ಸೋಮವಾರ, ನವೆಂಬರ್ 30, 2020
19 °C
ಗಮನ ಸೆಳೆದ ಮರಗಾಲು ವೇಷಧಾರಿ, ಆನೆಗಾಡಿ ಸ್ತಬ್ಧಚಿತ್ರ

5 ಕಲಾ ತಂಡ, 2 ಸ್ತಬ್ಧಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದು ಕೇವಲ ಐದು ಕಲಾ ತಂಡಗಳು, ಎರಡು ಸ್ತಬ್ಧಚಿತ್ರಗಳು. ಅರಮನೆ ಆವರಣದಲ್ಲಿ ಮಧ್ಯಾಹ್ನ 3.24ಕ್ಕೆ ಕಲಾ ತಂಡಗಳ ಪ್ರದರ್ಶನ ಆರಂಭವಾಗಿ ಕೇವಲ 20 ನಿಮಿಷಗಳಲ್ಲಿ ಮುಗಿದು ಹೋಯಿತು.

ಮೊದಲಿಗೆ ನಿಶಾನೆ ಆನೆ ವಿಕ್ರಂ ಹಾಗೂ ನೌಫತ್ ಆನೆ ಗೋಪಿ ಮೆರವಣಿಗೆಯಲ್ಲಿ ಮುಂದೆ ಸಾಗಿದವು. ನಂತರ ನಾದಸ್ವರ, ವೀರಗಾಸೆ, ಚೆಂಡೆ ಮೇಳ, ಮರಗಾಲು ವೇಷ, ಚಿಲಿಪಿಲಿ ಗೊಂಬೆ ಕಲಾವಿದರು ಪ್ರದರ್ಶನ ನೀಡುತ್ತಾ ರಂಜಿಸಿದರು.

ಮರಗಾಲು ವೇಷಧಾರಿಗಳಾದ ಸಿದ್ದರಾಜು ಮತ್ತು ತಂಡದವರು ಕೊರೊನಾ ವೈರಸ್‌ ಹಿಮ್ಮೆಟ್ಟಿಸುವ ದುರ್ಗೆಯ ರೂಪವನ್ನು ಪ್ರದರ್ಶಿಸಿದರು. ಶ್ರೀನಿವಾಸ ರಾವ್ ಹಾಗೂ ಅವರ ತಂಡ ಪ್ರಸ್ತುತ ಪಡಿಸಿದ ಚೆಂಡೆ ಮೇಳ ಸೊಗಸಾಗಿತ್ತು. ಟಿ.ಕೆ.ರಾಜಶೇಖರ್‌ ಮತ್ತು ತಂಡದವರು ಚಿಲಿಪಿಲಿ ಗೊಂಬೆ ಪ್ರದರ್ಶನ ನೀಡಿದರು.

ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ನಿರ್ಮಿಸಿದ್ದ ಕೊರೊನಾ ವಾರಿಯರ್‌ ಸ್ತಬ್ಧಚಿತ್ರ ಮೆರವಣಿಗೆ ವಿಶೇಷ ಆಕರ್ಷಣೆ ಎನಿಸಿತು. ಹಾಗೆಯೇ, ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವತಿಯ ಆನೆ ಬಂಡಿ ಸ್ತಬ್ಧಚಿತ್ರ ಕೂಡ ಸೊಗಸಾಗಿತ್ತು. ಇದು ಜಂಬೂಸವಾರಿಯ ಇತಿಹಾಸವನ್ನು ಮರುಕಳಿಸಿತು.

ಬಳಿಕ ಅಶ್ವಾರೋಹಿ ಪಡೆಯ ಪ್ರಧಾನ ಕಮಾಂಡೆಂಟ್ ಕೆಎಆರ್‌ಪಿ ಮೌಂಟೆಂಡ್ ಕಂಪನಿ ತುಕಡಿ ಶಿಸ್ತುಬದ್ಧವಾಗಿ ಸಾಗಿತು. ಅಂಬಾರಿ ಹೊತ್ತ ಅಭಿಮನ್ಯುವಿಗೆ ಕುಮ್ಕಿ ಆನೆಗಳಾದ ವಿಜಯಾ, ಕಾವೇರಿ ಆನೆಗಳು ಸಾಥ್ ನೀಡಿದವು. ಅಂಬಾರಿ ಹಿಂದೆ ಅಶ್ವಾರೋಹಿ ಪಡೆ, ಫಿರಂಗಿ ಗಾಡಿಗಳು, ಅರಣ್ಯ ಇಲಾಖೆ ವೈದ್ಯರ ತಂಡ, ಅಗ್ನಿಶಾಮಕ ತಂಡ ಹಾಗೂ ತುರ್ತುಚಿಕಿತ್ಸಾ ವಾಹನ ಸಾಗಿದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.