ಶನಿವಾರ, ಸೆಪ್ಟೆಂಬರ್ 24, 2022
21 °C

ಯುವಜನೋತ್ಸವಕ್ಕೆ ಯಶ್‌ ಬರದಿದ್ದರೆ ಬಿಜೆಪಿಗೆ ಕಲ್ಲೇಟು ಬೀಳುತ್ತಿತ್ತು- ಕೆಪಿಸಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಯುವಜನೋತ್ಸವಕ್ಕೆ ಚಲನಚಿತ್ರ ನಟ ಯಶ್‌ ಬರದಿದ್ದರೆ, ಯುವಕರಿಗೆ ಉದ್ಯೋಗ ಸೃಷ್ಟಿಸದ ಬಿಜೆಪಿ ಸರ್ಕಾರದ ನಾಯಕರಿಗೆ ಕಲ್ಲೇಟು ಬೀಳುತ್ತಿತ್ತು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅಭಿಪ್ರಾಯಪಟ್ಟರು. 

‘ಕಾಲೇಜುಗಳಿಗೆ ರಜೆ ನೀಡಿ ವಿದ್ಯಾರ್ಥಿಗಳನ್ನು ಉತ್ಸವಕ್ಕೆ ಕರೆ ತರಲಾಗಿತ್ತು. ಯುವ ಜನರ ಸಮಸ್ಯೆ ಬಗೆಹರಿಸುವ ಮಾತುಗಳನ್ನು ಸಿ.ಎಂ ಹೇಳಲಿಲ್ಲ. ವಿದ್ಯಾರ್ಥಿ ವೇತನವನ್ನೇ ಸಮರ್ಪಕವಾಗಿ ವಿತರಿಸದ ಸರ್ಕಾರದಿಂದ ಉದ್ಯೋಗ ಸೃಷ್ಟಿ ಸಾಧ್ಯವೇ’ ಎಂದು ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. 

‘ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಗಾಂಧಿ– ನೆಹರೂ– ಅಂಬೇಡ್ಕರ್‌ ಭಾವಚಿತ್ರಗಳನ್ನು ಎಲ್ಲಿಯೂ ಬಳಸಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ನೆನಪಿಸುವ ಕೆಲಸವನ್ನು ಮಾಡುತ್ತಿಲ್ಲ’ ಎಂದು ದೂರಿದರು. 

‌‘ಬಿಜೆಪಿ ನಾಯಕರ ಆದರ್ಶಗಳಾದ ಹಿಂದೂ ಮಹಾಸಭಾದ ವಿ.ಡಿ.ಸಾವರ್ಕರ್‌, ಆರ್‌ಎಸ್‌ಎಸ್‌ನ ಗೋಳ್ವಲ್ಕರ್ ರಾಷ್ಟ್ರಧ್ವಜವನ್ನು ಒಪ್ಪಿಕೊಂಡಿಲ್ಲ. ಆದರೆ, ಹರ್‌ಘರ್ ತಿರಂಗಾ ಅಭಿಯಾನಕ್ಕೆ ಬಿಜೆಪಿ ಸರ್ಕಾರವು ಜನರಿಂದ ಬ್ಯಾಂಕ್‌, ಅಂಚೆ ಕಚೇರಿ ಮೂಲಕ ₹ 20 ವಸೂಲು ಮಾಡುತ್ತಿದೆ’ ಎಂದು ಆರೋಪಿಸಿದರು. 

‘ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳುತ್ತಲೇ ಇದ್ದ ಬಿಜೆಪಿ ನಾಯಕರು ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಇದೀಗ ಅವರನ್ನೂ ಬದಲಾಯಿಸಿ ಅಧಿಕಾರ ಹಿಡಿಯುವ ಕನಸನ್ನು ಕಾಣುತ್ತಿದ್ದಾರೆ’ ಎಂದರು. 

ತೀರ್ಪಿಗೆ ಸ್ವಾಗತ: ‘ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಪಡಿಸಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಕಾಂಗ್ರೆಸ್‌ ಸ್ವಾಗತಿಸುತ್ತದೆ. ಲೋಕಾಯುಕ್ತಕ್ಕೆ ಎಫ್‌ಐಆರ್‌ ದಾಖಲಿಸುವ, ಆರೋಪಿಗಳನ್ನು ಬಂಧಿಸುವ ಅಧಿಕಾರ ಇರಲಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಸರ್ಕಾರ ಎಸಿಬಿ ರಚಿಸಿತ್ತು’ ಎಂದರು.

ಗೋಷ್ಠಿಯಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಶಿವಣ್ಣ, ಮಹೇಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು