ಮಂಗಳವಾರ, ಜನವರಿ 18, 2022
23 °C

ಮೈಸೂರಿನ ಶಕ್ತಿಧಾಮಕ್ಕೆ ಶಿವರಾಜ್‌ಕುಮಾರ್‌ ಭೇಟಿ; ಮಕ್ಕಳೊಂದಿಗೆ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಡಾ.ರಾಜ್‌ಕುಮಾರ್‌ ಕುಟುಂಬ ಇಲ್ಲಿ ನಡೆಸುತ್ತಿರುವ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರ ಶಕ್ತಿಧಾಮದಲ್ಲಿ ಶಾಲೆ ನಿರ್ಮಿಸಲಾಗುವುದು’ ಎಂದು ನಟ ಶಿವರಾಜ್‌ಕುಮಾರ್‌ ಹೇಳಿದರು.

ನಟ ಪುನೀತ್‌ ರಾಜ್‌ಕುಮಾರ್ ನಿಧನದ ಬಳಿಕ ಮೊದಲ ಬಾರಿಗೆ ಶಕ್ತಿಧಾಮಕ್ಕೆ ಪತ್ನಿ ಗೀತಾ ಅವರೊಂದಿಗೆ ಶುಕ್ರವಾರ ಭೇಟಿ ನೀಡಿದ ಅವರು ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಟ್ರಸ್ಟಿಗಳ ಜತೆ ಸಭೆ ನಡೆಸಿದರು.

ಬಳಿಕ ಮಾಧ್ಯಮದವರ ಜತೆ ಮಾತನಾಡಿ, ‘ಶಕ್ತಿಧಾಮ ಪುನರ್ವಸತಿ ಕೇಂದ್ರವನ್ನು ಉತ್ತಮವಾಗಿ  ನಡೆಸಬೇಕು. ದುರ್ಬಳಕೆಯಾಗಬಾರದು. ಶಾಲೆ ನಿರ್ಮಾಣ ಸಂಬಂಧ ಚರ್ಚಿಸಲು ಈಗಾಗಲೇ ಒಂದು ಸುತ್ತಿನ ಸಭೆ ನಡೆಸಲಾಗಿದೆ. 2–3 ವಾರಗಳಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ನೋವು ಕಡಿಮೆಯಾಗದು: ‘ಅಪ್ಪು ನಿಧನದಿಂದ ಆಗಿರುವ ಮಾನಸಿಕ ನೋವು ಕಡಿಮೆ ಆಗಲ್ಲ. ಯಾವ ಕಾಲಕ್ಕೂ ಮಾಸಿ ಹೋಗದು. ನೋವಿನೊಂದಿಗೆ ತಮ್ಮನನ್ನು ಜೀವಂತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ. ಅಳುತ್ತಾ ಕೂತರೆ ಅಪ್ಪುವನ್ನು ಕಳೆದುಕೊಂಡು ಬಿಡುತ್ತೇವೆ. ಅವನನ್ನು ಜತೆಯಲ್ಲಿಟ್ಟುಕೊಂಡು ಬದುಕಬೇಕು’ ಎಂದು ಹೇಳಿದರು.

‘ಅಪ್ಪು ಅಭಿಯನದ ಜೇಮ್ಸ್ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಪುನೀತ್‌ ಪಾತ್ರಕ್ಕೆ ಒಳ್ಳೆಯ ಧ್ವನಿ ನೀಡುವವರನ್ನು ನೋಡಿ ಎಂದಿದ್ದಾರೆ. ನನ್ನ ಧ್ವನಿ ಅಪ್ಪು ಧ್ವನಿಗೆ ಸರಿ ಹೊಂದಲ್ಲ. ಅನಿವಾರ್ಯ ಎನ್ನುವುದಾದರೆ ಧ್ವನಿ ನೀಡಲು ಸಿದ್ಧ’ ಎಂದು ನುಡಿದರು.

‘ಭಜರಂಗಿ–2’ ವೀಕ್ಷಣೆ: ನಗರದ ಉಡ್‌ಲ್ಯಾಂಡ್ಸ್ ಸಿನಿಮಾ ಮಂದಿರಕ್ಕೆ ಭೇಟಿ ನೀಡಿದ ಅವರು ಅಭಿಮಾನಿಗಳೊಂದಿಗೆ ಭಜರಂಗಿ-2 ಚಿತ್ರ ವೀಕ್ಷಿಸಿದರು.

ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಅಭಿಮಾನಿಗಳು, ಅಪ್ಪು ಮತ್ತು ಶಿವಣ್ಣನಿಗೆ ಜೈಕಾರ ಕೂಗಿದರು. ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ನೆಚ್ಚಿನ ನಟನ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು