ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಈ ವರ್ಷ ಶೂನ್ಯ ಸಾಧನೆ ಒಂದೇ ಶಾಲೆ

ಎಸ್ಸೆಸ್ಸೆಲ್ಸಿ ಫಲಿತಾಂಶ: ಶತಕ ಬಾರಿಸಿದ 71 ಶಾಲೆಗಳು

ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯಲ್ಲಿ 2018–19ನೇ ಸಾಲಿನಲ್ಲಿ ಬರೋಬ್ಬರಿ 71 ಶಾಲೆಗಳು ಶೇ 100 ಫಲಿತಾಂಶ ಪಡೆದಿವೆ. ಕಳೆದ ಎರಡು ಶೈಕ್ಷಣಿಕ ಸಾಲುಗಳಿಗಿಂತ ಹೆಚ್ಚಿನ ಸಾಧನೆ ಈ ವರ್ಷ ದಾಖಲಾಗಿದೆ.

ಅದೂ ಅಲ್ಲದೇ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಸಾಧನೆ ಮಾಡಿರುವುದೂ ಈ ವರ್ಷದ ಸಾಧನೆಯೇ. ಪ್ರತಿ ವರ್ಷ ಏರಿಕೆ ಕ್ರಮದಲ್ಲಿ ಸರ್ಕಾರಿ ಶಾಲೆಗಳು ಸಾಧನೆಯತ್ತ ದಾಪುಗಾಲು ಇಡುತ್ತಿವೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದ ಪರಿಸ್ಥಿತಿ ಬದಲಾಗಿ ಗೌರವದಿಂದ ಕಾಣುವಂತೆ ಕಾರ್ಯಕ್ಷಮತೆ ತೋರಿವೆ.

2016–17ನೇ ಸಾಲಿನಲ್ಲಿ ಕೇವಲ 7 ಸರ್ಕಾರಿ ಶಾಲೆಗಳು ಮಾತ್ರ ಶೇ 100 ಫಲಿತಾಂಶ ಪಡೆದಿದ್ದವು. ಆಗ 16 ಖಾಸಗಿ ಶಾಲೆಗಳು ಈ ಸಾಧನೆ ಮಾಡಿದ್ದವು. ಇದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ತೀವ್ರ ಮುಖಭಂಗ ಅನುಭವಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ್ದ ಇಲಾಖೆ ಕಡಿಮೆ ಕಾರ್ಯಕ್ಷಮತೆ ತೋರುತ್ತಿರುವ ಶಾಲೆಗಳ ಪಟ್ಟಿಯನ್ನು ರೂಪಿಸಿ, ಶಾಲಾ ವಿದ್ಯಾರ್ಥಿಗಳಿಗೆ ಮಾದರಿ ಪಠ್ಯ ಪುಸ್ತಕ ವಿತರಿಸಿತ್ತು. ವಿಶೇಷ ತರಗತಿಗಳನ್ನು ತೆಗೆದುಕೊಂಡಿತ್ತು. ಸರ್ಕಾರಿ ಶಾಲೆ ಶಿಕ್ಷಕರಿಗೂ ತರಬೇತಿ ಕಾರ್ಯಾಗಾರಗಳನ್ನು ನಡೆಸಿತ್ತು. ಇದರ ಫಲವಾಗಿ 2017–18ನೇ ಸಾಲಿನಲ್ಲಿ ಶೇ 100ರ ಫಲಿತಾಂಶ ಪಡೆದ ಸರ್ಕಾರಿ ಶಾಲೆಗಳ ಸಂಖ್ಯೆ 20ಕ್ಕೆ ಏರಿತ್ತು.

ಈ ಉತ್ತೇಜನಾ ಕಾರ್ಯಕ್ರಮಗಳು ಮುಂದುವರೆದಿರುವ ಕಾರಣ 2018–19ನೇ ಸಾಲಿನಲ್ಲಿ ಮತ್ತೆ ಫಲಿತಾಂಶದಲ್ಲಿ ಏರಿಕೆ ಉಂಟಾಗಿದೆ. ಈ ವರ್ಷ 29 ಸರ್ಕಾರಿ ಶಾಲೆಗಳಲ್ಲಿ ಶೇ 100 ಫಲಿತಾಂಶ ಬಂದಿದೆ. ಅಲ್ಲದೇ, ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ನಡುವಿನ ಅಂತರವೂ ತೀರಾ ಹೆಚ್ಚಿಲ್ಲ. 34 ಖಾಸಗಿ ಶಾಲೆಗಳಲ್ಲಿ ಶೇ 100 ಫಲಿತಾಂಶ ಸಿಕ್ಕಿದೆ. ಅಂದರೆ, ಕೇವಲ 5 ಶಾಲೆಗಳು ಹೆಚ್ಚಿವೆ.

ಖಾಸಗಿ ಶಾಲೆಗಳ ಫಲಿತಾಂಶ ಇಳಿಕೆ: ಅಲ್ಲದೇ, ಖಾಸಗಿ ಶಾಲೆಗಳ ಫಲಿತಾಂಶ ಇಳಿಕೆಯಾಗಿರುವುದು ಹೊಸ ಬೆಳವಣಿಗೆ. ಪ್ರತಿ ವರ್ಷ ಏರಿಕೆ ಕ್ರಮದಲ್ಲಿದ್ದ ಫಲಿತಾಂಶ ಈ ವರ್ಷ ಇಳಿದಿದೆ. ಕಳೆದ ಸಾಲಿನಲ್ಲಿ ಒಟ್ಟು 39 ಸರ್ಕಾರಿ ಶಾಲೆಗಳು ಶೇ 100 ಫಲಿತಾಂಶ ಪಡೆದಿದ್ದವು. ಈ ವರ್ಷ ಇದು 34ಕ್ಕೆ ಇಳಿದಿದೆ. ಅಲ್ಲದೇ, ಶೂನ್ಯ ಸಾಧನೆ ಮಾಡಿರುವುದು ಖಾಸಗಿ ಶಾಲೆಯಾಗಿದೆ.

‘ಈಗ ನಾವು ಸರ್ಕಾರಿ ಶಾಲೆಗಳಲ್ಲಿ ಮಾಹಿತಿ ಸಂಪರ್ಕ ತಂತ್ರಜ್ಞಾನ (ಐಟಿಸಿ) ಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇವೆ. ಎಲ್ಲ ಶಾಲೆಗಳಲ್ಲೂ ಕಂಪ್ಯೂಟರ್‌, ಇಂಟರ್ನೆಟ್ ಇದೆ. ಮಕ್ಕಳು ಜ್ಞಾನ ಮೂಲಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಇದು ಫಲಿತಾಂಶದ ಮೇಲೆ ಪ್ರಭಾವ ಬೀರಿದೆ’ ಎಂದು ಡಿಡಿಪಿಐ ಪಾಂಡುರಂಗ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರಿ ಶಾಲೆ ವಿದ್ಯಾರ್ಥಿ ಜಿಲ್ಲೆಗೆ ದ್ವಿತೀಯ

ಸರ್ಕಾರಿ ಶಾಲೆಗಳಲ್ಲಿ ಶೇ 100 ಫಲಿತಾಂಶ ಪಡೆಯುವುದೇ ಗುರಿಯಾಗಿರಲಿಲ್ಲ. ಗುಣಮಟ್ಟದ ಫಲಿತಾಂಶ ಆದ್ಯತೆಯಾಗಿತ್ತು. ಸರ್ಕಾರಿ ಶಾಲೆ ವಿದ್ಯಾರ್ಥಿ ಜಿಲ್ಲೆಗೆ ದ್ವಿತೀಯ ರ‍್ಯಾಂಕ್ ಪಡೆದಿರುವುದೇ ಇದಕ್ಕೆ ಸಾಕ್ಷಿ.

ಎಚ್‌.ಡಿ.ಕೋಟೆ ತಾಲ್ಲೂಕಿನ ಆದರ್ಶ ವಿದ್ಯಾಲಯ (ಆರ್‌ಎಂಎಸ್‌ಎ) ವಿದ್ಯಾರ್ಥಿ ಎಂ.ಸುಪ್ರೀತ್ 621 ಅಂಕ (ಶೇ 99.36) ಪಡೆದಿದ್ದಾರೆ. ಕಲಿಕಾ ಮಾಧ್ಯಮ ಇಂಗ್ಲಿಷ್‌ ಆಗಿದ್ದರೂ, ಸರ್ಕಾರಿ ಶಾಲೆಯಲ್ಲೇ ಅಧ್ಯಯನ ನಡೆದಿದೆ. ಸರ್ಕಾರಿ ಶಿಕ್ಷಕರ ಶ್ರಮ ಇಲ್ಲಿ ಪ್ರತಿಫಲ ನೀಡಿದೆ.

‘ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು 35 ಅಂಕ ಪಡೆದು ಶೇ 100 ಫಲಿತಾಂಶ ಪಡೆಯುವುದು ಸಾಧನೆಯಲ್ಲ. ಉನ್ನತ ಶ್ರೇಣಿ, ಅತ್ಯುನ್ನತ ಶ್ರೇಣಿ ಫಲಿತಾಂಶ ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯಯೋಜನೆಯಿತ್ತು. 29 ಸರ್ಕಾರಿ ಶಾಲೆಗಳ ಪೈಕಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಗುಣಮಟ್ಟದ ಫಲಿತಾಂಶ ಪಡೆದಿದ್ದಾರೆ’ ಎಂದು ಬಿಇಒ ರಾಜಶೇಖರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು