ಭಾನುವಾರ, ಜೂನ್ 13, 2021
24 °C
ಐದು ದಶಕದಿಂದಲೂ ಮೈಸೂರಿನ ನಂಟು; ಪ್ರಾಮಾಣಿಕತೆಯ ಪ್ರತೀಕ ಕೆ.ಆರ್‌.ಪೇಟೆ ಕೃಷ್ಣ

ಕಳಚಿದ ನೈತಿಕ ರಾಜಕಾರಣದ ಕೊಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪ್ರಾಮಾಣಿಕತೆ–ನೈತಿಕತೆಯ ರಾಜಕಾರಣಕ್ಕೆ ಆದರ್ಶವಾಗಿದ್ದವರು ಕೆ.ಆರ್‌.ಪೇಟೆ ಕೃಷ್ಣ. ಸುಳ್ಳು ಹೇಳೋದನ್ನು ಸಹಿಸದ ಶಿಸ್ತಿನ ಸಿಪಾಯಿ. ಮಾತು ಕಠೋರವಾದರೂ, ಮಗುವಿನಂತಹ ಮುಗ್ಧ ಮನಸ್ಸು. ನಿಷ್ಕಲ್ಮಶ ಹೃದಯಿ. ನೇರ, ನಿಷ್ಠುರವಾಗಿ ಹೇಳುವ ಸ್ವಭಾವ.

‘ಬಡವರ ಮಕ್ಕಳು ನಾವು. ಈ ಹಂತಕ್ಕೆ ಬಂದಿದ್ದೆ ಹೆಚ್ಚು. ಸೋಲು–ಗೆಲುವು ಶಾಶ್ವತವಲ್ಲ. ಅಧಿಕಾರವೂ ಅಷ್ಟೇ. ಆದರೆ ಇಂದಿನ ರಾಜಕೀಯ ಎದುರಿಸೋ ಶಕ್ತಿ ನನ್ನಂತಹವರಲ್ಲಿ ಇಲ್ಲ.’

ಸೋಲಿಲ್ಲದ ಸರದಾರ ಎಂದೇ ಮಂಡ್ಯ ಜಿಲ್ಲೆಯಲ್ಲಿ ಮನೆ ಮಾತಾಗಿದ್ದ, ಜನ ನಾಯಕ ಜಿ.ಮಾದೇಗೌಡರನ್ನು 1996ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದ ಕೆ.ಆರ್‌.ಪೇಟೆ ಕೃಷ್ಣ ಅವರು ತಮ್ಮ ಆಪ್ತೇಷ್ಟರೊಂದಿಗೆ ಆಗಾಗ್ಗೆ ಹೇಳುತ್ತಿದ್ದ ಮಾತುಗಳಿವು.

ಮೂರು ಅವಧಿ ಕೆ.ಆರ್‌.ಪೇಟೆಯ ಶಾಸಕರಾಗಿದ್ದರು. ಎಸ್‌.ಆರ್‌.ಬೊಮ್ಮಾಯಿ ಸಚಿವ ಸಂಪುಟದಲ್ಲಿ ಪಶುಸಂಗೋಪನೆ, ರೇಷ್ಮೆ ಸಚಿವರಾಗಿದ್ದರು. 2004ರಲ್ಲಿ ಧರ್ಮಸಿಂಗ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದರು. ಹಲವು ಅತ್ಯುನ್ನತ ಹುದ್ದೆ ನಿಭಾಯಿಸಿದರೂ ಎಂದಿಗೂ ಗರ್ವಿಯಾಗಿರಲಿಲ್ಲ. ಅಧಿಕಾರದ ಅಹಂಕಾರವನ್ನು ಎಂದಿಗೂ ಪ್ರದರ್ಶಿಸಲಿಲ್ಲ. ಅಧಿಕಾರವಿದ್ದಾಗಲೂ, ಇಲ್ಲದಿದ್ದಾಗಲೂ ಅಷ್ಟೇ. ಅದೇ ಸರಳತೆ, ಅದೇ ನಿಷ್ಠುರತೆ. ಹೇಳಬೇಕಾದದ್ದನ್ನು ನೇರವಾಗಿಯೇ ಹೇಳುತ್ತಿದ್ದರು.

2008ರ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ, 2013ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರೂ ಸಕ್ರಿಯ ರಾಜಕಾರಣದಿಂದ ದೂರ ಉಳಿದರು. ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿ.ಎಸ್‌.ಯಡಿಯೂರಪ್ಪ, ಸಿದ್ದರಾಮಯ್ಯ ಆಹ್ವಾನವಿತ್ತರೂ, ಒಪ್ಪಿಕೊಳ್ಳದೆ ರಾಜಕಾರಣದಿಂದಲೇ ದೂರ ಉಳಿದವರು.

ಜನರಿಗೆ ಒಳ್ಳೆಯದನ್ನು ಮಾಡಬೇಕು. ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಕೊನೆಯ ದಿನಗಳಲ್ಲೂ ತುಡಿತ ಹೊಂದಿದ್ದರು. ಸುಳ್ಳು ಹೇಳೋದನ್ನು ಸಹಿಸುತ್ತಿರಲಿಲ್ಲ. ಮೇರು ವ್ಯಕ್ತಿತ್ವದ ವ್ಯಕ್ತಿಯ ಗುಣಗಾನಕ್ಕೆ ಪದಗಳಿಲ್ಲ.

ಮೈಸೂರೆಂದರೇ ಬಲು ಪ್ರೀತಿ

ಕೆ.ಆರ್‌.ಪೇಟೆ ಕೃಷ್ಣ ಎಂದೇ ಹೆಸರು ಹೊಂದಿದ್ದರೂ, ಕೃಷ್ಣ ಅವರಿಗೆ ಮೈಸೂರು ಎಂದರೆ ಬಲು ಪ್ರೀತಿ. ಮಹಾರಾಜರ ಅಭಿವೃದ್ಧಿ ಕೆಲಸಗಳೇ ಅವರಿಗೆ ಮಾದರಿ.

ಮಂಡ್ಯವೂ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳು ಮೈಸೂರು ಮಾದರಿಯಲ್ಲಿ ಅಭಿವೃದ್ಧಿಗೊಳ್ಳಬೇಕು ಎಂಬ ಕನಸು ಕಂಡಿದ್ದರು.

ಐದು ದಶಕದಿಂದಲೂ ಮೈಸೂರಿನ ಒಡನಾಟ–ನಂಟು ಹೊಂದಿದ್ದರು. ಬೆಂಗಳೂರು ಕಾರ್ಪೊರೇಷನ್‌ನ ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲೇ ಕಾನೂನು ಪದವಿ ಪಡೆದ ಕೃಷ್ಣ ಅವರು, ಮೈಸೂರಿನ ಅಂದಿನ ಖ್ಯಾತ ವಕೀಲ ಚಿಕ್ಕಬೋರಯ್ಯ ಅವರ ಸಹಾಯಕರಾಗಿ ವಕೀಲ ವೃತ್ತಿ ಆರಂಭಿಸಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಡಾ ಮಾಜಿ ಅಧ್ಯಕ್ಷ ದಾಸೇಗೌಡರು ಇವರ ಸಹೋದ್ಯೋಗಿಗಳಾಗಿದ್ದರು.

ಇಂದಿರಮ್ಮ(ಮಹಾರಾಜ ಕಾಲೇಜಿನ ಪ್ರೊಫೆಸರ್‌) ಅವರನ್ನು ವಿವಾಹವಾದ ಬಳಿಕ ಮೈಸೂರಿನಲ್ಲೇ ನೆಲೆಸಿದರು. ಮೈಸೂರಿನಲ್ಲಿ ವಕೀಲ ವೃತ್ತಿ ಮಾಡಿದರೆ, ಕೆ.ಆರ್‌.ಪೇಟೆ, ಶ್ರೀರಂಗಪಟ್ಟಣದಲ್ಲಿ ವಕೀಲ ವೃತ್ತಿಯ ಜೊತೆಗೆ, ರಾಜಕಾರಣವನ್ನು ಆರಂಭಿಸಿ, ಯಶಸ್ಸು ಕಂಡರು.

ಸರಸ್ವತಿಪುರಂನ ಈಜುಕೊಳದ ಬಳಿಯ ಚಿಕ್ಕ ಬಾಡಿಗೆ ಮನೆಯೊಂದರಲ್ಲಿ ಪತ್ನಿಯೊಟ್ಟಿಗಿದ್ದರು. ಇಂದಿರಮ್ಮ ಅವರು ಮುಡಾದಿಂದ ಕುವೆಂಪುನಗರದ ಅನಿಕೇತನ ರಸ್ತೆಯಲ್ಲಿ ನಿವೇಶನ ಪಡೆದು, ಸಾಲ ಮಾಡಿಕೊಂಡು ಮನೆ ಕಟ್ಟಿಸಿದರು. ಆಗಿನಿಂದಲೂ ಇದೇ ಮನೆಯಲ್ಲಿ ಕೃಷ್ಣ ವಾಸವಿದ್ದರು.

ಸರಳತೆಯ ಪ್ರತೀಕವಾಗಿದ್ದ ಕೃಷ್ಣ ಮೈಸೂರಿನಲ್ಲಿ ಯಾವುದಾದರೂ ಸಭೆ–ಸಮಾರಂಭ, ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ ಒಪ್ಪಿಕೊಂಡಿದ್ದರೆ ನಿಗದಿತ ಸಮಯಕ್ಕಿಂತ 5–10 ನಿಮಿಷವೇ ಮುಂಚೆ ಹಾಜರಿರುತ್ತಿದ್ದರು. ಆಯೋಜಕರೇ ಇನ್ನೂ ಬಂದಿರಲ್ಲ ಎಂದರೆ, ಸಮಯಕ್ಕೆ ಸರಿಯಾಗಿ ಹಾಜರಾಗುವುದು ನಮ್ಮ ಕರ್ತವ್ಯ ಎನ್ನುತ್ತಿದ್ದರು. ಓಡಾಟಕ್ಕೆ ಮಗಳ ಕಾರು ಬಳಸುತ್ತಿದ್ದರು. ಇಲ್ಲದಿದ್ದರೆ ಆಟೊ, ಪರಿಚಯಸ್ತರ ಬೈಕ್‌ನಲ್ಲಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು.

ಸಂತೇಬಾಚಹಳ್ಳಿ ನಾಗರಾಜ್‌ (22 ವರ್ಷದಿಂದ ಕೆ.ಆರ್‌.ಪೇಟೆ ಕೃಷ್ಣ ಅವರ ಆಪ್ತ)

ನಿರೂಪಣೆ: ಡಿ.ಬಿ.ನಾಗರಾಜ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು