ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಬಸ್‌ಗೆ ಕಲ್ಲೆಸೆತ: ಚಾಲಕನಿಗೆ ಪೆಟ್ಟು

ನಗರದಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ, ಸಂಚರಿಸದ ಬಸ್‌ಗಳು, ಪ್ರಯಾಣಿಕರ ಪರದಾಟ
Last Updated 12 ಡಿಸೆಂಬರ್ 2020, 6:22 IST
ಅಕ್ಷರ ಗಾತ್ರ

ಮೈಸೂರು: ‘ತಮ್ಮನ್ನು ಸರ್ಕಾರಿ ನೌಕರರು’ ಎಂದು ಪರಿಗಣಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ನೌಕರರು ಶುಕ್ರವಾರ ಆರಂಭಿಸಿದ ಹೋರಾಟ ಜಿಲ್ಲೆಯ ವಿವಿಧೆಡೆ ತೀವ್ರ ಸ್ವರೂಪ ಪಡೆಯಿತು.

ಸಾರಿಗೆ ನಿಗಮದ ನೌಕರರ ಪ್ರತಿಭಟನೆಯ ನಡುವೆಯೂ ಸಂಚರಿಸುತ್ತಿದ್ದ, ಕೆಎಸ್‌ಆರ್‌ಟಿಸಿಯ ಮೈಸೂರು ನಗರ/ಗ್ರಾಮೀಣ ವಿಭಾಗದ ಒಂಬತ್ತು ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಈ ಘಟನೆಯಲ್ಲಿ ಬಸ್ಸಿನ ಕಿಟಕಿ ಹಾಗೂ ಮುಂಭಾಗದ ಗಾಜುಗಳು ಪುಡಿ ಪುಡಿಯಾಗಿವೆ. ಚಾಲಕರೊಬ್ಬರಿಗೆ ಏಟಾಗಿದೆ ಎಂದು ಮೂಲಗಳು ತಿಳಿಸಿವೆ.

‘ಮೈಸೂರು ನಗರದ ರೂಟ್‌ ನಂಬರ್‌ 68ರ ಬಸ್ ಕನಕದಾಸ ನಗರಕ್ಕೆ ತೆರಳುತ್ತಿದ್ದಾಗ, ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಚಾಲಕನಿಗೆ ಏಟಾಗಿದೆ’ ಎಂದು ಮೈಸೂರು ನಗರ ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ ಮರಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹುಲ್ಲಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ನಗರ ಸಾರಿಗೆಯ ಎರಡು ಬಸ್‌ಗಳಿಗೆ ದುಷ್ಕರ್ಮಿಗಳು ತಳ್ಳೂರು ಕ್ರಾಸ್‌ ಬಳಿ ಕಲ್ಲು ತೂರಿದ್ದಾರೆ. ಮೈಸೂರು ನಗರದ ಉದಯಗಿರಿ ಬಡಾವಣೆಯಲ್ಲೂ ಬೆಳಿಗ್ಗೆಯೇ ಕಿಡಿಗೇಡಿಗಳು ಕಲ್ಲು ತೂರಿದರು. ಇದರಿಂದ ಕೆಲ ಹೊತ್ತು ಬಸ್‌ ಸಂಚಾರ ಸ್ಥಗಿತಗೊಳಿಸಬೇಕಾಯಿತು’ ಎಂದು ಅವರು ಹೇಳಿದರು.

‘ಉದಯಗಿರಿ ಬಡಾವಣೆಯಲ್ಲಿ ಬಸ್‌ಗೆ ಕಲ್ಲು ತೂರಿದ್ದರಿಂದ ಕರ್ತವ್ಯಕ್ಕೆ ಹಾಜರಾಗಿದ್ದ ಸಿಬ್ಬಂದಿ ಹೆದರಿದರು. ಇದರ ಪರಿಣಾಮ ಸಾತಗಳ್ಳಿ, ವಿಜಯನಗರ ಡಿಪೊದಿಂದ ನಿಗದಿಯಂತೆ ಕಾರ್ಯಾಚರಿಸ ಬೇಕಿದ್ದ ಬಸ್‌ಗಳು ಸಂಚರಿಸಲಿಲ್ಲ. ಕುವೆಂಪು ನಗರ, ಬನ್ನಿಮಂಟಪ ಡಿಪೊದಿಂದ ಎಂದಿನಂತೆ ಸಂಚರಿಸಿದವು’ ಎಂದು ಮರಿಗೌಡ ತಿಳಿಸಿದರು.

‘ಮೈಸೂರು ನಗರ ವಿಭಾಗದಿಂದ ಈಚೆಗೆ ನಿತ್ಯವೂ 300 ಬಸ್‌ ಸಂಚರಿಸುತ್ತಿದ್ದವು. ಶುಕ್ರವಾರ ನಿಗಮದ ನೌಕರರ ಪ್ರತಿಭಟನೆಯ ನಡುವೆಯೂ 250 ಬಸ್‌ ಸಂಚರಿಸಿವೆ’ ಎಂದು ಅವರು ಹೇಳಿದರು.

ಬೆಳಿಗ್ಗೆ 10ರಿಂದ ಬಂದ್: ‘ನಸುಕಿನಿಂದಲೇ ನಮ್ಮ ವಿಭಾಗದಿಂದ ಶೇ 30ರಷ್ಟು ಬಸ್‌ಗಳು ಸಂಚರಿಸುತ್ತಿದ್ದವು. ವಿವಿಧೆಡೆ ನೌಕರರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಬೆಳಿಗ್ಗೆ 10ರಿಂದ ಎಲ್ಲ ಬಸ್‌ಗಳ ಸಂಚಾರ ಏಕಾಏಕಿ ಸ್ಥಗಿತಗೊಂಡಿತು. ಸಿಬ್ಬಂದಿಯನ್ನು ಹುಡುಕಾಡಿದರೂ ಯಾರೊಬ್ಬರೂ ಸಿಗಲಿಲ್ಲ’ ಎಂದು ಮೈಸೂರು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್.ಶ್ರೀನಿವಾಸ್‌ ತಿಳಿಸಿದರು.

‘ನಂಜನಗೂಡು ನಗರದ ಹೊರ ವಲಯದಲ್ಲಿ ಸಂಚರಿಸುತ್ತಿದ್ದ ಬಸ್ ಒಂದರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಬೆಂಗಳೂರಿಗೆ ತೆರಳುತ್ತಿದ್ದ ವಿಭಾಗದ ನಾಲ್ಕು ಬಸ್‌ಗಳ ಮೇಲೆ ಮಂಡ್ಯ, ಮದ್ದೂರು, ರಾಮನಗರದಲ್ಲಿ ಕಲ್ಲು ಎಸೆದಿದ್ದಾರೆ. ಒಟ್ಟಾರೆ ವಿಭಾಗದ ಐದು ಬಸ್‌ಗಳಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT