ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು ತಾಲ್ಲೂಕಿನಲ್ಲಿ 55 ಸಾವಿರ ಪೋಡಿ ಡಿಜಿಟಲೀಕರಣ: ಎಚ್‌.ಪಿ.ಮಂಜುನಾಥ್‌

Last Updated 1 ಸೆಪ್ಟೆಂಬರ್ 2021, 7:11 IST
ಅಕ್ಷರ ಗಾತ್ರ

ಹುಣಸೂರು: ನಗರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಹಿಸ್ಸಾ (ಪೋಡಿ) ಡಿಜಿಟಲೀಕರಣ ದಾಖಲಾತಿ ಯೋಜನೆಗೆ ಚಾಲನೆ ಶಾಸಕ ಎಚ್‌.ಪಿ.ಮಂಜುನಾಥ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಸರ್ಕಾರವು ಮೊದಲ ಹಂತದಲ್ಲಿ ರಾಜ್ಯದ 48 ತಾಲ್ಲೂಕಿನಲ್ಲಿ ಹಿಸ್ಸಾ ಡಿಜಿಟಲೀಕರಣಕ್ಕೆ ಮುಂದಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಹುಣಸೂರು ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳ ಲಾಗಿದೆ. ಇದರಿಂದ ಭೂ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪಡೆಯಲು ಸಹಕಾರಿಯಾಗಲಿದೆ’ ಎಂದರು.

‘ಭೂಮಿಗಳ ‘ಹಿಸ್ಸಾ’ವನ್ನು ಡಿಜಿಟಲೀಕರಣ ಮಾಡುವುದರಿಂದ ರೈತರಿಗೆ ತನ್ನ ಭೂಮಿ ವಿಸ್ತೀರ್ಣ ಮತ್ತು ಯಾವ ಸರ್ವೆ ನಂಬರ್‌ನಲ್ಲಿ ಯಾವ ಹಿಸ್ಸಾದಲ್ಲಿ ಇದೆ ಎಂಬ ನಿಖರ ಮಾಹಿತಿ ತಿಳಿಯಲಿದೆ’ ಎಂದು ಹೇಳಿದರು.

ಸರ್ವೆ ವಿಭಾಗದ ಎ.ಡಿ.ಎಲ್.ಆರ್. ಮಮತಾ ಮಾತನಾಡಿ, ‘ಹಿಸ್ಸಾ ಡಿಜಿಟಲೀಕರಣದಿಂದ ಬೆಳೆ ಸಮೀಕ್ಷೆಯನ್ನು ನಿಖರವಾಗಿ ನಡೆಸಲು ಸಾಧ್ಯವಾಗಲಿದೆ. ರೈತರು ತಮ್ಮ ಭೂಮಿ ನಿಖರ ಮಾಹಿತಿಯನ್ನು ಎಲ್ಲಿಂದಲಾದರೂ ಪಡೆಯಬಹುದು. ಕಂದಾಯ ಇಲಾಖೆಗೆ ಅರ್ಜಿ ನೀಡಿ ಭೂ ನಕಾಶೆ ಪಡೆಯುವ ಅಗತ್ಯವಿಲ್ಲ. ಕೃಷಿ ಭೂಮಿ ಮಾರಾಟ ಅಥವಾ ಖರೀದಿ ಸಮಯದಲ್ಲಿ ಹಿಸ್ಸಾ ತಪ್ಪಾಗಿ ನಮೂದಿಸಿ, ಸಮಸ್ಯೆಗೆ ಆಗುತ್ತಿತ್ತು’ ಎಂದರು.

‘ತಾಲ್ಲೂಕಿನ 211 ಗ್ರಾಮಗಳಲ್ಲಿ 55,019 ಹಿಸ್ಸಾಗಳಿದ್ದು, ಇದರ ಮೂಲ ದಾಖಲೆ ಪರಿಶೀಲಿಸಿ ಸ್ಕ್ಯಾನ್ ಮಾಡಿ, ಇಲಾಖೆ ವೆಬ್‌ಸೈಟ್‌ನಲ್ಲಿ ದಾಖಲಿಸಲಾಗುವುದು’ ಎಂದು ತಿಳಿಸಿದರು.

‘ಈ ಯೋಜನೆಗೆ ಮೂವರು ಸಿಬ್ಬಂದಿಯನ್ನು ನಿಯೋಜಿಸಿದ್ದು, ಪ್ರತಿ ದಿನ ತಲಾ 150 ಹಿಸ್ಸಾಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ತಾಲ್ಲೂಕಿನಲ್ಲಿ 15 ಸರ್ವೆ ಸಿಬ್ಬಂದಿ ಇದ್ದು, ಇವರ ಸಹಾಯ ಪಡೆದು ತ್ವರಿತವಾಗಿ ಯೋಜನೆ ಪೂರ್ಣಗೊಳಿಸುವ ವಿಶ್ವಾಸವಿದೆ’ ಎಂದು ಹೇಳಿದರು.

ಉಪವಿಭಾಗಾಧಿಕಾರಿ ವರ್ಣೀತ್ ನೇಗಿ ಸಿಂಗ್, ತಹಶೀಲ್ದಾರ್ ಮೋಹನ್ ಕುಮಾರ್, ನಗರಸಭೆ ಪೌರಾಯುಕ್ತ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT