ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ದಿನಗಳಲ್ಲಿ ಶೇ 51ರಷ್ಟು ಬಿತ್ತನೆ

ಮಳೆಯಿಂದ ಮುಂಗಾರು ಪೂರ್ವ ಬೆಳೆಗಳಿಗೂ ಅನುಕೂಲ
Last Updated 20 ಜೂನ್ 2022, 8:40 IST
ಅಕ್ಷರ ಗಾತ್ರ

ಮೈಸೂರು: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಈವರೆಗೆ ಶೇ 51ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಗ್ರಾಮೀಣ ಭಾಗದಲ್ಲಿ ಆಗಾಗ ಬೀಳುತ್ತಿರುವ ಮಳೆಯು ಕೃಷಿ ಚಟುವಟಿಕೆಗಳಿಗೆ ವರವಾಗಿ ಪರಿಣಮಿಸಿದೆ. ರೈತರು ಭೂಮಿ ಹದಗೊಳಿಸುವುದು, ಬಿತ್ತನೆ ಹಾಗೂ ಬಿತ್ತನೋತ್ತರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಮುಂಗಾರು ಪೂರ್ವದ ಬೆಳೆಗಳಿಗೂ ಅನುಕೂಲವಾಗಿದೆ.

ಈ ಹಂಗಾಮಿನಲ್ಲಿ ಮಳೆಆಶ್ರಿತ ಮತ್ತು ನೀರಾವರಿ ಸೇರಿದಂತೆ 3.95 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಈ ಪೈಕಿ ಜೂನ್‌ 16ರ ವೇಳೆಗೆ 2.02 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಎಚ್‌.ಡಿ. ಕೋಟೆ, ಹುಣಸೂರು, ಕೆ.ಆರ್. ನಗರ, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ ಹಾಗೂ ತಿ.ನರಸೀಪುರ ತಾಲ್ಲೂಕುಗಳ ಬಹುತೇಕ ಕಡೆಗಳಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ.

ಈ ಬಾರಿ ಮಳೆಆಶ್ರಿತ 2.81 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇದೆ. ನೀರಾವರಿಯಲ್ಲಿ 1.41 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಬಹುದು ಎಂಬ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ.

ಅಲಸಂದೆ ಗುರಿ ಮೀರಿ ಬಿತ್ತನೆ:

ಈವರೆಗೆ, ಹೈಬ್ರೀಡ್ ಜೋಳ, ಸ್ಥಳೀಯ ಜೋಳ, ರಾಗಿ, ಮುಸುಕಿನಜೋಳ, ನವಣೆ, ಚಿಯಾ, ತೊಗರಿ, ಅಲಸಂದೆ, ಉದ್ದು, ಹೆಸರು, ಅವರೆ, ನೆಲಗಡಲೆ, ಎಳ್ಳು, ಹತ್ತಿ, ಹೊಗೆಸೊಪ್ಪು, ಕಬ್ಬು (ಹೊಸದಾಗಿ ನಾಟಿ), ಇತರೆ ಬೆಳೆಗಳನ್ನು ಹಾಕಲಾಗಿದೆ. ಭತ್ತ ನಾಟಿ ಮಾಡುವ ಕಾರ್ಯ ಇನ್ನೂ ಆರಂಭವಾಗಿಲ್ಲ. ಹಂಗಾಮಿನಲ್ಲಿ ಅತಿ ಹೆಚ್ಚು ಬಿತ್ತನೆಯ ಗುರಿ ಹೊಂದಿರುವುವ ಬೆಳೆ (1,02,650 ಹೆಕ್ಟೇರ್) ಇದು.

ಕಬ್ಬು, ಹೊಗೆಸೊಪ್ಪು ಮೊದಲಾದವುಗಳಿಗೆ ಪರ್ಯಾಯವಾಗಿ ಬೆಳೆಯಲಾಗುತ್ತಿರುವ ‘ಚಿಯಾ’ ಬೆಳೆಯನ್ನು 53 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಿದ್ದು, ಶೇ 100ರಷ್ಟು ಬಿತ್ತನೆಯಾಗಿದೆ. 25,950 ಹೆಕ್ಟೇರ್‌ನಲ್ಲಿ ಅಲಸಂದೆ ಬಿತ್ತನೆ ಗುರಿ ಹೊಂದಲಾಗಿತ್ತು. 26,807 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು ಗುರಿ ಮೀರಿ ಅಂದರೆ ಶೇ 103ರಷ್ಟು ಸಾಧನೆಯಾಗಿದೆ. ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ 70ರಷ್ಟು ಮತ್ತು ತಿ.ನರಸೀಪುರ ತಾಲ್ಲೂಕಿನಲ್ಲಿ ಅತಿ ಕಡಿಮೆ ಎಂದರೆ ಶೇ 15ರಷ್ಟು ಬಿತ್ತನೆಯಾಗಿದೆ.

ಶೇ 98ರಷ್ಟಾದ ಹೊಗೆಸುಪ್ಪು:

46,780 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆ ಗುರಿ ಇದ್ದರೆ, 48,287 ಹೆಕ್ಟೇರ್‌ ಬಿತ್ತನೆಯಾಗಿದ್ದು ಶೇ 103ರಷ್ಟು ಸಾಧನೆಯಾಗಿದೆ. 63,700 ಹೆಕ್ಟೇರ್‌ನಲ್ಲಿ ಹೊಗೆಸೊಪ್ಪು ಬೆಳೆಯುವ ಗುರಿ ಹೊಂದಲಾಗಿದ್ದು, ಶೇ 98ರಷ್ಟು ಅಂದರೆ 62,319 ಹೆಕ್ಟೇರ್ ಬಿತ್ತನೆಯಾಗಿದೆ. ರಾಗಿ ಬಿತ್ತನೆಯು ಈವರೆಗೆ ಶೇ 2ರಷ್ಟು ಮಾತ್ರವೇ ಆಗಿದೆ. ಈ ಹಂಗಾಮಿನಲ್ಲಿ 40,540 ಹೆಕ್ಟೇರ್‌ ಬಿತ್ತನೆಯ ಗುರಿ ಇದೆ.

‘ಜಿಲ್ಲೆಯ ಅಲ್ಲಲ್ಲಿ ಆಗಾಗ ಮಳೆ ಆಗುತ್ತಿರುವುದರಿಂದ ಕೃಷಿಗೆ ಅನುಕೂಲವಾಗಿದೆ. ಪೂರ್ವ ಮುಂಗಾರಿನಲ್ಲಿ ಬಿತ್ತಿದ್ದ ಎಣ್ಣೆಕಾಳು ಬೆಳೆಗಳು ಕಾಳು ಕಟ್ಟುವ ಹಂತದಲ್ಲಿವೆ. ಈವರೆಗೆ, ಮಳೆಯಿಂದ ಬೆಳೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಈ ಬಾರಿ ಆಶಾದಾಯಕ ಮುಂಗಾರು ಹಾಗೂ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಜೂನ್‌ನಲ್ಲಿ ವಾಡಿಕೆಯಂತೆ 94.7 ಮಿ.ಮೀ. ಮಳೆಯಾಗಬೇಕು. ಜೂನ್‌ 16ರವರೆಗೆ ವಾಡಿಕೆಯಂತೆ 49.4 ಮಿ.ಮೀ. ಇದ್ದು, ವಾಸ್ತವವಾಗಿ 46.4 ಮಿ.ಮೀ. ಮಳೆ ಬಿದ್ದಿದೆ. ಶೇ 6ರಷ್ಟು ಮಾತ್ರವೇ ಕೊರತೆ ಕಂಡುಬಂದಿದೆ. ಇದರಿಂದ ಕೃಷಿಗೆ ತೊಂದರೆಯೇನಾಗಿಲ್ಲ. 2021ರಲ್ಲಿ ಇದೇ ಅವಧಿಯಲ್ಲಿ, 45.5 ಮಿ.ಮೀ. ಮಳೆಯಾಗಿತ್ತು’ ಎನ್ನುತ್ತಾರೆ ಅಧಿಕಾರಿಗಳು.

ತೊಂದರೆ ಆಗದಂತೆ ಕ್ರಮ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ.

–ಡಾ.ಚಂದ್ರಶೇಖರ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT