ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಪ್ರಕರಣ; ಮೂರು ಕಡೆ ಸರಗಳ್ಳತನ

ರಸ್ತೆ ಅಪಘಾತದಲ್ಲಿ ಇಬ್ಬರು ಸಾವು
Last Updated 28 ನವೆಂಬರ್ 2019, 9:56 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಬಿಳಿಕೆರೆ ಮಾದಪ್ಪ ಜಾತ್ರೆಯಲ್ಲಿ ಇಬ್ಬರು ಮಹಿಳೆಯರಿಂದ ಕಳ್ಳರು ಸರ ದೋಚಿದ್ದರೆ, ತಿ.ನರಸೀಪುರದಲ್ಲಿ ಒಬ್ಬ ಮಹಿಳೆ ಸರ ಕಳೆದುಕೊಂಡಿದ್ದಾರೆ.

ಹದಿನಾರು ಗ್ರಾಮದಲ್ಲಿನ ತಮ್ಮ ತಂದೆ ಮನೆಗೆ ಬಂದಿದ್ದ ಮಳವಳ್ಳಿ ತಾಲ್ಲೂಕು ಚಿಕ್ಕೆಬಾಗಿಲು ಗ್ರಾಮದ ನಿವಾಸಿ ಶಿಲ್ಪಾ ಅವರು ಬಿಳಿಕೆರೆ ಮಾದಪ್ಪ ದೇವಸ್ಥಾನಕ್ಕೆ ಹೋಗಿದ್ದಾಗ ಕುತ್ತಿಗೆಯಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳರು ಇವರ ಗಮನಕ್ಕೆ ಬಾರದ ಹಾಗೆ ಕಳವು ಮಾಡಿದ್ದಾರೆ.

ಹದಿನಾರು ಗ್ರಾಮದ ಮಂಗಳಮ್ಮ ಅವರು ತಮ್ಮ ಮನೆಯ ಮುಂದೆ ಬಂದ ಜಾತ್ರಾ ಮಹೋತ್ಸವದ ಮೆರವಣಿಗೆಗೆ ಪೂಜೆ ನೀಡಲು ಹೋದಾಗ ಜನಜಂಗುಳಿ ಮಧ್ಯೆ ಕಳ್ಳರು ಕುತ್ತಿಗೆಯಲ್ಲಿದ್ದ 42 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿದ್ದಾರೆ. ಈ ಎರಡೂ ಪ್ರಕರಣಗಳೂ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

ಮೈಸೂರು ನಗರದ ಆಲನಹಳ್ಳಿ ನಿವಾಸಿ ಲೋಕೇಶ್ವರಿ ಅವರು ತಿ.ನರಸೀಪುರದ ಸಂತೆಮಾಳದ ಬಸ್‌ನಿಲ್ದಾಣದ ಬಳಿ ಬಸ್‌ ಹತ್ತುವಾಗ ಇವರ ಗಮನಕ್ಕೆ ಬಾರದ ಹಾಗೆ ಕಳ್ಳರು ಕುತ್ತಿಗೆಯಲ್ಲಿದ್ದ ₹ 49 ಸಾವಿರ ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿದ್ದಾರೆ. ತಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಅಪಘಾತ; ಇಬ್ಬರ ಸಾವು

ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಅಡಗೂರು ಗ್ರಾಮಕ್ಕೆ ಕೂಲಿ ಕೆಲಸ ಮುಗಿಸಿಕೊಂಡು ಮುಖ್ಯ ರಸ್ತೆಯ ಗೇಟ್‌ನಿಂದ ವಾಪಸ್‌ ಸೈಕಲ್‌ನ್ನು ತಳ್ಳಿಕೊಂಡು ನಡೆದು ಹೋಗುತ್ತಿದ್ದ ಸೋಮಾಚಾರ್ (56) ಹಾಗೂ ಸೋಮಶೇಖರಾಚಾರ್ (55) ಎಂಬುವವರಿಗೆ ಎದುರಿನಿಂದ ಬಂದ ಆಟೊ ಚಾಲಕ ಡಿಕ್ಕಿ ಹೊಡೆದಿದ್ದಾನೆ.

ಇದರಿಂದ ಸ್ಥಳದಲ್ಲೇ ಸೋಮಚಾರ್ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡ ಸೋಮಶೇಖರಾಚಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಆಟೊ ಚಾಲಕ ಮುಕುಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರು ವಾಹನವೊಂದಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಗುರುತು ಹಾಗೂ ವಾಹನ ಪತ್ತೆಯಾಗಿಲ್ಲ. ಇವರು ಸಮೀಪದ ಮುದ್ದಹಳ್ಳಿ– ಕಳಲೆಗೇಟ್‌ ಹಾಗೂ ಅಕ್ಕಪಕ್ಕದ ಗ್ರಾಮಗಳ ಮಧ್ಯೆ ಓಡಾಡಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.35ರಿಂದ 40 ವರ್ಷ ವಯೋಮಾನದ ಪುರುಷ ವ್ಯಕ್ತಿಯಾದ ಇವರ ಕೈಮೇಲೆ ಜಾನ್‌ಸೇನ ಎಂಬ ಇಂಗ್ಲಿಷ್ ಅಕ್ಷರಗಳ ಹಚ್ಚೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಗುರುತು ಪತ್ತೆಯಾದವರು ದೂ: 08221– 226633 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT