ಪಾಳುಬಿದ್ದ ಕಟ್ಟಡ; ₹ 5 ಕೋಟಿ ವ್ಯರ್ಥ

7
ಆದಾಯ ಹಂಚಿಕೆಗೆ ಮೃಗಾಲಯ–ಪಾಲಿಕೆ ಜಟಾಪಟಿ: ಇನ್ನೂ ತಲೆ ಎತ್ತದ ಅಕ್ವೇರಿಯಂ

ಪಾಳುಬಿದ್ದ ಕಟ್ಟಡ; ₹ 5 ಕೋಟಿ ವ್ಯರ್ಥ

Published:
Updated:
ಮೈಸೂರಿನ ಮೃಗಾಲಯ ಬಳಿ ಪಾಳು ಬಿದ್ದಿರುವ ನಿರ್ಮಾಣ ಹಂತದ ಅಕ್ವೇರಿಯಂ 

ಮೈಸೂರು: ಮೃಗಾಲಯ ಹಾಗೂ ಕಾರಂಜಿ ಕೆರೆ ನಡುವೆ ನಿರ್ಮಾಣ ಹಂತದಲ್ಲಿರುವ ಅಕ್ವೇರಿಯಂ (ಮತ್ಸ್ಯಾಲಯ) ಯೋಜನೆ ಹಲವು ವರ್ಷಗಳಿಂದ ಪಾಳುಬಿದ್ದಿದ್ದು, ಸರ್ಕಾರದ ₹ 5 ಕೋಟಿ ಅನುದಾನ ವ್ಯರ್ಥವಾಗಿದೆ.

‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು’ ಎಂಬ ಗಾದೆಯಂತೆ ಇನ್ನೂ ತಲೆ ಎತ್ತದ ಈ ಅಕ್ವೇರಿಯಂನ ಆದಾಯ ಹಂಚಿಕೆಗೆ ಮಹಾನಗರ ಪಾಲಿಕೆ ಹಾಗೂ ಚಾಮರಾಜೇಂದ್ರ ಮೃಗಾಲಯ ಜಟಾಪಟಿಗೆ ಇಳಿದಿವೆ. ನನೆಗುದಿಗೆ ಬಿದ್ದಿರುವ ಅಕ್ವೇರಿಯಂ ಅಭಿವೃದ್ಧಿಪಡಿಸಲು ತನ್ನ ಸುಪರ್ದಿಗೆ ವಹಿಸುವಂತೆ ಮೃಗಾಲಯದ ಅಧಿಕಾರಿಗಳು ಮನವಿ ಮಾಡಿದ್ದರೂ ಅದಕ್ಕೆ ಪಾಲಿಕೆ ಒಪ್ಪುತ್ತಿಲ್ಲ. ಆದಾಯ ಹಂಚಿಕೆಯ ಸೂತ್ರ ತಡೆಗೋಡೆಯಾಗಿ ಉಳಿದಿದೆ.

‘ಅಕ್ವೇರಿಯಂ ಇರುವ ಜಾಗದಲ್ಲಿ ಮೃಗಾಲಯದ ಹಕ್ಕು ಕೂಡ ಇದೆ. ಏಕೆಂದರೆ ಶೇ 50ರಷ್ಟು ಜಾಗ ನಮಗೆ ಸೇರಿದ್ದು. ಇದನ್ನು ಅಭಿವೃದ್ಧಿಪಡಿಸಲು ₹ 25 ಕೋಟಿ ಅನುದಾನದ ಅವಶ್ಯವಿದೆ. ರಾಜ್ಯ ಅಥವಾ ಕೇಂದ್ರ ಸರ್ಕಾರದ ನೆರವಿನ ಮೂಲಕ ಈ ಹಣ ಹೊಂದಿಸಲು ನಾವು ಸಿದ್ಧರಿದ್ದೇವೆ. ಆದರೆ, ನಿರ್ಮಾಣ ಹಂತದಲ್ಲಿರುವ ಕಟ್ಟಡ ಹಾಗೂ ಸುಮಾರು ಒಂದು ಎಕರೆ ಜಾಗವನ್ನು ಪಾಲಿಕೆಯು ನಮ್ಮ ಸುಪರ್ದಿಗೆ ನೀಡುತ್ತಿಲ್ಲ’ ಎಂದು ಕರ್ನಾಟಕ ಮೃಗಾಲಯ ಪ‍್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೃಗಾಲಯ ಹಾಗೂ ಕಾರಂಜಿ ಕೆರೆಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನವಾದ ₹ 5 ಕೋಟಿ ಬಳಸಿಕೊಂಡು ಮಹಾನಗರ ಪಾಲಿಕೆಯು 2010ರಲ್ಲಿ ಅಕ್ವೇರಿಯಂ ನಿರ್ಮಿಸಲು ಮುಂದಾಗಿತ್ತು. ಆದರೆ, ಅನುದಾನ ಕೊರತೆಯಿಂದ ಅಭಿವೃದ್ಧಿ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿತು. ಗಿಡಗಂಟಿ ಬೆಳೆದು ಆ ಕಟ್ಟಡವೇ ಮುಚ್ಚಿ ಹೋಗುವ ಹಂತ ತಲುಪಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದೆ.

‘ಅಕ್ವೇರಿಯಂನಿಂದ ಆರಂಭದಲ್ಲಿ ಬರುವ ಆದಾಯ ಹಂಚಿಕೆ ಸಾಧ್ಯವಿಲ್ಲ. ಮೃಗಾಲಯಕ್ಕೆ ಸರ್ಕಾರದಿಂದ ಅನುದಾನ ಬರುವುದಿಲ್ಲ. ಪ್ರವೇಶ ಶುಲ್ಕದಿಂದಲೇ ಎಲ್ಲವನ್ನೂ ನಿರ್ವಹಣೆ ಮಾಡಬೇಕು. ಐದಾರು ವರ್ಷಗಳ ಬಳಿಕ ಆದಾಯ ನೋಡಿಕೊಂಡು ಹಂಚಿಕೆ ಮಾಡಬಹುದು. ಆದರೆ, ಈಗಲೇ ಹಂಚಿಕೆ ಸೂತ್ರಕ್ಕೆ ಪಾಲಿಕೆ ಹಟ ಹಿಡಿದಿದೆ’ ಎಂದು ಹೇಳಿದರು.

ಬೆಂಗಳೂರಿನ ಮೂಲದ ವಾಸ್ತುಶಿಲ್ಪಿಯೊಬ್ಬರು 1,500 ಚದರ ಅಡಿ ವಿಸ್ತೀರ್ಣದ ಅಕ್ವೇರಿಯಂ ಕಟ್ಟಡವನ್ನು ವಿನ್ಯಾಸ ಮಾಡಿದ್ದಾರೆ.

‘ನಾವು ಕೂಡ ಅಕ್ವೇರಿಯಂ ಯಾವ ರೀತಿ ಇರಬೇಕೆಂದು ಪರಿಣತರ ನೆರವಿನಿಂದ ನೀಲನಕ್ಷೆ ಮಾಡಿಟ್ಟುಕೊಂಡಿದ್ದೇವೆ. ವಿವಿಧ ಪ್ರಭೇದಗಳ ಮೀನು ತಂದಿಡುವ ಯೋಜನೆ ಇದೆ. ಆದರೆ, ಪಾಲಿಕೆ ಆಸಕ್ತಿ ತೋರಿಸುತ್ತಿಲ್ಲ. ಹಿಂದೆ ಹಲವು ಬಾರಿ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿಲ್ಲ’ ಎಂದರು.

ಪಾಲಿಕೆ ಹಾಗೂ ಮೃಗಾಲಯದ ಪ್ರತಿಷ್ಠೆಯಿಂದ ತೆರಿಗೆ ಹಣ ವ್ಯರ್ಥವಾಗಿದೆ ಎಂದು ಸಾರ್ವಜನಿಕರು ಹಾಗೂ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃಗಾಲಯದ ಸುಪರ್ದಿಗೆ ವಹಿಸಿದ್ದರೆ ಪ್ರವಾಸಿ ತಾಣವನ್ನಾಗಿ ರೂಪಿಸಬಹುದಿತ್ತು. ಆದರೆ, ಪಾಲಿಕೆಯು ಮೀನಮೇಷ ಎಣಿಸುತ್ತಿದೆ. ಶೇ 50 ಆದಾಯಕ್ಕೆ ಬೇಡಿಕೆ ಇಟ್ಟಿದೆ
- ಬಿ.ಪಿ.ರವಿ, ಸದಸ್ಯ ಕಾರ್ಯದರ್ಶಿ, ಕರ್ನಾಟಕ ಮೃಗಾಲಯ ಪ್ರಾಧಿಕಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !