಬೇರೆ ಪಕ್ಷದವರಿಗೆ ಆಮಿಷ ಒಡ್ಡಿ ಸೆಳೆಯುವ ಯತ್ನವನ್ನು ನಡೆಸಲಿಲ್ಲ ಎಂಬ ಕಾರಣಕ್ಕೆ ಬಿಜೆಪಿಗೆ ಎಲ್ಲಿಲ್ಲದ ಅನುಕಂಪ ಈ ವೇಳೆ ವ್ಯಕ್ತವಾಯಿತು. ಆದರೆ, ಮೈಸೂರು ಕ್ಷೇತ್ರದಲ್ಲಿ ಈ ಅನುಕಂಪಕ್ಕೆ ಬಿಜೆಪಿಯಲ್ಲಿನ ಬಂಡಾಯ ಅಡ್ಡಗಾಲಾಯಿತು.

‌ಇತ್ತ ರಾಜ್ಯದಲ್ಲಿ ಅಷ್ಟೊತ್ತಿಗೆ ಜನತಾದಳ ಸರ್ಕಾರದ ವಿರುದ್ಧ ವಿರೋಧಿ ಅಲೆ ಉಂಟಾಗಿತ್ತು. ಕಾಂಗ್ರೆಸ್‌ನಿಂದ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾಗುತ್ತಿದ್ದರು. ಇದು ಕಾಂಗ್ರೆಸ್‌ ಅಲೆಗೆ ಕಾರಣವಾಗತೊಡಗಿತು.

ಬಿಜೆಪಿಗೆ ಎದುರಾದ ಸವಾಲುಗಳು: ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ ಇತ್ತಾದರೂ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯೇ ಆಯ್ಕೆಯಾಗಿದ್ದರೂ ಕ್ಷೇತ್ರದಲ್ಲಿ ಆ ನಿರೀಕ್ಷೆ ಇರಲಿಲ್ಲ. ಹುಣಸೂರಿನ ಬಿಜೆಪಿ ಮುಖಂಡ ಬಿ.ಎಸ್.ಮರಿಲಿಂಗಯ್ಯ ಪಕ್ಷ ತ್ಯಜಿಸಿ ಜೆಡಿಎಸ್‌ ಸೇರಿದ್ದು ಇದಕ್ಕೆ ಕಾರಣವಾಗಿತ್ತು. ಜತೆಗೆ, ಜೆಡಿಎಸ್‌ನಿಂದ ಮರಿಲಿಂಗಯ್ಯ ಕಣಕ್ಕೆ ಇಳಿದುದು ಗೆಲುವಿನ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿತು.‌

ಇವೆಲ್ಲಕ್ಕೂ ತಿಲಕವಿಟ್ಟಂತೆ ಕಳೆದ ಬಾರಿ ಸ್ಪರ್ಧಿಸಲು ನಿರಾಕರಿಸಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಮತ್ತೆ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದು ಬಿಜೆಪಿ ಪಾಲಿಗೆ ದೊಡ್ಡ ಸವಾಲಾಯಿತು. ಇಷ್ಟೆಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಕಬ್ಬಿಣದ ಕಡಲೆ ಎನಿಸಿತು.

ಕಾಂಗ್ರೆಸ್‌ನಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸ್ಪರ್ಧೆಗೆ ಇಳಿದರು. ಬಿಜೆಪಿಯಿಂದ ವಿಜಯಶಂಕರ್ ಹಾಗೂ ಜೆಡಿಎಸ್‌ನಿಂದ ಮರಿಲಿಂಗಯ್ಯ ಕಣದಲ್ಲಿದ್ದರು. ಇದರ ಜತೆಗೆ, ಕ್ರಾಂತಿಕಾರಿ ಸಮಾಜವಾದಿ ಪಾರ್ಟಿ (ಕೆಎಸ್‌ವಿಪಿ)ಯಿಂದ ಸೋಮಸುಂದರ ಶಾಸ್ತ್ರಿ ಹಾಗೂ ಎಡಿಎಂಕೆಯಿಂದ ಎಂ.ಅಮ್ಜದ್‌ಖಾನ್‌ ಸ್ಪರ್ಧಿಸಿದ್ದರು.

‌ಮರಿಲಿಂಗಯ್ಯ ಅವರು ತಾವು ಮಾಜಿ ಯೋಧ ಎಂಬ ವಿಷಯವನ್ನೇ ಚುನಾವಣಾ ಪ್ರಚಾರದಲ್ಲಿ ಪ್ರಧಾನವಾಗಿ ಪ್ರಸ್ತಾಪಿಸಿದರು. ದೇಶ ಸೇವೆ ಮಾಡಿರುವ ವಿಚಾರವನ್ನು ಜನರ ಮುಂದಿಟ್ಟರು. ಇದರಿಂದ ಬಹುತೇಕ ಮತದಾರರು ಇವರ ಕಡೆಗೆ ನೋಡುವಂತಾಯಿತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಹಣಾಹಣಿಯಲ್ಲಿ ಒಡೆಯರ್ ಅವರು 13,431 ಮತಗಳ ಅಂತರದಿಂದ ಬಿಜೆಪಿಯ ಸಿ.ಎಚ್.ವಿಜಯಶಂಕರ್ ಅವರನ್ನು ಮಣಿಸಿದರು. ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಆಯ್ಕೆಯಾದ ಇದುವರೆಗಿನ ಏಕೈಕ ಸಂಸದ ಎಂಬ ದಾಖಲೆಯನ್ನು ಈ ಮೂಲಕ ಅವರು ಬರೆದರು. ಜೆಡಿಎಸ್‌ನ ಮರಿಲಿಂಗಯ್ಯ ಅವರು 1,90,207 ಮತಗಳನ್ನು ಪಡೆಯುವ ಮೂಲಕ ತೀವ್ರ ಪೈಪೋಟಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !