ಬುಧವಾರ, ನವೆಂಬರ್ 20, 2019
26 °C

ಅಪಘಾತ: ಒಂದೇ ಕುಟುಂಬದ ಮೂವರ ಸಾವು

Published:
Updated:
Prajavani

ವರುಣಾ (ಮೈಸೂರು): ಇಲ್ಲಿನ ವರಕೋಡು ಗ್ರಾಮದ ಪೇಪರ್‌ಮಿಲ್‌ ಬಳಿ ಶುಕ್ರವಾರ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ, ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರಿನ ಮೂಡಲಪಾಳ್ಯ ನಿವಾಸಿಗಳಾದ ಮೋಹನ್ (50), ಪತ್ನಿ ಉಮಾ (41) ಹಾಗೂ ಪುತ್ರ ಪ್ರಜ್ವಲ್ (22) ಮೃತಪಟ್ಟವರು. ಪುತ್ರಿ ಪ್ರತೀಕ್ಷಾ (19) ತೀವ್ರವಾಗಿ ಗಾಯಗೊಂಡಿದ್ದಾರೆ.

ಇಲ್ಲಿಗೆ ಸಮೀಪದ ದುದ್ದಗೆರೆಯಲ್ಲಿ ಸಂಬಂಧಿಕರೊಬ್ಬರ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ಊಟಿಗೆ ಹೊರಟಿದ್ದರು. ಕಾರು ಚಾಲನೆ ಮಾಡುತ್ತಿದ್ದ ಪ್ರಜ್ವಲ್‌, ಪೇಪರ್‌ಮಿಲ್ ಸಮೀಪದ ಕಡಿದಾದ ತಿರುವಿನಲ್ಲಿ ವಾಹನವೊಂದನ್ನು ಹಿಂದಿಕ್ಕಲು ಯತ್ನಿಸಿದ್ದಾರೆ. ಈ ವೇಳೆ ಮೈಸೂರಿನಿಂದ ಕೊಳ್ಳೇಗಾಲಕ್ಕೆ ಹೊರಟಿದ್ದ ಬಸ್‌ ಡಿಕ್ಕಿ ಹೊಡೆದಿದೆ.  ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿತ್ತು. ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸಪಟ್ಟರು.

‘ಊಟ ಮಾಡಿಕೊಂಡು ಹೋಗಿ ಎಂದರೂ ಕೇಳದೇ ಬಂದರು. ಒಂದು ವೇಳೆ ಊಟ ಮಾಡಿ ಹೊರಟಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ’ ಎಂದು ದುದ್ದಗೆರೆ ಗ್ರಾಮದ ಇವರ ಸಂಬಂಧಿ ಶ್ವೇತಾ ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಪ್ರತಿಕ್ರಿಯಿಸಿ (+)