ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಕ್ರಾಂತಿಕಾರಿ ಮದುವೆಗೆ 50: ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಬಯಲು ಸೀಮೆಯಲ್ಲಿ ಸಂಚಲನವಾಗಿತ್ತು
Last Updated 9 ಜೂನ್ 2022, 20:33 IST
ಅಕ್ಷರ ಗಾತ್ರ

ಮೈಸೂರು: ಸಂಪ್ರದಾಯಗಳ ಕಟ್ಟುಪಾಡುಗಳನ್ನು ಮೀರಿ, ಮೂಢನಂಬಿಕೆ ಧಿಕ್ಕರಿಸಿ ಮತ್ತು ದಲಿತರೊಬ್ಬರ ಪೌರೋಹಿತ್ಯದಲ್ಲಿ ಸರಳವಾಗಿ ಮದುವೆಯಾದ ಇಲ್ಲಿನ ರಾಮಕೃಷ್ಣನಗರ ಕೆ. ಬ್ಲಾಕ್‌ನ ಈ ದಂಪತಿ, ವೈವಾಹಿಕ ಜೀವನದ 50ನೇ ವಸಂತದ ಸಂಭ್ರಮದಲ್ಲಿದ್ದಾರೆ.

ಐದು ದಶಕಗಳ ಹಿಂದೆ ಅವರಿಟ್ಟ ಆದರ್ಶದ ಹೆಜ್ಜೆಯ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಪ್ರಗತಿಪರರು, ಯುವಜನರು ‘ಆ’ ಮದುವೆಯ ಚಿತ್ರಗಳನ್ನು ಹಂಚಿಕೊಂಡು ಮೆಚ್ಚುಗೆಯ ಪೋಸ್ಟ್‌ಗಳನ್ನು ಹಾಕಿದ್ದಾರೆ. ಆ ದಂಪತಿಯೇ ಕೆಂಪಮ್ಮ–ಲೋಹಿಯಾವಾದಿಯೂ ಆಗಿರುವ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ. ಅನಗತ್ಯ ಆಚರಣೆಗಳಿಂದ ವಿಮೋಚನೆ ಬಯಸಿ ಆ ಕಾಲದಲ್ಲೇ ಹೊಸ ಪ್ರಯೋಗದಿಂದ ಗಮನ ಸೆಳೆದವರು. ಹಳೇಮೈಸೂರು ಭಾಗದಲ್ಲಿ ಸಂಚಲನವನ್ನೂ ಉಂಟು ಮಾಡಿದ್ದ ಆ ಮದುವೆ ದೊಡ್ಡ ಸುದ್ದಿಯೂ ಆಗಿತ್ತು. ಬಯಲು ಸೀಮೆಯಲ್ಲಿ ಅವರು ಹಚ್ಚಿದ್ದ ವೈಚಾರಿತೆಯ ಹಣತೆ ಸಾವಿರಾರು ಯುವಕ–ಯುವತಿಯರಿಗೆ ದಾರಿದೀಪವಾಯಿತು.

ಈ ದಂಪತಿಯು ತಮ್ಮಿಬ್ಬರು ಪುತ್ರರು ಮತ್ತು ಪುತ್ರಿಯ ಮದುವೆಯನ್ನೂ ಸರಳ ಮತ್ತು ಜಾತಿಯ ಸಂಕೋಲೆಯಿಂದ ಹೊರತಂದು ನೆರವೇರಿಸಿದ್ದಾರೆ. ಆ ಮದುವೆಗಳೆಲ್ಲವನ್ನೂ ಮನೆಯಲ್ಲೇ ಮಾಡಿರುವುದು ವಿಶೇಷ.

ಲೋಹಿಯಾ ಚಿಂತನೆ ಪರಿಣಾಮ:‘15ನೇ ವಯಸ್ಸಿಗಾಗಲೇ ವಚನಕಾರರು, ಗಾಂಧಿ, ಅಂಬೇಡ್ಕರ್, ಕುವೆಂಪು, ಬುದ್ಧ ಮುಂತಾದವರು ಮನಸ್ಸನ್ನು ತುಂಬಿಕೊಂಡಿದ್ದರು. ಪ್ರೀತಿ, ಸ್ವಾತಂತ್ರ್ಯ ಮತ್ತು ಸಮಾನತೆಯ ಬಗೆಗಿನ ಕನಸುಗಳು ಆವರಿಸಿಕೊಳ್ಳತೊಡಗಿದ್ದವು. ಇದಾದ ಒಂದೆರಡು ವರ್ಷಗಳಲ್ಲಿ ಇದಕ್ಕೆಲ್ಲ ಪೂರಕವಾಗಿ ರಾಮಮನೋಹರ ಲೋಹಿಯಾ ಅವರ ಚಿಂತನೆ ಮತ್ತು ಕಾರ್ಯಶೀಲತೆಯು ಇನ್ನಿಲ್ಲದಂತೆ ಮನಸ್ಸನ್ನು ಗೆದ್ದುಕೊಂಡಿತು. ಇದೆಲ್ಲದರ ಪರಿಣಾಮ ಹಳ್ಳಿಗಾಡಿನಲ್ಲಿ ಕೈಲಾದ ಮಟ್ಟಿಗೆ ಆರೋಗ್ಯಕರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂಬ ಅದಮ್ಯ ಉತ್ಸಾಹದಲ್ಲಿದ್ದ ಕಾರಣದಿಂದಲೇ ಸರಳ ವಿವಾಹವಾದೆವು; ಮೌಢ್ಯಗಳನ್ನು ನೂಕಿದೆವು’ ಎಂದು ಕಾಳೇಗೌಡ ನೆನೆದರು.

‘ಮೌಢ್ಯ, ಆಡಂಬರದ ಮದುವೆಗೆ ಸಾಲ ಮಾಡುವುದು ಮೊದಲಾದ ಭಾರತೀಯ ಸುಡು ವಾಸ್ತವಗಳು ಗೊತ್ತಾಗಿತ್ತು. ಉಪನ್ಯಾಸಕನಾಗಿದ್ದ ನನಗೆ, ನಗರದ ಬದಲಿಗೆ ಹಳ್ಳಿಯಲ್ಲೇ ಕ್ರಾಂತಿ ಮಾಡಬೇಕು ಎನ್ನುವ ಹಂಬಲವಿತ್ತು. ಪೌರೋಹಿತ್ಯ ವಹಿಸಿಕೊಳ್ಳಲು ಒಪ್ಪಿದ್ದ ದಲಿತ ಅಧ್ಯಾಪಕ ಮಿತ್ರ ಸಿಂಗ್ರಯ್ಯ ಅವರನ್ನು ನನ್ನ ಗೈರುಹಾಜರಿಯಲ್ಲಿ ಕೆಲವರು ಹೆದರಿಸಿದ್ದರು. ನನ್ನನ್ನೂ ನಿಂದಿಸಿದ್ದರು. ಇದರಿಂದ ಅವರು ಹಿಂದೆ ಸರಿದರು. ಆಗ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಕೆ.ಎಚ್. ರಂಗನಾಥ್ ಅವರೇ ಪೌರೋಹಿತ್ಯ ವಹಿಸಿದರು. ಚನ್ನಪಟ್ಟಣ ತಾಲ್ಲೂಕಿನ ನಮ್ಮೂರು ನಾಗವಾರದಲ್ಲಿ ನಡೆದ ‘ಮೂಢಸಂಪ್ರದಾಯ ವಿರೋಧಿ ಸಮ್ಮೇಳನ’ದಲ್ಲಿ ಮದುವೆಯಾದೆವು. ಐದು ಸಾವಿರಕ್ಕೂ ಹೆಚ್ಚಿನವರು ಸಾಕ್ಷಿಯಾಗಿ ಅಭಿನಂದಿಸಿದರು. ಯಾವ ಮುಹೂರ್ತವನ್ನೂ ನೋಡಲಿಲ್ಲ’ ಎಂದು ಆ ದಿನಗಳನ್ನು ಮೆಲುಕು ಹಾಕಿದರು.

ವೃದ್ಧೆ ಹರಸಿದ್ದು ಮರೆಯಲಾರೆ:‘ದುಂದು ವೆಚ್ಚಕ್ಕೆ ಬದಲಾಗಿ ಜನೋಪಯೋಗಿ ಕಾರ್ಯಕ್ಕೆ ಹಣ ಕೊಡಬೇಕೆಂಬ ಧ್ಯೇಯ ಅನುರಸಿರಿಸಿ ನಾನು ನಾಗವಾರದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ₹ 500 ನೀಡಿದೆವು. ಮದುವೆ ನಂತರ ದೇವಸ್ಥಾನಕ್ಕೆ ಹೋಗಲಿಲ್ಲ. ಊರಲ್ಲೇ ಇದ್ದರೂ ತಂದೆ ಮದುವೆಗೆ ಬರಲಿಲ್ಲ. ಅಂದು ಭೇಟಿಯಾದ ವೃದ್ಧೆಯೊಬ್ಬರು, ‘ನಿನ್ನಂಥವರಿದ್ದರೆ ಹೆಣ್ಣು ಹೆತ್ತವರು ಬದುಕಿಕೊಳ್ಳುತ್ತಾರಪ್ಪಾ’ ಎಂದು ಹರಿಸಿದ್ದನ್ನು ಮರೆಯಲಾಗದು’ ಎಂದು ಭಾವುಕರಾದರು.

‘ಬಳಿಕ, ಸರಳ ಮದುವೆ ಚಳವಳಿ ತೀವ್ರಗೊಂಡಿತು. ನಮ್ಮ ತಾಲ್ಲೂಕಿನಲ್ಲೇ ಸಾವಿರಾರು ಮಂದಿ ಅನುಸರಿಸಿದರು. ಅದನ್ನು ನಂಜುಂಡಸ್ವಾಮಿ ಅವರು ರೈತ ಚಳವಳಿಯ ಭಾಗವಾಗಿಸಿದರು. ಅದ್ಧೂರಿ ಮದುವೆಗಳ ಬದಲಿಗೆ ಆ ಹಣವನ್ನು ಬಡವರಿಗೆ ಶಿಕ್ಷಣ, ಆರೋಗ್ಯ, ಆಶ್ರಯ ಕಲ್ಪಿಸಲು ವಿನಿಯೋಗಿಸುವ ಅಗತ್ಯ ಇಂದಿಗೂ ಇದೆ’ ಎನ್ನುತ್ತಾರೆ ಅವರು.

ಐವತ್ತರ ನೆನಪಿನ ಕಾರ್ಯಕ್ರಮ ನಾಳೆ
ಕೆಂಪಮ್ಮ ಅಬ್ಬೂರು–ಕಾಳೇಗೌಡ ನಾಗವಾರ ಸರಳ ಮದುವೆ ಐವರತ್ತ ನೆನಪಿನ ಅಂಗವಾಗಿ ಜೂನ್‌ 11ರಂದು ಬೆಳಿಗ್ಗೆ 10.30ಕ್ಕೆ ರಾಮನಗರದ ಜಾನಪದ ಲೋಕದಲ್ಲಿ ‘ಸರಳ ಮದುವೆಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವ’ ಒಂದು ಅವಲೋಕನ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಗ್ರಹಾರ ಕೃಷ್ಣಮೂರ್ತಿ, ಮಂಗಲಾ ಅಪ್ಪಾಜಿಕೊಪ್ಪ, ಗೀತಾ ಸ್ವಾಮಿ ಆನಂದ್, ರಾಜೇಂದ್ರಪ್ರಸಾದ್, ಎಚ್‌.ಎಸ್. ರೇಣುಕಾರಾಧ್ಯ, ಕೇಶವರೆಡ್ಡಿ ಹಂದ್ರಾಳ, ಜಗದೀಶ್ ಕೊಪ್ಪ, ಮಂಜುನಾಥ ಅದ್ದೆ, ಸಾದಿಕ್ ಪಾಶಾ, ವಿವೇಕ್ ಕಾರಿಯಪ್ಪ–ಜೂಲಿ ಕಾರಿಯಪ್ಪ, ಚುಕ್ಕಿ ನಂಜುಂಡಸ್ವಾಮಿ– ಲೂಕಾ ಮೊಂತನಾರಿ ಭಾಗವಹಿಸಲಿದ್ದಾರೆ.

ಮಾದರಿ ಹೆಜ್ಜೆ ಇಡಲು
ನನ್ನ ವಿಚಾರ, ತತ್ವಗಳಿಗೆ ಪೂರಕವಾಗಿ ನಡೆಯುವ ಪತ್ನಿ ಸಿಕ್ಕಿದ್ದರಿಂದಾಗಿ ಮಕ್ಕಳ ಮದುವೆ ವಿಷಯದಲ್ಲೂ ನಾವು ಮಾದರಿ ಹೆಜ್ಜೆಗಳನ್ನಿಡಲು ಸಾಧ್ಯವಾಯಿತು.
–ಪ್ರೊ.ಕಾಳೇಗೌಡ ನಾಗವಾರ

*
ಮದುವೆಯಾದ ಮೇಲೆ ಕಾಳೇಗೌಡರ ವಿಚಾರಗಳಿಗೆ ತಕ್ಕಂತೆ ನಡೆದೆ. ಅವರ ಪ್ರೋತ್ಸಾಹದಂತೆ ಓದುವ ಹವ್ಯಾಸ ಜಾಸ್ತಿಯಾದಂತೆ ಜಾಗೃತಿ ಹೆಚ್ಚಾಯಿತು.
–ಕೆಂಪಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT