ಶುಕ್ರವಾರ, ಸೆಪ್ಟೆಂಬರ್ 24, 2021
27 °C
‘ಸೈಕಲ್‌ ಫಾರ್‌ ಚೇಂಜ್‌’ ಯೋಜನೆ ಜಾರಿಗೆ ಪಾಲಿಕೆ ಸಿದ್ಧತೆ

ಪ್ರತ್ಯೇಕ ಸೈಕಲ್‌ ಪಥ; ಸವಾರಿ ಸಲೀಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪರಿಸರ ಸ್ನೇಹಿ ಸಂಚಾರಕ್ಕೆ ಒತ್ತು ನೀಡಲು ಪಾಲಿಕೆಯು ನಗರದಲ್ಲಿ ‘ಸೈಕಲ್‌ ಫಾರ್‌ ಚೇಂಜ್‌’ ಯೋಜನೆಯಡಿ ಸೈಕಲ್‌ ಪಥ ನಿರ್ಮಿಸಲು ಮುಂದಾಗಿದೆ.

ನಗರ ಭೂಸಾರಿಗೆ ನಿರ್ದೇಶನಾಲಯವು ದೇಶದ ಆಯ್ದ ನಗರಗಳಲ್ಲಿ ‘ಸೈಕಲ್‌ ಫಾರ್‌ ಚೇಂಜ್‌’ ಯೋಜನೆಯನ್ನು ಜಾರಿಗೊಳಿಸಿದ್ದು, ಅದನ್ನು ಮೈಸೂರಿನಲ್ಲೂ ಅನುಷ್ಠಾನಕ್ಕೆ ತರುವುದು ಪಾಲಿಕೆಯ ಗುರಿ.

ಕಾಂತರಾಜ ಅರಸು ರಸ್ತೆ, ಕೃಷ್ಣರಾಜ ಬುಲೇವಾರ್ಡ್ ರಸ್ತೆ, ಜೆಎಲ್‌ಬಿ ರಸ್ತೆ, ರಾಧಾಕೃಷ್ಣನ್‌ ಅವೆನ್ಯೂ ಮತ್ತು ಚಾಮರಾಜ ಜೋಡಿ ರಸ್ತೆಗಳನ್ನು ಸೈಕಲ್‌ ಪಥ ಮಾಡಲು ಗುರುತಿಸಲಾಗಿದೆ. ಮೈಸೂರು ವಿಶ್ವವಿದ್ಯಾಲಯ, ಮಹಾರಾಜ ಕಾಲೇಜು, ಜಿಲ್ಲಾ ನ್ಯಾಯಾಲಯ, ಮುಡಾ ಕಚೇರಿ ಮತ್ತುಸಂಗೀತ ವಿಶ್ವವಿದ್ಯಾಲಯದ ಬಳಿ ಸೈಕಲ್‌ ಪಥಗಳು ನಿರ್ಮಾಣವಾಗಲಿವೆ. 

ದೇಶದ ಮೊದಲ ಸಾರ್ವಜನಿಕ ಬೈಸಿಕಲ್‌ ಹಂಚಿಕೆ (ಪಿಬಿಎಸ್‌) ಯೋಜನೆ ‘ಟ್ರಿಣ್‌ ಟ್ರಿಣ್‌’ ಮೈಸೂರಿನಲ್ಲಿ 2017 ರಲ್ಲೇ ಆರಂಭವಾಗಿತ್ತು. ಆದರೂ ನಗರದಲ್ಲಿ ಸೈಕಲ್‌ ಸವಾರಿಗೆ ಪ್ರತ್ಯೇಕ ಪಥ ನಿರ್ಮಾಣವಾಗಿಲ್ಲ. ನರಸಿಂಹರಾಜ ಬುಲೇವಾರ್ಡ್‌ ರಸ್ತೆಯಲ್ಲಿ (ಎಟಿಐ ಮುಂಭಾಗ) ದಶಕದ ಹಿಂದೆ ಸೈಕಲ್ ಪಥ ನಿರ್ಮಾಣವಾಗಿದ್ದು ಬಿಟ್ಟರೆ‌, ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ.

‘ಟ್ರಿಣ್‌ ಟ್ರಿಣ್‌’ ಯೋಜನೆ ಆರಂಭವಾದಾಗ ಕೆಲವು ರಸ್ತೆಗಳಲ್ಲಿ ಸೈಕಲ್‌ ಪಥ ನಿರ್ಮಿಸುವ ಬಗ್ಗೆ ಚರ್ಚೆ ನಡೆದಿತ್ತಾದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ರಸ್ತೆಯ ಒಂದು ಬದಿಯಲ್ಲಿ 1.5 ಮೀ. ನಷ್ಟು ಅಗಲದ ಸೈಕಲ್‌ ಪಥ ನಿರ್ಮಾಣವಾಗಲಿದೆ. ಸೈಕಲ್‌ ಸವಾರರ ಸುರಕ್ಷತೆ ಖಾತರಿಪಡಿಸುವುದರೊಂದಿಗೆ ಮೋಟರ್‌ ಬೈಕ್‌ಗಳು ಅಲ್ಲಿ ಸಂಚರಿಸದಂತೆ ಕ್ರಮ ವಹಿಸಲಾಗುತ್ತದೆ.

‘ಸೈಕಲ್‌ ಪಥದ ರಸ್ತೆಗಳ ಸರ್ವೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ನಿರ್ಮಾಣ ಶುರುವಾಗಲಿದೆ. ನಗರದ ರಸ್ತೆಗಳು ವಿಶಾಲವಾಗಿದ್ದು, ಬದಿಗಳಲ್ಲೂ ಹೆಚ್ಚಿನ ಜಾಗವಿದೆ. ಹೀಗಾಗಿ ಯೋಜನೆ ಜಾರಿಗೊಳಿಸುವುದು ಕಷ್ಟವಲ್ಲ’ ಎಂದು ಪಾಲಿಕೆ ಉಪ ಆಯುಕ್ತ ಮಹೇಶ್ ಹೇಳಿದರು.

‘ಯೋಜನೆ ಜಾರಿಯಾದರೆ ಸೈಕಲ್‌ ಸವಾರರ ಸುಗಮ ಸಂಚಾರಕ್ಕೆ ನೆರವಾಗಲಿದೆ. ಆದರೆ ಸೈಕಲ್‌ ಪಥದಲ್ಲಿ ಮೋಟರ್‌ ವಾಹನಗಳು ಪ್ರವೇಶಿಸದಂತೆ ತಡೆಯಬೇಕು. ಎಟಿಐ ಮುಂಭಾಗದ ಸೈಕಲ್‌ ಪಥದಲ್ಲಿ ಆಟೊರಿಕ್ಷಾಗಳು ಸಂಚರಿಸುತ್ತವೆ. ಹೊಸ ಪಥಗಳಲ್ಲಿ ಅದಕ್ಕೆ ಅವಕಾಶ ನೀಡಬಾರದು’ ಎಂದು ವಿದ್ಯಾರ್ಥಿ ವಿಶ್ವನಾಥ್
ಆಗ್ರಹಿಸಿದರು.

ಸೈಕಲ್‌ ಬಳಕೆ ಹೆಚ್ಚಳ: ನಗರದಲ್ಲಿ ಸೈಕಲ್‌ ಬಳಕೆದಾರರು ಹೆಚ್ಚುತ್ತಿದ್ದು, ಪ್ರತ್ಯೇಕ ಪಥ ನಿರ್ಮಾಣ
ವಾದರೆ ಹವ್ಯಾಸಿ ಸೈಕ್ಲಿಸ್ಟ್‌ಗಳು, ವಿದ್ಯಾರ್ಥಿಗಳು ಮತ್ತು ನಿತ್ಯ ‘ಟ್ರಿಣ್‌ ಟ್ರಿಣ್‌’ ಸೈಕಲ್‌ ಬಳಸುವವರಿಗೆ ಅನುಕೂಲವಾಗಲಿದೆ. ಕೋವಿಡ್ ಬಳಿಕ ಸೈಕಲ್‌ ಬಳಕೆ ಹೆಚ್ಚಿದೆ. ಆರೋಗ್ಯ ಕಾಪಾಡಲು ನಿತ್ಯ ಸೈಕ್ಲಿಂಗ್‌ ಮಾಡುವವರೂ ಹೆಚ್ಚಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.