ಶನಿವಾರ, ನವೆಂಬರ್ 16, 2019
21 °C
ಬಂಡೀಪುರ: ಮುಕ್ತ ಚರ್ಚೆಯಲ್ಲಿ ಹರಿದುಬಂದ ಅಭಿಪ್ರಾಯ, ಸಲಹೆ

ಹಗಲು ಸಂಚಾರ ನಿಷೇಧ ಪ್ರಸ್ತಾವಕ್ಕೆ ವಿರೋಧ

Published:
Updated:
Prajavani

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು ಕೂಡಾ ವಾಹನ ಸಂಚಾರ ನಿಷೇಧ ಪ್ರಸ್ತಾವಕ್ಕೆ ವಿವಿಧ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

ಎಂಜಿನಿಯರುಗಳ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಬಂಡೀಪುರ ಸಂರಕ್ಷಿತ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸ್ಥಗಿತ– ಒಂದು ಸಂವಾದ’ ಕಾರ್ಯಕ್ರಮದಲ್ಲಿ ಮೈಸೂರು, ಚಾಮರಾಜನಗರ ಮತ್ತು ವಯನಾಡು ಜಿಲ್ಲೆಗಳ ವನ್ಯಜೀವಿ ಪ್ರೇಮಿಗಳು ಮತ್ತು ಪರಿಸರ ಹೋರಾಟಗಾರರು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಯನಾಡು ಜಿಲ್ಲೆಯಿಂದ ಬಂದಿದ್ದವರಲ್ಲಿ ಬಹುತೇಕ ಮಂದಿ ಈಗ ಇರುವ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸಬೇಕು ಎಂಬ ಅಭಿಪ್ರಾಯ ತಿಳಿಸಿದರು. ಮೈಸೂರು, ಚಾಮರಾಜನಗರದ ವನ್ಯಜೀವಿ ಪ್ರೇಮಿಗಳು ಮತ್ತು ಪರಿಸರ ಹೋರಾಟಗಾರರು ರಾತ್ರಿ ಸಂಚಾರ ನಿಷೇಧ ಯಥಾಸ್ಥಿತಿ ಮುಂದುವರಿಯಲಿ ಎಂದರು.

ಆದರೆ ಹಗಲಿನಲ್ಲೂ ವಾಹನ ಸಂಚಾರ ನಿಷೇಧಿಸುವ ಪ್ರಸ್ತಾವವನ್ನು ಎಲ್ಲರೂ ಒಮ್ಮತದಿಂದ ವಿರೋಧಿಸಿದರು. ಕಾಡುಪ್ರಾಣಿಗಳು ಮತ್ತು ಅರಣ್ಯಗಳ ಸಂರಕ್ಷಣೆಗೆ ಒತ್ತುನೀಡುವ ವೇಳೆ ಈ ಭಾಗದ ಜನರ ಹಿತಾಸಕ್ತಿಯನ್ನೂ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟರು.

ಮೇಜರ್‌ ಜನರಲ್‌ ಎಸ್‌.ಜಿ.ಒಂಬತ್ಕೆರೆ ಮಾತನಾಡಿ, ವಾಹನ ಸಂಚಾರ ನಿಷೇಧ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಯಾವುದೇ ಆದೇಶ ನೀಡಿಲ್ಲ. ಈಗ ಇರುವ ವಿವಾದಕ್ಕೆ ಪರಿಹಾರ ಹುಡುಕುವಂತೆ ತಿಳಿಸಿ ಸಂಬಂಧಪಟ್ಟವರ ಅಭಿಪ್ರಾಯ ಕೇಳಿದೆ. ಆದ್ದರಿಂದ ಸುಪ್ರೀಂಕೋರ್ಟ್‌ ನಿಲುವನ್ನು ಗೌರವಿಸಬೇಕಿದೆ ಎಂದರು.

ಈ ವಿವಾದವು ಮೈಸೂರು, ಚಾಮರಾಜನಗರ ಅಲ್ಲದೆ ಕೇರಳದ ವಯನಾಡು, ಮಲಪ್ಪುರಂ ಮತ್ತು ಕೋಯಿಕ್ಕೋಡ್‌ ಜಿಲ್ಲೆಗಳ ಜನರಿಗೆ ಸಂಬಂಧಿಸಿದ್ದಾಗಿದೆ. ಎಲ್ಲರೂ ಜತೆಗೆ ಕುಳಿತು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ತ್ಯಾಗ ಮಾಡಬೇಕು: ಬಂಡೀಪುರ ರಾತ್ರಿ ಸಂಚಾರ ನಿಷೇಧ ವಿಚಾರದಲ್ಲಿ ಕೇರಳದವರು ಅಲ್ಪ ತ್ಯಾಗ ಮಾಡಬೇಕು. ಸಂಚಾರ ನಿಷೇಧ ಆರಂಭವಾಗಿ 10 ವರ್ಷಗಳು ಕಳೆದಿವೆ. ಈ ನಿಷೇಧ ಮುಂದುವರಿಯಲಿ ಎಂದು ವನ್ಯಜೀವಿ ವಾರ್ಡನ್ ರಾಜ್‌ಕುಮಾರ್‌ ತಿಳಿಸಿದರು.

ಗುಂಡ್ಲುಪೇಟೆಯ ಸುಭಾಷ್‌ ಮಾತನಾಡಿ, ಹಗಲು ವಾಹನ ಸಂಚಾರ ನಿಷೇಧಿಸಿದರೆ ಗುಂಡ್ಲುಪೇಟೆ ತಾಲ್ಲೂಕಿನ ಕೃಷಿ, ವಾಣಿಜ್ಯ ಒಳಗೊಂಡಂತೆ ಎಲ್ಲ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಂಡೀಪುರ ಹೆದ್ದಾರಿ ಮೂಲಕ ಪ್ರತಿದಿನ 5 ರಿಂದ 6 ಸಾವಿರ ಟನ್‌ ತರಕಾರಿ ಕೇರಳಕ್ಕೆ ಸಾಗಿಸಾಗುತ್ತದೆ. ಗುಂಡ್ಲುಪೇಟೆ ಹಾಗೂ ಸುತ್ತಮುತ್ತಲು ಬೆಳೆಯುವ ತರಕಾರಿಯಲ್ಲಿ ಶೇ 80 ರಷ್ಟನ್ನು ಕೇರಳದವರು ಕೊಂಡುಕೊಳ್ಳುತ್ತಾರೆ ಎಂದರು.

ವಯನಾಡು ಜಿಲ್ಲೆಯ ವಕೀಲ ಪಿ.ಸಿ.ಗೋಪಿನಾಥ್‌ ಮಾತನಾಡಿ, ವಯನಾಡು ಜಿಲ್ಲೆ ನಾಲ್ಕು ಕಡೆಗಳಿಂದಲೂ ಕಾಡುಗಳಿಂದ ಆವೃತವಾಗಿದೆ. ಜಿಲ್ಲೆಯ ಜನರು ತುರ್ತು ವೈದ್ಯಕೀಯ ಸೇವೆಗೆ ಮೈಸೂರನ್ನು ಅವಲಂಬಿಸಿದ್ದಾರೆ. ರಾತ್ರೋರಾತ್ರಿ ರೋಗಿಗಳನ್ನು ತುರ್ತಾಗಿ ಮೈಸೂರಿಗೆ ಕರೆತರಬೇಕಾದರೆ ಈಗಿನ ನಿಷೇಧ ಅಡ್ಡಿಯಾಗಿದೆ. ರಾತ್ರಿ ಸಂಚಾರ ನಿಷೇಧ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ಆರಂಭದಲ್ಲಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕ ಆರ್‌.ಲಕ್ಷ್ಮಣ, ರಾತ್ರಿ ಸಂಚಾರ ಸ್ಥಗಿತದಿಂದ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಕೆಲವು ಜಿಲ್ಲೆಗಳ ಮೇಲೆ ಆಗಿರುವ ಪರಿಣಾಮ ಮತ್ತು ಹಗಲು ವಾಹನ ಸಂಚಾರ ನಿಷೇಧ ಪ್ರಸ್ತಾವದ ಬಗ್ಗೆ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಲು ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.

ಪ್ರತಿಕ್ರಿಯಿಸಿ (+)